ಕುಂದಾಪುರ: ಮೊಬೈಲ್ ಆ್ಯಪ್‌ನಲ್ಲಿ ಮಾಡಿಕೊಂಡ ಸಾಲ ತೀರಿಸಲಾಗದೆ ಡೆತ್ ನೋಟ್ ಬರೆದಿಟ್ಟು ಬೆಂಗಳೂರಿನ ಸಾಫ್ಟ್‌ವೇರ್ ಕಂಪೆನಿ ಉದ್ಯೋಗಿಯಾಗಿದ್ದ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೆಮ್ಮಾಡಿ ಸಮೀಪದ ಹರೆಗೋಡಿನಲ್ಲಿ ಗುರುವಾರ ಸಂಭವಿಸಿದೆ.
ಹರೆಗೋಡು ಕೊಳಹಿತ್ಲು ನಿವಾಸಿ ಸಂಜೀವ ದೇವಾಡಿಗ ಅವರ ಪುತ್ರ ವಿಫ್ನೇಶ್ (24) ಆತ್ಮಹತ್ಯೆ ಮಾಡಿಕೊಂಡ ಯುವಕ.
ಬುಧವಾರ ರಾತ್ರಿ ಮನೆಯಲ್ಲಿ ಊಟ ಮುಗಿಸಿ ಮಲಗಿದ್ದ ವಿಫ್ನೇಶ್ ಗುರುವಾರ ಬೆಳಗ್ಗೆ ವೇಳೆಗೆ ಆತ್ಮಹತ್ಯೆ ಮಾಡಿಕೊಂಡಿರಬಹುದು. ವಿಫ್ನೇಶ್ ಅಜ್ಜ ಹೆರಿಯ ದೇವಾಡಿಗ ಅವರು ಬೆಳಗ್ಗೆ ಎದ್ದು ನೋಡುವಾಗ ಮನೆಯ ಬಾಗಿಲು ತೆರೆದಿತ್ತು. ಅನುಮಾನಗೊಂಡು ಹುಡು ಕಾಡಿದಾಗ ಮನೆ ಸಮೀಪ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಡೆತ್‌ನೋಟ್ ಪತ್ತೆ:
ವಿಘ್ನೇಶ್ ಬರೆದಿಟ್ಟ ಡೆತ್‌ನೋಟ್ ಪತ್ತೆಯಾಗಿದ್ದು, “ನನ್ನ ಸಾವಿಗೆ ನಾನು ಮಾಡಿಕೊಂಡಿರುವ ಸಾಲ ಕಾರಣ. ಮೊಬೈಲ್ ಆ್ಯಪ್‌ನಲ್ಲಿ ಮಾಡಿದ ಸಾಲ ತೀರಿಸಲು ಆಗುತ್ತಿಲ್ಲ. ಆದ್ದರಿಂದ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಸಾಲ ಇದೆ, ಕಟ್ಟಿ ಎಂದು ಯಾರಾದರೂ ಕರೆ ಮಾಡಿದರೆ ಅವನು ನಮಗೆ ಗೊತ್ತಿಲ್ಲ ಅಥವಾ ಸತ್ತು ಹೋದ ಎಂದು ಹೇಳಿ ಬಿಡಿ. ಎಲ್ಲರಿಗೂ ಮೋಸ ಮಾಡಿ ಹೋಗುತ್ತಿದ್ದೇನೆ. ಕ್ಷಮಿಸಿ ಬಿಡಿ. ಶುಕ್ರವಾರ ಸಂಬಳ ಬರುತ್ತದೆ. ಕಚೇರಿ ಕೆಲಸ ಮಾಡುವವನ ನಂಬರ್ ಇದೆ. ಕಾಲ್ ಮಾಡಿ ತಿಳಿಸಿ ಬಿಡಿ’ ಎನ್ನುವುದಾಗಿ ಪತ್ರದಲ್ಲಿ ಬರೆದಿದ್ದಾರೆ. ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೊಬೈಲ್ ಆ್ಯಪ್‌ನಲ್ಲಿ ಸಾಲ? :
ಸಂಜೀವ ಹಾಗೂ ಕನಕ ದಂಪತಿಯ ನಾಲ್ವರು ಮಕ್ಕಳಲ್ಲಿ ಎರಡನೆಯವರಾದ ವಿಫ್ನೇಶ್‌ಬೆಂಗಳೂರಿನ ಕಂಪೆನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಮೊದಲ ಲಾಕ್‌ಡೌನ್ ವೇಳೆ ಊರಿಗೆ ಬಂದಿದ್ದು, ಬಳಿಕ ವರ್ಕ್ ಫ್ರಂ ಹೋಂನಡಿ ಮನೆಯಿಂದ ಕೆಲಸ ಮಾಡುತ್ತಿದ್ದರು. ಜತೆಗೆ ವರ್ಷದ ಹಿಂದೆ ಸ್ನೇಹಿತರೊಂದಿಗೆ ಸೇರಿ ಬ್ರಹ್ಮಾವರ ಸಮೀಪ ಚಪ್ಪಲಿ ಹೋಲ್‌ಸೇಲ್ ಶೋರೂಂ ಶುರು ಮಾಡಿದ್ದರು. ಉದ್ಯಮಕ್ಕೆ ಬಂಡವಾಳ ಹಾಕುವ ಉದ್ದೇಶದಿಂದ ಮೊಬೈಲ್ ಆ್ಯಪ್ ಮೂಲಕ ಸಾಲ ಪಡೆದಿದ್ದರು ಎನ್ನಲಾಗಿದೆ. ಲಾಕ್‌ಡೌನ್ ಕಾರಣದಿಂದ ಆರಂಭಿಸಿದ ವ್ಯವಹಾರ ನಿರೀಕ್ಷಿಸಿದಷ್ಟು ಯಶಸ್ಸು ಸಿಗದ ಕಾರಣ ಸಾಲ ತೀರಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಆ್ಯಪ್ ಮೂಲಕ ಸಾಲ ಕೊಟ್ಟವರು ಕಿರುಕುಳ ನೀಡಿದ್ದರಿಂದ ವಿಘ್ನೇಶ್ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗಿದೆ.