ಬೆಂಗಳೂರು : ಪ್ರವಾಸಿ ಆಸ್ಟ್ರೇಲಿಯ ಕ್ರಿಕೆಟ್ ತಂಡದೆದುರು ದಯನೀಯ ಸೋಲು ಕಂಡ ಪುಣೆ ಟೆಸ್ಟ್ ಪಂದ್ಯದಲ್ಲಿನ ಕಳಪೆ ನಿರ್ವಹಣೆ ಸಂಕಲ್ಪದ ಕೊರತೆಯ ಆಟವನ್ನು ತನ್ನ ತಂಡ ಬೆಂಗಳೂರು ಪಂದ್ಯದಲ್ಲಿ ಪುನರಾವರ್ತಿಸುವುದಿಲ್ಲ ಎಂಬ ಭರವಸೆಯನ್ನು ಭಾರತೀಯ ಕ್ರಿಕೆಟ್ ತಂಡ ಕಪ್ತಾನ ವಿರಾಟ್ ಕೊಹ್ಲಿ ನೀಡಿದ್ದಾರೆ.
ಪುಣೆಯಲ್ಲಾದ ಮೊದಲ ಟೆಸ್ಟ್ ಪಂದ್ಯವನ್ನು ಭಾರತ 333 ರನ್ ಭಾರೀ ಅಂತರದಲ್ಲಿ ದಯನೀಯವಾಗಿ ಸೋತಿತ್ತು. ಅದರೊಂದಿಗೆ ಭಾರತದ ಸೋಲರಿಯದ 19 ಟೆಸ್ಟ್ ಪಂದ್ಯಗಳ ದಾಖಲೆ ಮುರಿದು ಹೋಗಿತ್ತು.
ಪುಣೆ ಟೆಸ್ಟ್ ಪಂದ್ಯದಲ್ಲಿನ ನಮ್ಮ ತಪ್ಪುಗಳಿಂದ ನಾವು ಪಾಠ ಕಲಿತುಕೊಂಡಿದ್ದೇವೆ; ಇನ್ನೆಂದೂ ಆ ರೀತಿಯ ಕಳಪೆ ನಿರ್ವಹಣೆಯನ್ನು, ಸಂಕಲ್ಪವೇ ಇಲ್ಲದ ಆಟವನ್ನು ಪ್ರದರ್ಶಿಸುವುದಿಲ್ಲ ಎಂದು ಕೊಹ್ಲಿ ಬೆಂಗಳೂರಿನಲ್ಲಿ ಮಾ.4ರಿಂದ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯಕ್ಕೆ ಮುಂಚಿತವಾಗಿ ಹೇಳಿದ್ದಾರೆ.
ಸೋಲನ್ನು ಒಪ್ಪಿಕೊಳ್ಳುವುದು ಮುಖ್ಯ. ಒಂದು ಪಂದ್ಯ ಸೋತಿದ್ದೇವೆ ಎಂದ ಮಾತ್ರಕ್ಕೆ ಮುಂದಿನ ಪಂದ್ಯಗಳನ್ನೂ ಸೋಲುತ್ತೇವೆ ಎಂದು ಯಾರೂ ಭಾವಿಸಬಾರದು. ಆಸ್ಟ್ರೇಲಿಯ ನಮಗಿಂತ ಚೆನ್ನಾಗಿ ಆಡಿ ಪಂದ್ಯವನ್ನು ಗೆದ್ದಿತು ಎನ್ನುವುದೇ ಸರಿ. ನಮ್ಮ ನಿರ್ವಹಣೆ ಕಳಪೆಯಾಗಿತ್ತು; ನಮ್ಮ ಆಟದಲ್ಲಿ ಗೆಲ್ಲುವ ಸಂಕಲ್ಪದ ಕೊರತೆ ಇತ್ತು; ಹಾಗಾಗಿ ನಾವು ಸೋತೆವು. ಅತಿಯಾದ ಸ್ವಾಭಿಮಾನದಿಂದ ವಾಸ್ತವವನ್ನು ನಾವು ನಿರ್ಲಕ್ಷಿಸಿದರೆ ಅದರಿಂದ ಅಪಾಯ ಖಂಡಿತ ಎಂದು ಕೊಹ್ಲಿ ಹೇಳಿದರು.
ಕೆಲವೊಮ್ಮೆ ಇಂತಹ ಸೋಲುಗಳು ಅಗತ್ಯವಾಗುತ್ತವೆ. ಅದು ನಮಗೆ ನಮ್ಮ ತಪ್ಪುಗಳನ್ನು ತಿಳಿದುಕೊಳ್ಳುವ ವೇದಿಕೆಯಾಗುತ್ತದೆ. ಇಡಿಯ ತಂಡವೇ ಉತ್ತಮ ನಿರ್ವಹಣೆ ತೋರುವಲ್ಲಿ ವಿಫಲವಾಗುವ ಉದಾಹರಣೆಗಳು ತೀರ ವಿರಳ; ಪುಣೆಯಲ್ಲಿ ಆದದ್ದೇ ಅದು; ಅಂತೆಯೇ ಅದು ಮುಂದಿನ ಪಂದ್ಯಗಳಲ್ಲಿ ಪುನರಾವರ್ತನೆಯಾಗುವ ಪ್ರಶ್ನೆಯೇ ಇಲ್ಲ ಎಂದು ಕೊಹ್ಲಿ ಹೇಳಿದರು.