Advertisement
ಬಿಳಿನೆಲೆ ಗ್ರಾಮದದಲ್ಲಿ ಹರಿಯುವ ಭಾಗ್ಯ ಹೊಳೆಗೆ ಉದ್ಮಯ ಎನ್ನುವಲ್ಲಿ ಅಡ್ಡಲಾಗಿ ಸೇತುವೆ ನಿರ್ಮಿಸಬೇಕೆನ್ನುವ ಹಲವು ವರ್ಷಗಳ ಬೇಡಿಕೆ ಇನ್ನೂ ಈಡೇರಿಲ್ಲ. 50ಕ್ಕೂ ಹೆಚ್ಚು ಮನೆಗಳ ಜನರು, ಶಾಲಾ ವಿದ್ಯಾರ್ಥಿಗಳು ಸೇತುವೆಯಿಲ್ಲದೆ ಮಳೆಗಾಲದಲ್ಲಿ ಅಪಾಯಕಾರಿಯಾಗಿ ಹೊಳೆ ದಾಟುತ್ತಿದ್ದಾರೆ.
ವರ್ಷದ ಬೇಸಗೆಯ 3 ತಿಂಗಳು ಹೊರತುಪಡಿಸಿ ಉಳಿದ ದಿನಗಳಲ್ಲಿ ಜನತೆ ಹೊರ ಜಗತ್ತಿನ ಸಂಪರ್ಕಕ್ಕಾಗಿ ತಾವೇ ನಿರ್ಮಿಸುವ ಅಡಿಕೆ ಮರದ ತೂಗು ಸೇತುವೆ ಮಾದರಿಯ ಕಾಲು ಸಂಕವನ್ನೇ ಆಶ್ರಯಿಸಬೇಕಿದೆ. ಅರ್ಗಿನಿ, ಅಮೈ, ಬೈಲು ಪ್ರದೇಶದ ಜನರು ಬಿಳಿನೆಲೆ ಮುಖಾಂತರ ಕಡಬ, ಸುಬ್ರಹ್ಮಣ್ಯ ಸಂಪರ್ಕಿಸಲು ಭಾಗ್ಯ ಹೊಳೆಯನ್ನು ದಾಟಿ ಮುಂದುವರಿಯಬೇಕಾಗಿದೆ. ದಶಕಗಳ ಬೇಡಿಕೆಗಿಲ್ಲ ಮನ್ನಣೆ
ಇಲ್ಲೊಂದು ಸರ್ವ ಋತು ಸೇತುವೆ ಬೇಕೆಂದು 10 ವಷಗಳಿಂದ ಈ ಭಾಗದ ಸಂಸದರಿಗೆ ಶಾಸಕರಿಗೆ, ಸ್ಥಳೀಯ ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಮಾಡಿದ್ದಾರೆ. ಭರವಸೆ ಮಾತ್ರ ಇದುವರೆಗೂ ಈಡೇರಿಲ್ಲ. ಪ್ರತಿ ವರ್ಷ ಇಲ್ಲಿನ ಜನರು ಹಣ ಹೊಂದಿಸಿ 20 ಸಾವಿರ ರೂ. ವೆಚ್ಚದಲ್ಲಿ ಅಡಿಕೆ ಮರದ ಕಾಲು ಸಂಕ ನಿರ್ಮಿಸುತ್ತಾರೆ. ಹೊಳೆಯ ಎರಡೂ ಬದಿಗಳಲ್ಲಿರುವ ದೊಡ್ಡ ಮರಗಳಿಗೆ ಕಬ್ಬಿಣದ ರೋಪ್ ಆಳವಡಿಸಿ ಅಡಿಕೆ ಮರದಿಂದ ಪಾಲ ನಿರ್ಮಿಸಿದರೆ ಅದು ಒಂದು ವರ್ಷ ಮಾತ್ರ ಪ್ರಯೋಜನಕ್ಕೆ ಸಿಗುತ್ತದೆ. ಮಳೆಗಾಲ ಕಳೆದಾಗ ಕಬ್ಬಿಣದ ರೋಪ್ ತುಕ್ಕು ಹಿಡಿದು ಅಡಿಕೆ ಮರ ಶಿಥಿಲಗೊಂಡು ಮುಂದಿನ ವರ್ಷ ಹೊಸದಾಗಿ ಸೇತುವೆ ನಿರ್ಮಿಸಬೇಕಾದ ಅನಿವಾರ್ಯತೆ ಇಲ್ಲಿದೆ.
Related Articles
Advertisement
ಕಬ್ಬಿಣದ ರೋಪ್ ಅಳವಡಿಸಿ ನಿರ್ಮಿಸಲಾಗಿರುವ ಈ ಕಾಲು ಸಂಕದಲ್ಲಿ ಸಂಚರಿಸುವುದು ಅಪಾಯಕಾರಿಯೇ ಸೈ. ನಡೆದಾಡುವಾಗ ತೂಗುವ ಈ ಕಾಲು ಸಂಕದಲ್ಲಿ ಪರಿಣತರು ಮಾತ್ರ ಸಂಚರಿಸಲು ಸಾಧ್ಯ. ಮಕ್ಕಳು ಹಾಗೂ ವೃದ್ಧರು ದಾಟಬೇಕಾದರೆ ಬೇರೆಯವರ ಸಹಾಯ ಅತ್ಯಗತ್ಯ. ಈ ಹಿಂದೆ ಕೆಲವರು ಹೊಳೆಗೆ ಬಿದ್ದ ಘಟನೆಗಳೂ ವರದಿಯಾಗಿವೆ. ಬೇಸಗೆಯಲ್ಲಿ ವಾಹನಗಳನ್ನು ಪ್ರಯಾಸದಿಂದ ಹೊಳೆ ದಾಟಿಸಿ ಪ್ರಯಾಣಿಸುವ ಸ್ಥಳೀಯರು ಹೊಳೆಯ ಬದಿಯ ಶೆಡ್‌ಗಳಲ್ಲಿ ವಾಹನ ನಿಲ್ಲಿಸಿ ಕಾಲ್ನಡಿಗೆಯಲ್ಲಿ ಮನೆ ತಲುಪುತ್ತಾರೆ.
ಬೇಡಿಕೆ ಈಡೇರಿಸಿಹಲವು ವರ್ಷಗಳಿಂದ ಭಾಗ್ಯ ಹೊಳಗೆ ಸರ್ವಋತು ನಿರ್ಮಿಸಬೇಕೆಂದು ಸಂಬಂಧಪಟ್ಟ ಜನಪ್ರತಿನಿಧಿಗಳಿಗೆ ಬೇಡಿಕೆ ಸಲ್ಲಿಸುತ್ತಲೇ ಬರುತ್ತಿದ್ದೇವೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ವಿದ್ಯಾರ್ಥಿಗಳು, ವೃದ್ಧರು ಈ ಕಾಲು ಸಂಕವನ್ನು ದಾಟಲು ಹರಸಾಹಸ ಪಡಬೇಕಾಗುತ್ತದೆ. ಅನಾರೋಗ್ಯ ಪೀಡಿತರನ್ನು ಕರೆದೊಯ್ಯುವುದೂ ಅಸಾಧ್ಯ ಎನ್ನುವಂತಹ ಪರಿಸ್ಥಿತಿ ಇದೆ. ಆದುದರಿಂದ ಜನಪ್ರತಿನಿಧಿಗಳು ಜನರ ಬೇಡಿಕೆಯನ್ನು ಈಡೇರಿಸಬೇಕಿದೆ.
– ವಿಜಯಕುಮಾರ್ ಎರ್ಕ, ಸ್ಥಳೀಯ ಮುಂದಾಳು ಮನವಿ ಬಂದಿಲ್ಲ
ಸೇತುವೆ ಇಲ್ಲದೇ ಇರುವುದರಿಂದ ಈ ಭಾಗದ ಜನರಿಗೆ ಮಳೆಗಾಲದಲ್ಲಿ ತೊಂದರೆಯಾಗುತ್ತಿದೆ. ಆದರೆ ಪಂಚಾಯತ್‌ಗೆ ಯಾವುದೇ ಮನವಿ ಸಲ್ಲಿಕೆಯಾಗಿಲ್ಲ. ಮಳೆಗಾಲದಲ್ಲಿ ತುರ್ತು ಸಂದರ್ಭಗಳಲ್ಲಿ ಜನರಿಗೆ ಸುತ್ತುಬಳಸಿ ಬರಲು ಕಚ್ಚಾ ರಸ್ತೆಯ ಸಂಪರ್ಕವಿದೆ. ಸೇತುವೆ ನಿರ್ಮಾಣಕ್ಕೆ ದೊಡ್ಡ ಮೊತ್ತದ ಅನುದಾನ ಅಗತ್ಯವಿರುವುದರಿಂದ ಪಂಚಾಯತ್ ಮಟ್ಟದಲ್ಲಿ ಅದು ಸಾಧ್ಯವೂ ಇಲ್ಲ. ಜನರ ಬೇಡಿಕೆಯನ್ನು ಸರಕಾರಕ್ಕೆ ಕಳುಹಿಸಲಾಗುವುದು.
– ಶೀನ ಎ. ಪ್ರಭಾರ ಪಿಡಿಒ, ಬಿಳಿನೆಲೆ ಗ್ರಾ.ಪಂ. ನಾಗರಾಜ್ ಎನ್.ಕೆ.