Advertisement

ಕುರಿ ಸಾಕಾಣಿಕೆ, ಆರ್ಥಿಕ ಪ್ರಗತಿಯತ್ತ ಸ್ವಾಭಿಮಾನಿ ಹೆಜ್ಜೆ

02:45 PM Nov 20, 2020 | Suhan S |

ಮಧುಗಿರಿ: ಕುಟುಂಬ ನಿರ್ವಹಣೆಗಾಗಿ ಹಲವು ಕೆಲಸ ಮಾಡಿದ್ದರೂ, ಸ್ವಾಭಿಮಾನದ ಬದುಕಿನತ್ತ ಹೆಜ್ಜೆ ಹಾಕಿದ ಯುವಕನೊಬ್ಬ, ಇಂದು ಮೇಕೆ-ಕುರಿ ಸಾಕಣೆ ಮಾಡುತ್ತ, ಮಾಂಸೋದ್ಯಮದಲ್ಲಿ ಯಶಸ್ವಿ ಹೆಜ್ಜೆಯನ್ನು ಇಡುತ್ತಿದ್ದಾರೆ.

Advertisement

ತಾಲೂಕಿನ ಸಿದ್ದಾಪುರ ಗ್ರಾಮದ ರವಿನಂದನ್‌ ಈ ಸ್ವಾಭಿಮಾನದ ಹೆಜ್ಜೆಯಿಟ್ಟಿದ್ದು, ಇತರೆ ಯುವಕರಿಗೆ ಮಾದರಿಯಾಗಿದ್ದಾರೆ. ಮೂಲತಃ ಅರ್ಚಕರ ಕುಟುಂಬದಲ್ಲಿ ಜನಿಸಿದ ರವಿನಂದನ್‌, ತಂದೆ ಇರುವವರೆಗೂ ಬೇರೆ ಕೆಲಸದಲ್ಲಿದ್ದರು. ದ್ವಿತೀಯ ಪಿಯೂಸಿವರೆಗೂ ವಿದ್ಯಾಭ್ಯಾಸ ಮಾಡಿ ಕುಟುಂಬ ನಿರ್ವಹಣೆಗಾಗಿ ತಂದೆಯ ನಂತರ ವ್ಯವಸಾಯದತ್ತ ಮುಖ ಮಾಡಿದರು.

3 ಎಕರೆ ಭೂಮಿಯಲ್ಲಿ ಬಾಳೆ, ಅಡಿಕೆಯನ್ನು ನಾಟಿ ಮಾಡಿರುವ ಇವರು ವರ್ಷದ ಲಾಭಕ್ಕಾಗಿ ಕಾಯದೆ ಇರುವ ಭೂಮಿಯಲ್ಲಿ 6 ತಿಂಗಳ ಹಿಂದೆ ಮೇಕೆ-ಕುರಿ ಫಾರಂ ಮಾಡಿದರು. ಮೊದಲು 30 ಜಾನುವಾರುಗಳಿಂದಆರಂಭವಾದ ಈ ಕಸುಬು ಹೆಚ್ಚಿನ ಲಾಭ ತಂದು ಕೊಟ್ಟಿದೆ. ಸರಾಸರಿಯಂತೆ 30 ಸಾವಿರಕ್ಕೆ 25 ಕುರಿಮರಿಗಳನ್ನು ಖರೀದಿಸಿದ್ದ ರವಿ 3 ತಿಂಗಳಿಗೆ ಕೇವಲ 4 ಕುರಿಯನ್ನು 40 ಸಾವಿರಕ್ಕೆ ಮಾರಿದ್ದರು. ಅವುಗಳ ನಂತರ ಈಗ 3 ವಿವಿಧ ಜಾತಿಯ ಮೇಕೆಗಳನ್ನು ಸಾಕುತ್ತಿದ್ದು, 58 ಜಾನುವಾರುಗಳಿವೆ. ಅದರಲ್ಲಿ ಬೋಯಾರ್‌, ತಲಚೇರಿ, ಹಾಗೂ ಸಿರೂಮಿ ಎಂಬ ಜಾತಿಯ ಮೇಕೆಗಳನ್ನು ಸಾಕುತ್ತಿದ್ದು, ಅವುಗಳ ಮಾಂಸಕ್ಕೆ ಭಾರಿ ಬೇಡಿಕೆಯಿದೆ. ಇದನ್ನರಿತ ಸ್ಥಳೀಯರು ಈ ಮೇಕೆಗಳಿಂದ ಗರ್ಭ ಧರಿಸಲು ಅವರ ಮೇಕೆಗಳನ್ನು ಇಲ್ಲಿಗೆ ಕರೆತರುತ್ತಾರೆ. ಒಮ್ಮೆಗೆ 2-3 ಸಾವಿರ ವೆಚ್ಚವಾಗಲಿದೆ. ಅದೂ ಲಾಭದಾಯಕವೇ ಆಗಿದೆ.

ಕುರಿ- ಮೇಕೆಗಳ ಪೋಷಣೆ ದಿನಚರಿ :  ರಾತ್ರಿ ಕತ್ತರಿಸಿ ತಂದ ಶ್ಯಾಡೆಸೊಪ್ಪನ್ನು ಬೆಳಗ್ಗೆ ಕುರಿ-ಮೇಕೆಗಳಿಗೆ ಹಾಕಲಿದ್ದು, 11 ಗಂಟೆಗೆ ಒಣಗಿದ ಶೇಂಗಾ ಗಿಡವನ್ನು ಕೊಡುತ್ತಾರೆ. ಮದ್ಯಾಹ್ನ ಒಮ್ಮೆ ಕತ್ತರಿಸಿದ ಜೋಳ, ಸಂಜೆ 4 ಕ್ಕೆ 10 ಕೆ.ಜಿ. ಯಷ್ಟು ಜೋಳವನ್ನು ಕೈ ತಿಂಡಿಯಾಗಿ ನೀಡುತ್ತಾರೆ. ರಾತ್ರಿಗೆ ಮತ್ತೆ ಶೇಂಗಾದ ಒಣಗಿದ ಮೇವನ್ನುಕೊಡುತ್ತಿದ್ದಾರೆ. ಇರುವ ಜಮೀನಿನಲ್ಲಿ 2 ಕೊಳವೆಬಾವಿಯಿದ್ದು, ಸಾಕಷ್ಟು ನೀರು ಲಭ್ಯವಿದ್ದು, ಕುರು ಸಾಕಣೆಗೆ ಬೇಕಾಗುವ ಮೇವನ್ನು ಅಡಿಕೆ, ಬಾಳೆಯ ಮಧ್ಯದಲ್ಲೇ ಮಿಶ್ರಬೆಳೆಯಾಗಿ ಬೆಳೆಯುತ್ತಾರೆ. ವಾರಕ್ಕೊಮ್ಮೆ ಜಾನುವಾರುಗಳಿಗೆ ಆರೋಗ್ಯ ತಪಾಸಣೆ ಮಾಡಿಸುತ್ತಿದ್ದು, ರಾತ್ರಿಯಲ್ಲಿ ಕಳ್ಳರ ಭಯದಿಂದಾಗಿ ಫಾರಂನಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ ಎನ್ನುತ್ತಾರೆ ರವಿಚಂದನ್‌.

Advertisement

ಸ್ವಾಭಿಮಾನದಿಂದ ಬದುಕುವ ಛಲ ಮುಖ್ಯ, ಆಳಾಗಿ ದುಡಿಯುವ ಮನಸ್ಸಿದ್ದರೆ ಬದುಕನ್ನು ಸಂಭ್ರಮಿಸಬಹುದು. ನಾನೀಗ ಮೇಕೆ-ಕುರಿ ಸಾಕಾಣಿಕೆಯನ್ನು ಮುಂದುವರಿಸಿದ್ದು, ಆರ್ಥಿಕವಾಗಿ ಲಾಭ ನೋಡಿದ್ದೇನೆ. ಇತರೆಯುವಕರೂ ಈ ಕಾರ್ಯಕ್ಕೆ ಮುಂದಾದರೆ ಸಲಹೆ ನೀಡುತ್ತೇನೆ. ರವಿನಂದನ್‌, ಯುವ ರೈತ, ಸಿದ್ದಾಪುರ

ಕುರಿ-ಮೇಕೆ ಸಾಕಾಣಿಕೆಗೆ ಸರ್ಕಾರ ಪಶುಭಾಗ್ಯ, ನಬಾರ್ಡ್‌ನಿಂದ ಸಾಲದ ವ್ಯವಸ್ಥೆಯಿದೆ. ಸಾಕಷ್ಟು ಪಶುಚಿಕಿತ್ಸಾಲಯ ಗಳಿದ್ದು, ರೋಗ ನಿವಾರಣೆ ಸುಲಭ. ವಿಮೆ ಮಾಡಿಸಿದರೆ ಆಕಸ್ಮಿಕ ಅಪಾಯದ ಆರ್ಥಿಕ ನಷ್ಟವನ್ನು ತಪ್ಪಿಸಬಹುದು. ಡಾ.ನಾಗಭೂಷಣ್‌, ಮಧುಗಿರಿ ಪಶುಇಲಾಖೆ ಸಹಾಯಕ ನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next