ಎಷ್ಟು ಹೊತ್ತಾದರೂ ನೀನು ಬರಲೇ ಇಲ್ಲ. ಸ್ನೇಹಿತರೆಲ್ಲಾ, ಪರೀಕ್ಷೆ ಮುಗಿದ ಖುಷಿಗೆ ಪಾರ್ಟಿ ಮಾಡೋಣ ಬಾ ಅಂತ ಕರೆದರೂ ನಾನು ಹೋಗಲಿಲ್ಲ. ಆಗ ಗೆಳೆಯನೊಬ್ಬ ಬಂದು, ನೀನು ಬ್ಯಾಕ್‌ಗೇಟ್‌ನಿಂದ ಹೊರ ನಡೆದಿರುವ ವಿಷಯ ತಿಳಿಸಿದ!
ಮನಸ್ಸಿನ ಭಾವನೆಗಳನ್ನು ನಿನ್ನಲ್ಲಿ ಹೇಳಿಬಿಡಬೇಕು ಎಂಬ ಚಡಪಡಿಕೆಯಲ್ಲೇ ಡಿಗ್ರಿ ಮುಗಿಸಿದೆ. ಮೂರು ವರ್ಷ ಕಳೆದರೂ ನಿನ್ನೆದುರು ಬಾಯಿ ಬಿಡಲು ನನಗೆ ಸಾಧ್ಯವೇ ಆಗಲಿಲ್ಲ. ನೀನು ಎದುರಿಗೆ ಬಂದಾಗ ನಾನು ಮಾತು ಬರದ ಮೂಕನಾಗುತ್ತಿದ್ದೆ. ನೀನು ಒಬ್ಬಳೇ ಸಿಕ್ಕರೆ, ಮನಸ್ಸಿನ ಮಾತಿನ ಗಂಟು ಬಿಚ್ಚಬಹುದು ಅಂತ ಕಾದಿದ್ದೇ ಬಂತು. ಯಾಕಂದ್ರೆ, ನೀನು ಯಾವಾಗಲೂ ಜೊತೆಗಾತಿಯರ ಗುಂಪಿನಲ್ಲೇ ಇರುತ್ತಿದ್ದೆ. ಇಂದಲ್ಲಾ ನಾಳೆ ನೀನು ಒಬ್ಬಳೇ ಸಿಕ್ಕೇ ಸಿಕ್ಕುತ್ತೀಯಾ ಅಂತ ಡಿಗ್ರಿಯ ಕೊನೆಯ ಸೆಮಿಸ್ಟರ್‌ವರೆಗೂ ಆಸೆಯಿಂದ ಕಾದೆ. ಅಂದು ಕಾಲೇಜಿನ ಕೊನೆಯ ದಿನ. ಇವತ್ತು ನಿನ್ನೊಡನೆ ಮಾತಾಡದಿದ್ದರೆ, ಮುಂದೆಂದೂ ಮಾತಾಡುವ ಅವಕಾಶ ಸಿಗುವುದಿಲ್ಲ ಅಂತ ಗೊತ್ತಿತ್ತು. ನನ್ನ ಕಣ್ಣುಗಳು ಭಯ, ಕಾತರದಿಂದ ನಿನ್ನನ್ನೇ ಹುಡುಕುತ್ತಿದ್ದವು. ಆ ಭಯದಲ್ಲಿ ಹೇಗೆ ಆ ಕೊನೆಯ ಪರೀಕ್ಷೆ ಬರೆದೆನೋ ಈಗಲೂ ಅರಿವಿಲ್ಲ.
ಹಿಂದಿನ ರಾತ್ರಿ ಪೂರ್ತಿ ನಿದ್ದೆಗೆಟ್ಟು, “ನಾಳೆ ಹೇಗಾದರೂ ಸರಿ, ಬೇಗ ಪರೀಕ್ಷೆ ಬರೆಯಬೇಕು. ಗೇಟ್ ಹತ್ತಿರ ನೀನು ಬಂದ ಕೂಡಲೇ ನಿನ್ನ ಮಾತಾಡಿಸಬೇಕು’ ಅಂತೆಲ್ಲಾ ಮಾನಸಿಕ ಸಿದ್ಧತೆ ನಡೆಸಿದ್ದೆ. ಇನ್ನೂ ಅರ್ಧ ಗಂಟೆ ಬಾಕಿ ಇರುವಾಗಲೇ ಪೇಪರ್ ಕೊಟ್ಟು, ಪರೀಕ್ಷೆ ಹಾಲ್‌ನಿಂದ ಹೊರ ಬಂದೆ. ಗೇಟ್ ಹತ್ತಿರ ವಾಚ್‌ಮನ್ ಇರಲಿಲ್ಲ. ಅಂದು ನಿನ್ನನ್ನು ಕಾಯುವ ವಾಚ್‌ಮನ್ ನಾನಾಗಿದ್ದೆನಲ್ಲ!
ನೀನು ಬಂದಾಗ ಹೇಗೆ ನಿನ್ನನ್ನು ಕರೆಯಬೇಕು? ಮೊದಲು ಹೇಗೆ ಮಾತು ಪ್ರಾರಂಭಿಸಬೇಕು? ಏನು ಹೇಳಬೇಕು? ಎಂಬ ತವಕದಲ್ಲಿ ಮನಸ್ಸು ರೆಡಿಯಾಗತೊಡಗಿತು. ನೀನು ಒಬ್ಬಳೇ ಬಂದರೂ ಸರಿಯೇ, ಸ್ನೇಹಿತೆಯರ ಜೊತೆಯಲ್ಲಿ ಬಂದರೂ ಸರಿಯೇ, ಮನಸ್ಸಿನ ಮೌನ ಸರಿಸಿ ನಿನ್ನನ್ನು ಮಾತನಾಡಿಸಬೇಕು. ಹೇಳದೆ ಉಳಿದ ಮಾತುಗಳು ನನ್ನನ್ನು ಕಾಡಲು ಬಿಡಬಾರದು ಅಂತ ನಿಶ್ಚಯಿಸಿ, ಕಾಲೇಜು ಗೇಟಿಗೆ ಒರಗಿ ನಿಂತಿದ್ದೆ.
ಪರೀಕ್ಷೆ ಮುಗಿಯಿತು. ನನ್ನೆದೆ ಇನ್ನೂ ಜೋರಾಗಿ ಹೊಡೆದುಕೊಳ್ಳತೊಡಗಿತು. ಹುಡುಗಿಯರ ಗುಂಪಿನಲ್ಲಿ ಕಣ್ಣುಗಳು ನಿನ್ನನ್ನೇ ಹುಡುಕಿದವು. ಎಷ್ಟು ಹೊತ್ತಾದರೂ ನೀನು ಬರಲೇ ಇಲ್ಲ. ಸ್ನೇಹಿತರೆಲ್ಲಾ, ಪರೀಕ್ಷೆ ಮುಗಿದ ಖುಷಿಗೆ ಪಾರ್ಟಿ ಮಾಡೋಣ ಬಾ ಅಂತ ಕರೆದರೂ ನಾನು ಹೋಗಲಿಲ್ಲ. ಆಗ ಗೆಳೆಯನೊಬ್ಬ ಬಂದು, ನೀನು ಬ್ಯಾಕ್‌ಗೇಟ್‌ನಿಂದ ಹೊರ ನಡೆದಿರುವ ವಿಷಯ ತಿಳಿಸಿದ! ಮಾತಿನ ಸಿಡಿಲು ನಿಂತಲ್ಲೇ ಎದೆಯ ಸೀಳಿತ್ತು. ಹೇಳದೇ ಉಳಿದ ಮಾತುಗಳು ಕಣ್ಣಲ್ಲಿ ಕರಗಿ, ಭೂಮಿಗಿಳಿದವು. ಕೊನೆಗೂ ಯಾವುದನ್ನು ಮನಸ್ಸಿನೊಳಗೆ ಉಳಿಸಿಕೊಳ್ಳಬಾರದು ಅಂದುಕೊಂಡೆನೋ, ಅದು ನನ್ನಲ್ಲೇ ಉಳಿದುಹೋಯ್ತು. ನಿನಗಾಗಿ ಒಬ್ಬ ಹುಡುಗ ಗೇಟಿನ ಬಳಿ ಅರ್ಧ ಗಂಟೆ, ಅಲ್ಲಲ್ಲ, ಮೂರು ವರ್ಷ ಕಾಯುತ್ತಿದ್ದ ವಿಷಯ ನಿನಗೆ ಕೊನೆಗೂ ಗೊತ್ತಾಗಲೇ ಇಲ್ಲ…
-ಯೋಗೇಶ್ ಮಲ್ಲೂರು, ತುಮಕೂರು