Advertisement

ಇಲ್ಲಿ ಮಾಸ್ಕ್ ಧರಿಸದಿದ್ದರೆ ಜೈಲು

05:10 PM May 21, 2020 | sudhir |

ದುಬಾೖ: ಕೋವಿಡ್‌-19 ಸೋಂಕಿಗೆ ಒಳಗಾಗುವುದನ್ನು ತಪ್ಪಿಸಲು ಮಾಸ್ಕ್ ಧರಿಸಬೇಕೆಂದು ಎಲ್ಲ ದೇಶಗಳೂ ಹೇಳುತ್ತಿವೆ. ಆದರೆ ಕೆಲವು ದೇಶಗಳಲ್ಲಿ ಜನರು ಈ ಸೂಚನೆಯನ್ನು ಸಾರಾಸಗಟಾಗಿ ಉಲ್ಲಂಘಿಸುತ್ತಿರುವುದು ಕಾಣಿಸುತ್ತಿದೆ. ಕೆಲವು ದೇಶಗಳಲ್ಲಂತೂ ಜನರು ಮಾಸ್ಕ್ ಧರಿಸುವುದು ಒಂದು ಶಿಕ್ಷೆ ಎಂಬಂತೆ ಭಾವಿಸುತ್ತಿದ್ದಾರೆ. ಆದರೆ ಕುವೈಟ್‌ ಮತ್ತು ಕತಾರ್‌ನಲ್ಲಿ ಮಾಸ್ಕ್ ಧರಿಸದಿದ್ದರೆ ನಿಜವಾಗಿಯೂ ಶಿಕ್ಷೆ ಅನುಭವಿಸಬೇಕು.

Advertisement

ಕುವೈಟ್‌ನಲ್ಲಿ ಸಾರ್ವಜನಿಕ ವಾಗಿ ಕಾಣಿಸಿಕೊಳ್ಳುವಾಗ ಮಾಸ್ಕ್ ಧರಿಸಿಕೊಳ್ಳುವುದು ಕಡ್ಡಾಯ. ಒಂದು ವೇಳೆ ಈ ನಿಯಮ ಉಲ್ಲಂಘಿಸಿದರೆ ಮೂರು ತಿಂಗಳ ಜೈಲುವಾಸ ಅನುಭವಿಸಬೇಕು ಹಾಗೂ ದಂಡವನ್ನೂ ತೆರಬೇಕು. ಈ ಕುರಿತು ದೇಶದ ಆರೋಗ್ಯ ಇಲಾಖೆ ಪ್ರಕಟನೆ ಹೊರಡಿಸಿದೆ.

ಇದೇ ವೇಳೆ ಕತಾರ್‌ನಲ್ಲಿ ಮಾಸ್ಕ್ ಧರಿಸದಿದ್ದರೆ ಶಿಕ್ಷೆ ಇನ್ನೂ ಉಗ್ರವಾಗಿದೆ. ಇಲ್ಲಿ ಕನಿಷ್ಠ ಮೂರು ವರ್ಷ ಜೈಲಿಗೆ ಹಾಕಲಾಗುವುದು ಎಂದು ರಾಷ್ಟ್ರೀಯ ವಾಹಿನಿ ವರದಿ ಮಾಡಿದೆ.

ಕುವೈಟ್‌ನಲ್ಲಿ ಮಾಸ್ಕ್ ಧರಿಸದಿದ್ದರೆ 5,000 ದಂಡವಿದೆ. ಕತಾರ್‌ನಲ್ಲಿ 1 ಲಕ್ಷ ರಿಯಲ್‌ ದಂಡ ಕಕ್ಕಬೇಕು.

ಈ ಎರಡು ದೇಶಗಳಲ್ಲದೆ ಗಲ್ಫ್ ನ ಇತರ ದೇಶಗಳಲ್ಲೂ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಆದರೆ ಉಳಿದ ದೇಶಗಳು ಜೈಲಿಗೆ ಅಟ್ಟುವ ಮತ್ತು ದಂಡ ವಿಧಿಸುವ ಕಠಿನ ಕಾನೂನುಗಳನ್ನು ಇನ್ನೂ ಜಾರಿಗೆ ತಂದಿಲ್ಲ.

Advertisement

ಆರು ಗಲ್ಫ್ ದೇಶಗಳಲ್ಲಿ ಒಟ್ಟು 1,37,000 ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ. 693 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಆರಂಭದಲ್ಲಿ ಪ್ರವಾಸಿಗರಲ್ಲಿ ಸೋಂಕು ಕಾಣಿಸಿಕೊಂಡರೂ ಬಳಿಕ ವಲಸಿಗರಲ್ಲಿ ಪತ್ತೆಯಾಯಿತು. ಈ ಹಿನ್ನೆಲೆಯಲ್ಲಿ ಭಾರೀ ಸಂಖ್ಯೆಯ ವಲಸಿಗರನ್ನು ಗಲ್ಫ್ ದೇಶಗಳು ತವರಿಗೆ ಕಳುಹಿಸಿವೆ.

3 ಕೋಟಿ ಜನಸಂಖ್ಯೆಯಿರುವ ಸೌದಿ ಅರೇಬಿಯದಲ್ಲಿ ಅತ್ಯಧಿಕ 54,700 ಸೋಂಕಿತರಿದ್ದಾರೆ. ಇಲ್ಲಿ 312 ಸಾವು ಸಂಭವಿಸಿದೆ. 2.8 ಕೋಟಿ ಜನಸಂಖ್ಯೆಯಿರುವ ಕತಾರ್‌ ಸೋಂಕಿನಲ್ಲಿ ಗಲ್ಫ್ ದೇಶಗಳ ಪೈಕಿ ಎರಡನೇ ಸ್ಥಾನದಲ್ಲಿದೆ. ಇಲ್ಲಿ 32,600 ಸೋಂಕಿತರಿದ್ದು, 15 ಸಾವು ಸಂಭವಿಸಿದೆ. ಯುಎಇಯಲ್ಲಿ 23,350 ಸೋಂಕಿತರು ಪತ್ತೆಯಾಗಿದ್ದಾರೆ ಮತ್ತು 220 ಸಾವುಗಳು ಸಂಭವಿಸಿವೆ. ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಗಲ್ಫ್ ದೇಶಗಳು ಕೋವಿಡ್‌-19 ಕೈಮೀರುವು ದನ್ನು ತಡೆದಿವೆ.

Advertisement

Udayavani is now on Telegram. Click here to join our channel and stay updated with the latest news.

Next