Advertisement

ಹಣ್ಣೆಲೆ ಬೀಳುವಾಗ ಹಸಿರೆಲೆ ನಗಬೇಕು !

12:30 AM Dec 31, 2018 | |

ಮರದ ಲಾಭವೆಲ್ಲ ಮನುಷ್ಯರಿಗೇ ಸಿಗಬೇಕಾಗಿಲ್ಲ. ಬೀಳುವ ತರಗೆಲೆಯಿಂದ ಫ‌ಲವತ್ತಾದ ಮಣ್ಣು ಅಭಿವೃದ್ಧಿಯಾಗಬೇಕು. ಮಣ್ಣಿನ ಆರೋಗ್ಯ ಸಂರಕ್ಷಿಸಲು ಕಾಡು ತನ್ನದೇ ವ್ಯವಸ್ಥೆ ರೂಪಿಸಿಕೊಂಡಿದೆ. ಕಡು ಬೇಸಿಗೆಯಲ್ಲಿ ಮರದಡಿಯ ಎಲೆ ಗುಡಿಸುವಾಗ ಕಪ್ಪೆ, ಇರುವೆ, ಎರೆಹುಳುಗಳ ಆವಾಸ ಕಾಣಿಸುತ್ತವಲ್ಲವೇ? ಮಣ್ಣಿನ ಸಂರಕ್ಷಣೆ, ಫ‌ಲವತ್ತತೆ ಹೆಚ್ಚಿಸುವ ಜೀವಿಗಳ ಸಹಜ ಕಾರ್ಯಕ್ಕೆ ನಾವು ಅಡ್ಡಿಯಾಗುತ್ತಿದ್ದೇವೆ. ಕಾಡಿನ ಮೂಲ ತತ್ವ ಅರ್ಥಮಾಡಿಕೊಂಡು ಹಣ್ಣೆಲೆ ಬೀಳುವಾಗ ಹಸಿರೆಲೆ ನಗುವಂಥ ಅವಕಾಶ ರೂಪಿಸಿದರೆ  ತೋಟ ಖುಷಿಯಲ್ಲಿ ನಗುತ್ತದೆ.

Advertisement

ಚಳಿಗಾಲದ ಆರಂಭದಲ್ಲಿ ಮರಗಿಡಗಳು ಎಲೆ ಉದುರಿಸಲು ಆರಂಭಿಸುತ್ತವೆ. ಅಬ್ಬರದ ಮಳೆ ನೀರು, ನೇರ ನೆಲಕ್ಕೆ ತಾಗದಂತೆ ಮಣ್ಣಿನ ರಕ್ಷಣೆಗೆ ಹಸಿರು ಕೊಡೆ ಹಿಡಿದ ಎಲೆಗಳು ಕಾಯಕದಲ್ಲಿ ಬಳಲಿದಂತೆ ನೆಲ ಸೇರುತ್ತವೆ. ತರಗೆಲೆಗಳ ಮುಚ್ಚಿಗೆ ಭೂಮಿಯ ತೇವ ಆರದಂತೆ ರಕ್ಷಣೆಯಾಗಿ ನಿಲ್ಲುತ್ತದೆ.  ಯುಗಾದಿಯ ಬಿಸಿ ಏರಿದ ಬಳಿಕ ಹೊಸ ಚಿಗುರಿನ ಚೆಲುವು ಕಾಣಿಸುತ್ತದೆ. ಸಸ್ಯಗಳ ಗುಣ, ನೆಲ ಜಲ ಸಂರಕ್ಷಣೆಯ ನಿಸರ್ಗ ತಂತ್ರವಾಗಿದೆ. ಅಗಲ ಎಲೆಯ ಸಸ್ಯ ಹೊತ್ತು ಉರಿಬಿಸಿಲಲ್ಲಿ ನಿಂತರೆ ನೀರಿನ ಅಗತ್ಯವೂ ಜಾಸ್ತಿಯೆಂದು ವೃಕ್ಷಗಳಿಗೆ ಗೊತ್ತಿದೆ. ನೆಲ, ತೊಗಟೆಗಳಲ್ಲಿ ಶೇಖರವಾದ ನೀರೆಲ್ಲ ಖಾಲಿಯಾದರೆ ಬದುಕು ಕಷ್ಟವೆಂಬ ಎಚ್ಚರದಂತೆ ವರ್ತಿಸುತ್ತಿವೆ. ಎಲೆಯ ಪರಿವರ್ತಿತ ರೂಪವಾಗಿ ಕೆಲವು ಗಿಡಗಳ ಮುಳ್ಳುಗಳು ನೀರು ಆವಿಯಾಗುವುದನ್ನು ತಡೆದು ಎಂಥ ಬರದಲ್ಲೂ ಬದುಕಲು ಕಲಿಸಿವೆ. ನಾವು ಕೃಷಿಗೆ ಯಥೇತ್ಛ ನೀರು ಬಳಸುತ್ತ ಅಂತರ್ಜಲ ಕುಸಿತಕ್ಕೆ ಕಾರಣವಾಗುತ್ತಿದ್ದರೆ ನಮ್ಮ ತೋಟದ ಪಕ್ಕದ ವೃಕ್ಷಗಳು ಬೇರೆಯ ದಾರಿಯಲ್ಲಿ ಗೆಲುವು ಸಾಧಿಸುತ್ತಿವೆ.

ರಾಜ್ಯದ ನೂರಾರು ತಾಲೂಕುಗಳಲ್ಲಿ ಬರ ಪರಿಸ್ಥಿತಿ ಇದೆ. ಬೆಳೆಗಳು ಒಣಗುತ್ತಿವೆ. ಆದರೆ ಕಾಡಿನ ಮರಗಿಡಗಳು ಹಸಿರಾಗಿ ಫ‌ಲತುಂಬಿದ ಅಚ್ಚರಿ ಇದೆ. ಬಯಲುಸೀಮೆಯ ಕಾಡು ಸುತ್ತಾಡುವಾಗ ಬೇಸಿಗೆಯಲ್ಲಿ ಮರಗಿಡಗಳನ್ನು ಗಮನಿಸಬೇಕು. ಚಿತ್ರದುರ್ಗದ ಜೋಗಿಮಟ್ಟಿ ಬೆಟ್ಟವನ್ನು ಫೆಬ್ರವರಿಯಲ್ಲಿ ದೂರದಿಂದ ನೋಡಿದರೆ ಎಲೆಗಳೆಲ್ಲ ಉದುರಿ ಬೋಳಾದಂತೆ ಕಾಣಿಸುತ್ತದೆ. ಆದರೆ,  ಸನಿಹಕ್ಕೆ ಹೋದರೆ ಶ್ರೀಗಂಧ, ಸೀಗೆ, ಗೊರ, ಆಲ, ಪಚ್ಛಾಲ, ಸೀಮೆತಂಗಡಿ, ಕಾಡುಹಿಪ್ಪೆ, ರೇವಡಿ, ಹಾಸದ್‌, ಕಾಡುಮೆಣಸು, ಗಂಟಿಪ್ಪೆ, ಕಾಡುಮಲ್ಲಿಗೆಗಳು ಹಸಿರಾಗಿರುತ್ತವೆ. ಕೆಲವು ಮುಂಚಿತವಾಗಿ ಎಲೆ ಉದುರಿಸಿ ಚಿಗುರಿದರೆ ಇನ್ನುಳಿದವು ತಡವಾಗಿ ಉದುರಿಸುತ್ತವೆ.  ಅಲ್ಲಿಂದ 130 ಕಿಲೋ ಮೀಟರ್‌ ದೂರದ ಬರದ ನೆಲೆಯ ಮೊಳಕಾಲ್ಮೂರಿನ ಕಲ್ಲುಗುಡ್ಡಗಳಲ್ಲಿ ಹಸಿರಾಗಿರುವ ಗೊರ, ಬಂದರಿಕೆ ಸಸ್ಯಗಳು ಕಾಣುತ್ತವೆ. ಕಮರಾ ವೃಕ್ಷಗಳು ಬೋಳಾಗಿದ್ದರೂ, ಅವುಗಳಡಿಯಲ್ಲಿ ಹಸಿರಾಗಿ ನಗುತ್ತವೆ. ಸವದತ್ತಿಯ ಕಲ್ಲು ಗುಡ್ಡದಲ್ಲಿ ಬಂದರಿಕೆ ಸಸ್ಯದ ಹಸಿರು ನೋಡಬಹುದು. ಎಲೆ ಉದುರಿಸುವ ಅರಣ್ಯಗಳಲ್ಲಿ ಪ್ರತಿ ಸಸ್ಯ ಗುಣಗಳಲ್ಲಿ ವಿಶೇಷತೆ ಇದೆ. ಎಲ್ಲವೂ ಒಮ್ಮೆಗೇ ಖಾಲಿಯಾಗುವುದಿಲ್ಲ. ಎರಡು ಮೂರು ತಿಂಗಳಿನ ಅಂತರದಲ್ಲಿ ಬೇರೆ ಬೇರೆ ಜಾತಿಯ ವೃಕ್ಷಗಳು ಎಲೆ ಉದುರಿಸುತ್ತವೆ. ಏಕಜಾತೀಯ ತೇಗ, ರಬ್ಬರ್‌ ತೋಟಗಳು ಹಾಗಲ್ಲ, ಒಮ್ಮೆಗೆ ಉದುರಿಸಿ ಬೆಂಕಿ ಭಯದ ಭಯಾನಕ ದೃಶ್ಯ ನಿರ್ಮಿಸುತ್ತವೆ.  

ಕೃಷಿಗೆ ನೆರವಾಗುವ ಕೆಂಪಿರುವೆ, ಕಪ್ಪೆ, ಜೇಡ, ಎರೆಹುಳು ಮುಂತಾದವು ಪರಿಸರದಲ್ಲಿ ನೆಲೆಯಾಗಲು ತಂಪು ವಾತಾವರಣ ಬೇಕು. ಬಳ್ಳಿ, ಪೊದೆಗಳ ನೆರಳು, ತರಗೆಲೆಯ ದಪ್ಪ ಹಾಸು ಕೂಡ ಅಗತ್ಯ. ಗೆದ್ದಲು ನಿಯಂತ್ರಣದಲ್ಲಿ ಪ್ರಮುಖ ಪಾತ್ರವಹಿಸುವ ಮಾಂಸಹಾರಿ ಇರುವೆ ಬೇಸಿಗೆಯಲ್ಲಿ ತಂಪಾದ ನೆರಳು, ಕತ್ತಲು ಬಯಸುವುದಕ್ಕೆ ಮುಖ್ಯಕಾರಣ ಉಷ್ಣತೆಯಿಂದ ಬಚಾವಾಗುವುದು.   ಒಮ್ಮೆಗೇ ಸಂಪೂರ್ಣ ಎಲೆ ಉದುರಿಸುವ ನೆಲೆಯಲ್ಲಿ ಪಕ್ಷಿಗಳಿಗೆ ಗೂಡು ನಿರ್ಮಿಸಲೂ ಆಗದಂಥ ಸ್ಥಿತಿ ಇರುತ್ತದೆ. ಅಲ್ಲೊಂದು ಇಲ್ಲೊಂದು ಹಸಿರಾಗಿರುವ ಗಿಡ ಮರಗಳಿದ್ದರೆ ವಾತಾವರಣಕ್ಕೆ ಹೊಂದಿಕೊಂಡು ಜೀವ ಸಂಕುಲ ಬದುಕುತ್ತವೆ. ಮಧ್ಯಾಹ್ನದ ಉರಿಬಿಸಿಲಲ್ಲಿ ಪಕ್ಷಿಗಳು ಸಾಮಾನ್ಯವಾಗಿ ಸೀಗೆಯ ಹಿಂಡಿನಲ್ಲಿ ಅವಿತಿರಲು ಬಿಸಿಲಿನ ಭಯವೂ ಕಾರಣವಾಗಿದೆ. ನಾವು ಉತ್ತರ ಕರ್ನಾಟಕಕ್ಕೆ ಬೇಸಿಗೆಯಲ್ಲಿ ಪ್ರವಾಸ ಹೋದಾಗ ಹೋಟೆಲ್‌ಗ‌ಳಲ್ಲಿ ಎಸಿ ರೂಮು ಬಯಸುತ್ತೇವಲ್ಲವೇ? ಜೀವಸಂಕುಲಗಳು ತರಗೆಲೆ, ಹಸಿರಿನಲ್ಲಿ ಬದುಕಲು ಕಲಿತಿವೆ.

ಮಲೆನಾಡಿನ ಸೊಪ್ಪಿನ ಬೆಟ್ಟಗಳಲ್ಲಿ ಸಸ್ಯ ನಾಟಿಯ ಮಾತು ಬಂದಾಗ ಸಣ್ಣ ಎಲೆ ಸಸ್ಯಗಳನ್ನು ಹೆಚ್ಚು ಬೆಳೆಸುವುದು ಸೂಕ್ತವೆನಿಸುತ್ತದೆ. ನೆಲ್ಲಿ, ಕುಂಟನೇರಳೆ, ಮುರುಗಲು, ಹೊಂಗೆ, ಹೆಬ್ಬೇವು, ಬಿದಿರು, ಹೆನ್ನೇರಲು, ಸುರಹೊನ್ನೆ ಹೀಗೆ ಸಸ್ಯಗಳನ್ನು ಪಟ್ಟಿ ಮಾಡಬಹುದು. ತರಗೆಲೆ ಗುಡಿಸಿ ಕೃಷಿಕರು ತೋಟಕ್ಕೆ ಒಯ್ಯುವಾಗ. ಚಿಕ್ಕ ಎಲೆಗಳು ಮಣ್ಣಿಗೆ ಅಂಟಿಕೊಳ್ಳುವುದರಿಂದ ಒಂದಿಷ್ಟಾದರೂ ಸಾವಯವ ವಸ್ತು ನೆಲದಲ್ಲಿ ಉಳಿಯುತ್ತದೆ. ಗೇರು, ಮಾವಿನ ಗಿಡ ಬೆಳೆಸಿದರೂ ನೆಲದ ತಂಪು ಉಳಿಯುತ್ತದೆ. ವರ್ಷವಿಡೀ ಹಸಿರಾಗಿರುವ ಅಕೇಶಿಯಾ ಸಸ್ಯಗಳಿಂದ ನೆಲಕ್ಕೆ ಇನ್ನೂ ಹೆಚ್ಚು ಆರೋಗ್ಯವಲ್ಲವೇ? ಎಂಬ ಪ್ರಶ್ನೆ ಹುಟ್ಟಬಹುದು. ಎಲೆ ಉದುರಿಸುವ ಅರಣ್ಯದಲ್ಲಿ ವ್ಯಾಪಕವಾಗಿ ನಿತ್ಯಹರಿದ್ವರ್ಣ ಸಸ್ಯ ಬೆಳೆಸಿದ ಪರಿಣಾಮಗಳ ಅಧ್ಯಯನ ಅಗತ್ಯವಿದೆ. ಇದರ ತೊಟ್ಟೆಲೆಗಳು ಭೂಮಿಗೆ ಕರಗಲು ಎರಡು ವರ್ಷ ಬೇಕು. ಜೈವಿಕ ಕ್ರಿಯೆ ನಡೆಯದೇ ಮಣ್ಣಿಗೆ ಸಾವಯವ ಶಕ್ತಿ ಬರುವುದಿಲ್ಲ. ಸಳ್ಳೆ, ಮತ್ತಿ, ಕಿಂದಳ, ಸೀಗೆ, ಅಂಟುವಾಳ, ಸುರಹೊನ್ನೆ ಎಲೆಗಳು ಮಳೆಯ ಆರಂಭದಲ್ಲಿಯೇ ಕೊಳೆತು ಗೊಬ್ಬರವಾಗುತ್ತವೆ. ಅಕೇಶಿಯಾದ ಕರಗದ ಗುಣ ನೆಲಕ್ಕೆ ಅಪಾಯ ತಂದಿದೆ. 

Advertisement

ಒಂದು ಹೆಕ್ಟೇರ್‌ ಭತ್ತದ ಗದ್ದೆಗೆ 4.94 ಟನ್‌ ಹಾಗೂ ಒಂದು ಹೆಕ್ಟೇರ್‌ ಅಡಕೆ ತೋಟಕ್ಕೆ 6.58 ಟನ್‌ ತರಗೆಲೆ ಗೊಬ್ಬರಕ್ಕೆ ಬೇಕೆಂದು ಲೆಕ್ಕ ಹಾಕಿದ್ದಾರೆ. ಕೃಷಿ ಮಣ್ಣು ಫ‌ಲವತ್ತಾಗಿಸಲು ಅಕ್ಕಪಕ್ಕದ ಕಾಡಿಗೆ ಓಡುತ್ತೇವೆ. ದೂರದ ಕಾಡಿನ ಮೇಲೆ ಕೃಷಿ ಬಳಕೆಯ ಒತ್ತಡ ಹಾಕುವ ಬದಲು ತೋಟದಲ್ಲಿ ಕೊಕ್ಕೊ ಗಿಡ ನಾಟಿ ಮಾಡಿದರೆ ಅಗತ್ಯ ಸೊಪ್ಪು ದೊರೆಯುತ್ತದೆ.  ಕಬ್ಬು ಕಟಾವಿನ ಬಳಿಕ ಅಳಿದುಳಿದ  ಎಲೆಗಳಿಗೆ ಬೆಂಕಿ ಹಾಕುವ ಪದ್ಧತಿ ಇದೆ. ಇದರಿಂದ ಮಣ್ಣಿಗೆ ಶಕ್ತಿಯಾಗುವ ಅಮೂಲ್ಯ ಸಾವಯವ ಸಂಪತ್ತು ನಾಶವಾಗುತ್ತದೆ. ಬೀದರ್‌ ಜಿಲ್ಲೆಯ ಹುಡುಗಿ ಪ್ರದೇಶದ ರೈತರು ಸುಮಾರು 40 ವರ್ಷಗಳಿಂದಲೂ  ಕಬ್ಬಿನ ರವುದಿಗೆ ಬೆಂಕಿ ಹಾಕದೇ ಮಣ್ಣಿಗೆ ಸೇರಿಸುತ್ತಿದ್ದಾರೆ. ಇದರಿಂದ ನೀರಿನ ಬಳಕೆ ಕಡಿಮೆಯಾಗಿರುವುದರ ಜೊತೆಗೆ ಮಣ್ಣಿನ  ಆರೋಗ್ಯವೂ ಸಂರಕ್ಷಣೆಯಾಗಿದೆ. ವರ್ಷಕ್ಕೆ ನಾಲ್ಕೈದು ಸಾರಿ ನೀರುಣಿಸಿ ಎಕರೆಗೆ 50-70 ಟನ್‌ ಕಬ್ಬು ಬೆಳೆಯುವ ರೈತರನ್ನು ಇಲ್ಲಿ ನೋಡಬಹುದು. “ತನ್ನದು ತನಗೇ ನೀಡಿ, ತಾನು ಕುಡಿಯುವಷ್ಟು ನೀರು ನೀಡಿದರೆ ಒಂದು ಕುಟುಂಬ ಸಾಕುವುದಾಗಿ ತೆಂಗಿನ ಮರ ಹೇಳುತ್ತದೆ’ ಇದು  ಹಿರಿಯರ ಅನುಭವದ ನುಡಿಯಾಗಿದೆ.  ಗರಿ, ಹೆಡ, ಸಿಪ್ಪೆ, ಕರಟಗಳನ್ನು  ಆಯಾ ಮರದ ಬುಡಕ್ಕೆ ಹಾಕಿ ಸಾಕಷ್ಟು ನೀರುಣಿಸಿದರೆ ಗೊಬ್ಬರದ ಖರ್ಚಿಲ್ಲದೇ ಮರ ಉತ್ತಮ ಫ‌ಲ ನೀಡುತ್ತದೆ. ಆದರೆ,  ನಾವು ತೋಟದಿಂದ ಎಲ್ಲವನ್ನೂ ಬಾಚಿ ತರುತ್ತೇವೆ. ಅಡಕೆಯ ಸೋಗೆ, ಹಾಳೆಗಳನ್ನು ತೋಟದ ಮರಗಳಿಗೆ ಮುಚ್ಚಿಗೆ ಮಾಡಿದರೆ ಮಣ್ಣಿನ ತೇವ ರಕ್ಷಣೆಯಾಗುತ್ತದೆ. ಕಳೆ ಬೆಳೆಯದಂತೆ, ಕಸಕಡ್ಡಿ ಉಳಿಯದಂತೆ ನೆಲ ಗುಡಿಸುವ ನೋಟಗಳು ಬಯಲು ನಾಡಿನ ಅಡಿಕೆ ತೋಟಗಳಲ್ಲಿದೆ. ಇದರಿಂದ ನೀರಿನ ಅಗತ್ಯ ಹೆಚ್ಚುತ್ತದೆ. 

ತುಮಕೂರಿನ ಬಡವನಹಳ್ಳಿಯ ಕೃಷಿಕ ಮಹಾಲಿಂಗರು ಒಂದು ಕಿ.ಲೋ ತೆಂಗಿನ ಸಿಪ್ಪೆಯನ್ನು ನೀರಿನಲ್ಲಿ ನೆನೆಹಾಕಿ ದಿನದ ಬಳಿಕ ಎತ್ತಿಟ್ಟು ತೂಕ ಮಾಡಿದವರು. ಆಗ ಅದು ಎರಡು ಕಿ.ಲೋ ತೂಗಿತು. ಅಂದರೆ, ಒಂದು ಕಿ.ಲೋ ತೆಂಗಿನ ಸಿಪ್ಪೆಗೆ ಒಂದು ಲೀಟರ್‌ ನೀರು ಹಿಡಿಯುವ ಶಕ್ತಿಇದೆಯೆಂದು ಸಾಬೀತಾಯ್ತು. ಮಳೆ ಬಂದಾಗ ಸಾವಯವ ವಸ್ತುಗಳು ನೀರು ಹಿಡಿಯಲು ಹೇಗೆ ನೆರವಾಗುತ್ತವೆಂಬುದಕ್ಕೆ ಇದಕ್ಕಿಂತ ಸಾಕ್ಷ್ಯ ಅಗತ್ಯವಿಲ್ಲ. ಕೃಷಿ ತ್ಯಾಜ್ಯದ ಮರುಬಳಕೆಯ  ಸರಳ ತಂತ್ರ ಅಳವಡಿಸಿ ತೋಟದ ಹಸಿರು ಉಳಿಸಬಹುದು. ಕಾಡು ತೋಟದ ಕಲಿಕೆಯಲ್ಲಿ ಕಾಡು ನೋಡಿ ಕೃಷಿ ಮಾಡುವ ಸೂತ್ರ ಮುಖ್ಯ. ಒಂದು ಮರದ ಎಲೆ ಉದುರುವಾಗ ಇನ್ನಷ್ಟು ಹಸಿರಾಗಿರುವ ಸಸ್ಯ ಜೋಡಣೆಯ ಜಾಣ್ಮೆ ಬರ ಗೆಲ್ಲುವ ಸುಲಭ ತಂತ್ರವಾಗಿದೆ.   

ಮುಂದಿನ ಭಾಗ- ಸಾವಯವ ಸಾಧನೆಗೆ ಕಾಡು ತೋಟದ ಶಕ್ತಿ

ಶಿವಾನಂದ ಕಳವೆ

Advertisement

Udayavani is now on Telegram. Click here to join our channel and stay updated with the latest news.

Next