ಉಡುಪಿ : ‘ತೃತೀಯ ಲಿಂಗಿಗಳಿಗೆ ಹಣ ಕೊಡಲೇಬೇಕು ಅನ್ನುತ್ತೇನೆ, ಯಾಕೆಂದರೆ ಸಮಾಜ ಅವರನ್ನು ಒಪ್ಪಿಕೊಂಡಿದ್ದರೆ ಅವರು ಭಿಕ್ಷೆ ಕೇಳಲು ಬರುತ್ತಿರಲಿಲ್ಲ. ಮೊದಲು ಅವರನ್ನು ಒಪ್ಪಿಕೊಳ್ಳಿ, ಸ್ವೀಕಾರ ಮಾಡಿಕೊಳ್ಳಿ, ಅವರನ್ನು ಒಪ್ಪಿಕೊಳ್ಳದ ಕಾರಣ ನೀವು ದಂಡ ಕಟ್ಟುತ್ತಿದ್ದೀರಿ’ ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ, ಪದ್ಮಶ್ರೀ ಮಂಜಮ್ಮ ಜೋಗತಿ ಶನಿವಾರ ಅಭಿಪ್ರಾಯ ಪಟ್ಟಿದ್ದಾರೆ.
‘ಉದಯವಾಣಿ’ಯ ಮಣಿಪಾಲದ ಕಚೇರಿಯಲ್ಲಿ ನಡೆದ ‘ಉದಯವಾಣಿ.ಕಾಮ್’ ಫೇಸ್ ಬುಕ್ ಲೈವ್ ಕಾರ್ಯಕ್ರಮದಲ್ಲಿ ತೃತೀಯ ಲಿಂಗಿಗಳ ಬದುಕಿನ ನೋವಿನ ಕುರಿತಾಗಿ ಮುಕ್ತ ಮನಸ್ಸಿನಿಂದ ಮಾತನಾಡಿ, ಪದ್ಮಶ್ರೀ ಮಂಜಮ್ಮ ಜೋಗತಿ ತನ್ನ ಬದುಕಿನ ಭಾವುಕ ಕ್ಷಣಗಳನ್ನು ನೆನೆದರು.
‘ತೃತೀಯ ಲಿಂಗಿಗಳು ಮನೆಯಲ್ಲಿ ಇದ್ದರೆ ದಯವಿಟ್ಟು ಯಾರು ಮನೆಯಿಂದ ಹೊರಗೆ ಹಾಕಬಾರದು.ಅಂತಹ ಮಕ್ಕಳಿದ್ದರೆ ತಂದೆ- ತಾಯಿ ಪ್ರೀತಿಸಬೇಕು. ಆಗ ಅಕ್ಕಪಕ್ಕದವರು ಸ್ವೀಕರಿಸುತ್ತಾರೆ , ಸಮಾಜದ ದೃಷ್ಟಿಕೋನ ಬದಲಾದರೆ ದೇಶವೇ ಸ್ವೀಕರಿಸುತ್ತದೆ’ ಎಂದು ಮಂಜಮ್ಮ ಜೋಗತಿ ಅವರು ಹೇಳಿದರು.
‘ತೃತೀಯ ಲಿಂಗಿ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಬೇಕು. ವಿದ್ಯಾಭ್ಯಾಸದ ಕೊರತೆಯಿಂದ ಲೈಂಗಿಕ ಕಾರ್ಯಕರತರಾಗುತ್ತಿದ್ದಾರೆ, ಟೋಲ್ ಗೇಟ್ ಗಳಲ್ಲಿ ಭಿಕ್ಷಾಟನೆ ಮಾಡುತ್ತಿದ್ದಾರೆ.ವಿದ್ಯಾಭ್ಯಾಸ ಕೊಡಿಸಿ ಅವರ ಕಾಲಿನ ಮೇಲೆ ಅವರೇ ನಿಂತುಕೊಳ್ಳುವಂತೆ ಮಾಡಬೇಕು’ ಎಂದರು.
‘ತೃತೀಯ ಲಿಂಗಿಗಳ ಓದಿಗೆ ಸರಕಾರ ನೆರವು ನೀಡಬೇಕು, ತೃತೀಯ ಲಿಂಗಿಗಳೀಗೆ ಪ್ರತ್ಯೇಕ ಹಾಸ್ಟೆಲ್ ತೆರೆಯಬೇಕು, ಅವರಿಗೆ ಕೆಲಸ ಕೊಡಿ, ಕಲಾವಿದರಿಗೆ ಬದುಕು ಕಟ್ಟಿಕೊಡಲು ಅವಕಾಶ ಮಾಡಿ ಕೊಡಿ’ ಎಂದು ಮನವಿ ಮಾಡಿದರು.
‘ಹೆತ್ತ ತಂದೆ-ತಾಯಿಗಳು ಮಕ್ಕಳೆಂದು ಒಪ್ಪಿಕೊಳ್ಳಬೇಕು, ಆಗ ಊರೇ ಸ್ವೀಕಾರ ಮಾಡುತ್ತದೆ, ಬದಲಾವಣೆ ಸಾಧ್ಯವಾಗುತ್ತದೆ’ ಎಂದರು.
‘2014 ರಲ್ಲಿ ಶಿಗ್ಗಾವಿಯ ಕಾಲೇಜ್ ಒಂದಕ್ಕೆ ನನ್ನನ್ನು ಪಟ್ಟಾಂಗ ಅತಿಥಿಯಾಗಿ ಕರೆದಿದ್ದರು. ಪಿಎಚ್ ಡಿ ಮಾಡುತ್ತಿದ್ದ ವಿದ್ಯಾರ್ಥಿಗಳು ನನ್ನನ್ನು ಸಂದರ್ಶನ ನಡೆಸಿದಾಗ ಚಂದ್ರಪ್ಪ ಸೋಗಟೆ ಅವರು ನನ್ನ ಕುರಿತಾಗಿ ಪುಸ್ತಕ ಬರೆದರು. ‘ಸುಳಿವ ಹೆಣ್ಣು’ ಎನ್ನುವ ನನ್ನ ಪುಸ್ತಕ ಬಿಡುಗಡೆಯಾಗಿದ್ದು, ಗುಲ್ಬರ್ಗದ ವಿವಿಯಲ್ಲಿ ೨೦೨೨ ರಿಂದ ಬಿಎಸ್ಸಿ ನಾಲ್ಕನೇ ಸೆಮಿಸ್ಟರ್ ಗೆ ಒಂದು ಪಾಠವಾಗುತ್ತಿದೆ ಎಂದು ಸಂಭ್ರಮ ಹೊರ ಹಾಕಿದರು.
‘ಸುಳಿವ ಹೆಣ್ಣು’ ಪುಸ್ತಕಕ್ಕೆ
246 ಪುಟ ಡಾ. ಸಿದ್ದಲಿಂಗಯ್ಯ ಅವರು ಬಿಡುಗಡೆ ಮಾಡಿದರು ಬರಗೂರು ರಾಮಚಂದ್ರಪ್ಪ ಅವರು ಮುನ್ನುಡಿಯನ್ನು ಬರೆದಿದ್ದು, ಸಬೀಹಾ ಭೂಮಿಗೌಡ ಅವರು ಬೆನ್ನುಡಿಯನ್ನು ಬರೆದು ಅದ್ಭುತ ಪುಸ್ತಕ ಹೊರ ಬರುವಲ್ಲಿ ಕಾರಣೀಕರ್ತರಾಗಿದ್ದರೆ’ ಎಂದು ಸಂತಸ ಹಂಚಿಕೊಂಡರು.
‘ಹೈದರಾಬಾದ್ ನಲ್ಲಿ ಮ್ಯಾಗಜೀನ್ ಒಂದರಲ್ಲಿ 9 ತಿಂಗಳು ಧಾರಾವಾಹಿಯಾಗಿ ನನ್ನ ಬದುಕಿನ ಕಥೆ ಮೂಡಿ ಬಂದಿದೆ’ ಎಂದರು.
‘ನಾನು ಹೊನ್ನಾವರದಲ್ಲಿ ಇದ್ದಾಗ ಕರೆಯೊಂದು ಬಂದಿತ್ತು, ನನಗೆ ಪದ್ಮಶ್ರೀ ಬಂದಿದ್ದು ಕೇಳಿ ಅಚ್ಚರಿಯಾಗಿತ್ತು, ಸಾವಿರಾರು ಜನ ಅಭಿನಂದಿಸಿದ್ದರು’ ಎಂದು ಸಂಭ್ರಮದಲ್ಲಿ ತೇಲಾಡಿದರು.
ತೃತೀಯ ಲಿಂಗಿಗಳು ಮತ್ತು ಜೋಗತಿಯರ ನಡುವಿನ ವ್ಯತ್ಯಾಸದ ಕುರಿತಾಗಿ ಮಾತನಾಡಿ, ತೃತೀಯ ಲಿಂಗಿಗಳು ಮತ್ತು ಜೋಗತಿಯರು ಒಂದೇ, ನಮ್ಮಲ್ಲಿ ಜೋಗತಿಯರಿಗೆ ಆರಾಧನೆ ಮಾಡಲು ದೇವರು ಸಿಗುತ್ತಾರೆ. ನನಗೆ ದೇವರ ದೀಕ್ಷೆ ಕೊಟ್ಟು ಮನೆಯಿಂದ ಹೊರಹಾಕಿದರು. ಆದರೆ ಉತ್ತರ ಭಾರತದಲ್ಲಿ ಈ ಅವಕಾಶ ಇಲ್ಲ’ ಎಂದರು.
‘ಬಂಗಾರ ಕೆಟ್ಟರೆ ಅಕ್ಕಾಸಾಲಿಗಳ ಮನೆಗೆ ಹೋಗಬೇಕು ಅನ್ನುವ ಹಾಗೆ ತೃತೀಯ ಲಿಂಗಿಗಳನ್ನು ಮನೆಯಿಂದ ಹೊರ ಹಾಕಿದರೆ ನಮ್ಮಂತಹವರ ಹತ್ತಿರವೇ ಬರಬೇಕು. ನಮ್ಮಲ್ಲಿ ಗುರು-ಶಿಷ್ಯ ಪರಂಪರೆ ಅನ್ನುವುದೂ ಇದೆ’ ಎಂದರು.
ಅವಿನಾಶ್ ಕಾಮತ್ ಅವರು ಮಂಜಮ್ಮ ಜೋಗತಿ ಅವರೊಂದಿಗೆ ಆತ್ಮೀಯ ಸಂದರ್ಶನ ನಡೆಸಿಕೊಟ್ಟರು.