ವಿಧಾನ ಪರಿಷತ್ತು: “ಸ್ವತಃ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಈಗ ಚುನಾವಣಾ ಕಣಕ್ಕಿಳಿದು ಪ್ರಚಾರಕ್ಕೆ ಹೋದರೆ, “ನೀನು ಬೇಡ ನಿನ್ನ ಮುಖ ಇರುವ ನೋಟು ಬೇಕು’ ಎಂದು ಕೇಳುವಂತಹ ವಾತಾವರಣವನ್ನು ನಾವು ಸೃಷ್ಟಿಸಿದ್ದೇವೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ. ರವಿ ಬೇಸರ ವ್ಯಕ್ತಪಡಿಸಿದರು.
ಮೇಲ್ಮನೆಯಲ್ಲಿ ಮಂಗಳವಾರ ಸಂವಿಧಾನದ ಮೇಲಿನ ವಿಶೇಷ ಚರ್ಚೆಯಲ್ಲಿ ಮಾತನಾಡಿ, “ನಾವು ಚಿಕ್ಕವರಿದ್ದಾಗ ಚುನಾವಣೆಯಲ್ಲಿ ಯಾರಾದರೂ ನಿರ್ದಿಷ್ಟ ಪ್ರದೇಶಗಳಲ್ಲಿ ಪ್ಯಾಕೆಟ್ ಹಂಚಿದರೆ ದೊಡ್ಡ ಸುದ್ದಿಯಾಗುತ್ತಿತ್ತು. ಈಗ ಚುನಾವಣೆಯಲ್ಲಿ ಹಣ, ಹೆಂಡ ಇಲ್ಲದದ್ದರೆ ಮತದಾರರು ಕೈ-ಬಾಯಿ ನೋಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಇಂದು ಗಾಂಧೀಜಿಯೇ ಚುನಾವಣೆಯಲ್ಲಿ ಸ್ಪರ್ಧಿಸಿದರೆ, ಅವರು ಕೂಡ ಸೋಲುತ್ತಾರೆ’ ಎಂದು ಹೇಳಿದರು.
ಒಂದು ವೇಳೆ ಗಾಂಧೀಜಿ ಪ್ರಚಾರಕ್ಕೆ ಹೋದರೆ, ನೀನು ಬೇಡ ನಿನ್ನ ಮುಖ ಇರುವ ನೋಟು ಬೇಕು ಎಂದು ಹೇಳುತ್ತಾರೆ. ಇಂದಿನ ಈ ಸ್ಥಿತಿಗೆ ನಾವೆಲ್ಲರೂ ಹೊಣೆ ಎಂದು ಬೇಸರ ವ್ಯಕ್ತಪಡಿಸಿದರು. ಇದಕ್ಕೂ ಮುನ್ನ ಜೆಡಿಎಸ್‌ನ ಶ್ರೀಕಂಠೇಗೌಡ ಮಾತನಾಡಿ, “ಇತ್ತೀಚಿಗೆ ನಡೆದ ಕೆ.ಆರ್.ಪೇಟೆ ಉಪ ಚುನಾವಣೆಯಲ್ಲಿ ಹಣದ ಹೊಳೆಯೇ ಹರಿಯಿತು.
ಒಂದು ಕುಟುಂಬಕ್ಕೆ ಹತ್ತು ಸಾವಿರ ನೀಡಿದರೆ, ಐದು ವೋಟು ಮತ್ತು ಐದು ಸಾವಿರ ನೀಡಿದರೆ ಮೂರು ವೋಟು ಎಂದು ಫಿಕ್ಸ್ ಮಾಡಿ, ಹಣ ಹಂಚಿಕೆ ಮಾಡಲಾಗಿದೆ’ ಎಂದು ಚರ್ಚೆಗೆ ನಾಂದಿ ಹಾಡಿದರು. ಆಡಳಿತ ಪಕ್ಷದ ಸದಸ್ಯರು, “ಮಂಡ್ಯ-ಹಾಸನದಲ್ಲಿ ಎಷ್ಟು ಹಣ ಹರಿದಿದೆ ಎಂದು ಪ್ರಶ್ನಿಸಿದರು.
ತಿರುಗೇಟು ನೀಡಿದ ಜೆಡಿಎಸ್‌ನ ರಮೇಶ್‌ಗೌಡ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಗ್ಗೊಲೆ ಮಾಡಿದ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ. ಮಂಡ್ಯ ಉಪ ಚುನಾ ವಣೆಯಲ್ಲಿ ಗೆಲ್ಲಲು ನೀವು ಎಷ್ಟು ಹಣ ಹಂಚಿದ್ದೀರಿ ಎಂಬುದನ್ನು ಬಹಿರಂಗಪಡಿಸಿ ಎಂದರು. ಮಧ್ಯಪ್ರವೇಶಿಸಿದ ಸಿ.ಟಿ. ರವಿ, ಎಲ್ಲರೂ ಸೇರಿ ಚುನಾವಣಾ ವ್ಯವಸ್ಥೆಯನ್ನು ಭ್ರಷ್ಟಗೊಳಿಸಿದ್ದೇವೆ. ಗಾಂಧೀಜಿ ಸ್ಪರ್ಧಿಸಿದರೂ ಅವರು ಕೂಡ ಸೋಲು ತ್ತಾರೆ ಎಂದು ಸಮಜಾಯಿಷಿ ನೀಡಿದರು.