Advertisement

ನೀವು ನುಡಿಸಿದ್ದು ಏನು ಅಂತ ತಿಳೀಲಿಲ್ಲ. ಆದರೆ, ಬಹಳ ಇಮೋಷನಲ ಆಗಿತ್ತು!

01:15 PM Jan 28, 2018 | |

ಶಾಸ್ತ್ರೀಯ ಸಂಗೀತವು ವಯಸ್ಸಾದ ಮೇಲೆ ಕೇಳುವ ಸಂಗೀತ ಎಂಬ ಮಾತೊಂದಿದೆ ನಮ್ಮಲ್ಲಿ. ಶಾಸ್ತ್ರೀಯ ಸಂಗೀತವನ್ನು ಹಾಡುವವರೆಲ್ಲ ವಯಸ್ಸಾದವರು ಎಂಬ ಕಾರಣಕ್ಕಾಗಿ ಯುವ ಪೀಳಿಗೆಯಲ್ಲಿ ಇಂಥ ಮಾತು ಇದ್ದಿರಲೂಬಹುದು. ಅಥವಾ ಕೆಲವೊಮ್ಮೆ ಶಾಸ್ತ್ರೀಯ ಸಂಗೀತವು ನಮಗೆ ಅರ್ಥವಾಗುವುದಿಲ್ಲ. ಹಾಗಾಗಿ, ನಮಗೆ ಆನಂದಿಸುವುದಕ್ಕೆ ಆಗುವುದಿಲ್ಲ ಎಂಬಂಥ ಮಾತನ್ನೂ ಕೇಳುತ್ತೇವೆ. ತಮಾಷೆಯ ಸಂಗತಿಯೆಂದರೆ ನಿಜಕ್ಕೂ ಜೀವನದಲ್ಲಿ ಯಾವುದು ನಮಗೆ ಸರಿಯಾಗಿ ಅರ್ಥವಾಗುತ್ತದೆ ಮತ್ತು ಯಾವಾಗ ಅರ್ಥವಾಗುತ್ತದೆ ಎಂಬ ಸಂಗತಿಯೇ ಸಾಮಾನ್ಯ ಮನಸ್ಸಿನ ಅರ್ಥವ್ಯಾಪ್ತಿಗೆ ನಿಲುಕದೇ ಇರುವಂಥಾದ್ದು. 

Advertisement

ಕಾದಲನ್‌ ಚಲನಚಿತ್ರದ ಪೆಟ್ಟಿ ರಾಪ್‌ ಎಂಬ ಹಾಡಿಗೆ ನಾವು ಮನಸೋ ಇಚ್ಛೆ ಕುಣಿಯುತ್ತೇವೆ ಮತ್ತು ಮಾರನೆಯ ದಿನ ನಮ್ಮ ಮನೆಯ ನಾಯಿಗೆ ಪೆಟ್ಟಿ ಎಂದು ಹೆಸರಿಟ್ಟು ಪ್ರೀತಿಸುತ್ತೇವೆ. ಅದೇ ಚಿತ್ರದ ಮುಕ್ಕಾಲಾ ಮುಕ್ಕಾಬಲಾ ಕೂಡ ನಮ್ಮನ್ನು ನಿಂತಲ್ಲೆ ಹೆಜ್ಜೆ ಹಾಕುವಂತೆ ಮಾಡುತ್ತದೆ ಮತ್ತು ನಮಗೆ ನಾವು ಯಾರೊಂದಿಗೆ ಮುಕ್ಕಾಬಲಾಕ್ಕೆ ಹೊರತಿದ್ದೇವೆ ಎಂಬುದು ಬೇಕಾಗಿರುವುದಿಲ್ಲ. ಮುನ್ನೀ ಯಾಕೆ ಬದನಾಮ… ಆಗುತ್ತಾಳೆ ಎಂಬುದಕ್ಕೂ ಆ ಹಾಡಿಗೆ ಕುಣಿಯುವ ನಮಗೂ ಸಂಬಂಧವಿರುವುದಿಲ್ಲ ಮತ್ತು ಸೊಂಟಾಕ್ಕನಕ್ಕನ್‌ ಹಾಡಿನ ಕಕಾರದ ಒತ್ತಕ್ಷರಕ್ಕೆ ಏನು
ಅರ್ಥವಿದೆಯೋ ಬರೆದವನೇ ಬಲ್ಲ! ಇಂಥ ಹಲವಾರು ಉದಾಹರಣೆಗಳಲ್ಲಿ ಉದಾಹರಣೆಯಿಲ್ಲದಂಥ
ಉನ್ಮಾದದಲ್ಲಿ ಅರ್ಥವಿಲ್ಲದೇ ಕುಣಿಯುತ್ತೇವೆ.

ಹಾಗಿದ್ದಲ್ಲಿ ಶಾಸ್ತ್ರೀಯ ಸಂಗೀತವನ್ನು ನಾವು ಅರ್ಥಮಾಡಿಕೊಂಡು ಕೇಳಲು ಕೂರುತ್ತೇವೆಯಾ? ಸ್ವಲ್ಪ$ಇತ್ತ ಹೊರಳಿ ನೋಡಿದರೆ ನೀ ನಗುವಾ ಮಲ್ಲಿಗೆ ಹೂವಿನ ಮಾಲೆಯಂಥ ಹಾಡನ್ನು ಕೇಳುತ್ತ ಅಜ್ಜ ತನ್ನ ತೀರಿ ಹೋದ ಹೆಂಡತಿಯನ್ನು ನೆನಪಿಸಿಕೊಂಡು ಅಳುತ್ತಾನೆ, ಮೊದಲ ರಾತ್ರಿಯ ನವವಧುವನ್ನು ಕಾಣುತ್ತ ಸೆರಗು ಹಿಡಿದು ಹುಡುಗ ಕರಗುತ್ತಾನೆ, ಹುಡುಗಿ ನಾಚುತ್ತಾಳೆ. ಏಕ ಕಾಲದಲ್ಲಿ ಈ ಮಲ್ಲಿಗೆಯು ನಮ್ಮನ್ನು ಅರಳಿಸಲೂಬಹುದು ಅಥವಾ ಬಾಡಿಸಲೂಬಹುದು. ಹಾಗಿದ್ದರೆ ಅದು ಮಲ್ಲಿಗೆಯ ತಪ್ಪೇನಲ್ಲವಲ್ಲ? ಹಾಡಿನ ಅರ್ಥವ್ಯಾಪ್ತಿ ಹೀಗಿರುತ್ತದೆ.

ಅರ್ಥವಾಗುವುದು ಅಂತೇನೂ ಇಲ್ಲಿಲ್ಲ. ನಮಗೆ ಬೇಕಾದಂತೆ ನಾವು ಆ ಹಾಡಿನ ಭಾವವನ್ನು ಗ್ರಹಿಸುತ್ತೇವೆ. ನಮಗೆ
ಬೇಕಾದ್ದನ್ನು ನಾವು ಅರ್ಥಮಾಡಿಕೊಳ್ಳುತ್ತ ಹೋಗುತ್ತೇವೆ. ಶಾಸ್ತ್ರೀಯ ಸಂಗೀತವನ್ನು ಅರ್ಥಮಾಡಿಕೊಳ್ಳುವುದು
ಎಂಬ ಚೌಕಟ್ಟಿನಿಂದ ಹೊರಬಂದು ನೋಡಿದರೆ ನಮಗೆ ಅದರ ನಿಜವಾದ ಆನಂದದ ಅನುಭೂತಿಯಾಗುತ್ತದೆ.

ಅರ್ಥಮಾಡಿಕೊಳ್ಳುವುದು ಯಾಕೆ? ಅರ್ಥ ಮಾಡಿಕೊಂಡರೆ ಅಥವಾ ಅರ್ಥವ್ಯಾಪ್ತಿಯ ಒಳಹೊಕ್ಕು ನೋಡಿದರೆ ನಮಗೆ ಅರ್ಥವಾಗುವುದು ರಾಗವೊ ಶಾಸ್ತ್ರವೋ? ಇಂಥದೊದು ಚರ್ಚೆ ಶಾಸ್ತ್ರ ಬಲ್ಲವರ ಮತ್ತು ಭಾವ ಬಲ್ಲವರ ನಡುವೆ ಸಾಮಾನ್ಯವಾಗಿ ನಡೆಯುತ್ತಿರುತ್ತದೆ. ಸಂಗೀತದ ವಿಮರ್ಶಕರಲ್ಲಿ ಇಂಥ ಚರ್ಚೆಗಳು ಸಾಮಾನ್ಯ.

Advertisement

ಶಾಸ್ತ್ರ ಗೊತ್ತಿದ್ದು ರಾಗದ ಅನುಭೂತಿಯನ್ನ ಬಯಸುವವರ ಹೊಟ್ಟೆ ಬಹಳ ದೊಡªದು. ಅಲ್ಲಿ ಹೊಸಬರ ಸಂಗೀತವನ್ನು
ಆಸ್ವಾದಿಸುವ ಕುರಿತಾಗಿ ಪೂರ್ವಾಗ್ರಹಪೀಡೆ ಅಂತೊಂದು ಜಗತ್ತಿನ ಅತೀ ಮಾರಕಪೀಡೆಯೊಂದಿರುತ್ತದೆ. ಅಂಥವರಿಗೆ
ಸಂಗೀತವನ್ನು ಆನಂದಿಸಲು ಆ ಸಂಗೀತಗಾರರ ಹೆಸರಿನ ಹಿಂದೆ ಉದ್ದವಾದ ಬಿರುದುಗಳಿರಬೇಕು ಮತ್ತು ಅವರ
ಹಣೆಯ ಮೇಲಿನ ಕುಂಕುಮವು ದೊಡªದಿರಬೇಕು ಅಥವಾ ತಲೆಗೂದಲು ಉದ್ದವಿರಬೇಕು. ಅವರಿಗೆ ಜಗತ್ತಿನ
ಘರಾಣೆಗಳ ಹೆಸರುಗಳು ಬಾಯಿಪಾಠವಾಗಿರುತ್ತವೆ, ಘರಾಣೆಗಳ ತಲೆಮಾರಿನ ಹೆಸರುಗಳು ಅವರ ನಾಲಗೆಯಿಂದ ಪುಂಖಾನುಪುಂಖವಾಗಿ ಹಾರುತ್ತವೆ. ಇಂಥ ಕೇಳುಗರನ್ನು ನಾವು ಒಂದೇ ಶಬ್ದದಲ್ಲಿ ವಿಮರ್ಶಕರು ಎಂದು ಬಿಡಬಹುದು.

ಆಲದ ಮರದ ಬಿಳಲುಗಳನ್ನು ಲೆಕ್ಕಹಾಕುವ ಗಡಿಬಿಡಿಯಲ್ಲಿ ನೆರಳಿನ ಆನಂದವನ್ನು ಕಳೆದುಕೊಳ್ಳುವ ಎಲ್ಲ ಸಾಧ್ಯತೆಗಳೂ ಸಾಮಾನ್ಯವಾಗಿ ಇಂಥ ವಿಮಶಾìವಲಯದಲ್ಲಿ ಇರುತ್ತದೆ. ಮತ್ತೂಂದು ಬದಿಯಲ್ಲಿ ಯಾವ ಶಾಸ್ತ್ರವು ಗೊತ್ತಿರದ, ಹೆಚ್ಚೆಂದರೆ ನಾಲ್ಕಾರು ರಾಗಗಳ ಹೆಸರು ಗೊತ್ತಿರುವ ಮತ್ತು ಶಾಸ್ತ್ರೀಯ ಸಂಗೀತವನ್ನು ಕೇವಲ ಆನಂದಕ್ಕಾಗಿ ಆಲಿಸುವ ಕೇಳುಗರಿದ್ದಾರೆ. ಸಿತಾರಿನ ಎಲ್ಲ ತಂತಿಗಳನ್ನು ಸರಿಯಾಗಿ ಟ್ಯೂನ್‌ ಮಾಡಿ ಒಮ್ಮೆ ಮಿಜರಾಬ್‌ ಹಚ್ಚಿ ನುಡಿಸಿದರೆ ಷಡ್ಜದ ನುಡಿಗೆ ಕಣುಮುಚ್ಚಿ ತಲೆದೂಗುತ್ತಾರೆ ಈ ಬಗೆಯ ಕೇಳುಗರು.

ರಾಗವೊಂದರ ಆಲಾಪದಲ್ಲಿ ಬರುವ ಅಚ್ಚರಿಯನ್ನು ಬರಬಹುದಾದ ರಾಗದ ಸಿಗ್ನೇಚರ್‌ ಧಾಟಿಗಳನ್ನು ಬೆರಗಿನ
ಕಣ್ಣುಗಳಿಂದ ನೋಡುತ್ತ ತಲೆದೂಗುತ್ತಾರೆ. ಭಾವ ತೀವ್ರಗೊಳ್ಳುತ್ತ ಹೋದಂತೆ ಅಳಬೇಕಾದಲ್ಲಿ ಅಳುತ್ತಾರೆ,
ಧ್ಯಾನಿಸಬೇಕಾದಲ್ಲೂ ಕಣ್ಮುಚ್ಚಿ ಕೂರುತ್ತಾರೆ ಮತ್ತು ಕೊನೆಯ ಭಜನೆಗೆ ತಾಳವಾಗುತ್ತಾರೆ ಮತ್ತು ತಾವೇ ಶ್ರುತಿಯಾಗುತ್ತಾರೆ. ಇಂಥವರ ಪಕ್ಕದಲ್ಲಿ ಕುಳಿತು ದರ್ಬಾರೀ ಕಾನಡಾದಲ್ಲಿ ಯಾಕೆ ಠುಮರಿ ಹಾಡುವುದಿಲ್ಲ ಎಂಬಂಥ ಸವಾಲುಗಳನ್ನು ನೀವು ಹಾಕಿದರೆ ಅವರು ನಿಮ್ಮನ್ನು ಪಾಪದವರಂತೆ ನೋಡುತ್ತ ಯಾಕೆ ಎಂದು ಮರುಪ್ರಶ್ನೆ ಹಾಕಿ ಕಛೇರಿಯನ್ನು ಆನಂದಿಸುವತ್ತ ಮಗ್ನರಾಗುತ್ತಾರೆ ಅಷ್ಟೆ.

ಪೆಟ್ಟಿ ರಾಪಿನ ಕುಣಿತವೂ, ಮಲ್ಲಿಗೆ ಮಾಲೆಯಂತೆ ಪೋಣಿಸಿದ ಹಾಡಿನ ಅರ್ಥದ ಅಭ್ಯಾಸವೂ ಶಾಸ್ತ್ರೀಯ ಸಂಗೀತದ ಆನಂದಾನುಭೂತಿಯೂ- ಈ ಮೂರೂ ಪ್ರಕಾರವೂ ಮೂಲದಲ್ಲಿ ಒಂದೇ ಎಂಬುದೊಂದು ಸತ್ಯ ನಮಗೆ ಸಾಮಾನ್ಯದಲ್ಲಿ ಹೊಳೆಯುವುದಿಲ್ಲ.

ರಾಮಾಯಣ-ಮಹಾಭಾರತಗಳಲ್ಲಿಲ್ಲದ ಕಥೆಯನ್ನು ನಾವು ಜಗತ್ತಿನಲ್ಲೆಲ್ಲೂ ಕಾಣಲು ಸಾಧ್ಯವಿಲ್ಲ ಎಂಬುದು ಎಷ್ಟು ಸತ್ಯವೋ ಹಾಗೆಯೇ ನಮ್ಮ ಶಾಸ್ತ್ರೀಯ ಸಂಗೀತದ ಪ್ರಕಾರಗಳಲ್ಲಿ ಇಲ್ಲದ ಯಾವ ಅಂಶವೂ ಬೇರೆ ಯಾವುದೇ ಹೊಸ ಬಗೆಯ ಸಂಗೀತದಲ್ಲಿ ಇರುವುದಿಲ್ಲ ಎಂಬುದೂ ಸತ್ಯ. ಆನಂದವನ್ನು ಅನುಭವಿಸಲು ಅದನ್ನು ಪಡೆಯುವ ಪ್ರಯತ್ನವನ್ನು ನಾವು ಮೊದಲು ಮಾಡಬೇಕಲ್ಲ, ಶಾಸ್ತ್ರೀಯ ಸಂಗೀತದಲ್ಲಿ ಆನಂದವಿದೆ ಎಂದಾದರೆ, ಬ್ರಿಟನ್ನಿನ ದರ್ಬಾರ್‌ ಹಬ್ಬದಲ್ಲಿ ಸಾವಿರ ವರ್ಷಗಳ ಇತಿಹಾಸವಿರುವ ದ್ರುಪದ್‌ ಗಾಯನವನ್ನು ಯುವ ಕಲಾವಿದನೊಬ್ಬ ಹಾಡುತ್ತಿದ್ದರೆ ಕೇಳಲು ಸಾವಿರ ಜನ ನಿಲ್ಲುತ್ತಾರೆ ಎಂದಾದರೆ, ಆನಂದಕ್ಕೂ ವ್ಯವಧಾನಕ್ಕೂ ನಿಜವಾದ ಸಂಬಂಧವಿದೆ ಎಂದು ಹೇಳುವುದೂ ಕಷ್ಟವಾಗುತ್ತದೆ. 

ಆನಂದವನ್ನು ಅರ್ಥ ಮಾಡಿಕೊಳ್ಳುವುದು ಎಂಬ ಪ್ರಯೋಗ ಎಲ್ಲಿಯೂ ಇಲ್ಲ. ಆನಂದವನ್ನು ಅನುಭವಿಸಬೇಕಷ್ಟೆ. ಶಾಸ್ತ್ರೀಯ ಸಂಗೀತದ ಕೇಳುಗರು ವ್ಯವಧಾನ ಕಡಿಮೆಯಿದ್ದರೆ ಛೋಟಾ ಖಯಾಲ… ಕೇಳುತ್ತಾರೆ ಮತ್ತು ಸಮಾಧಾನದ ಶಾಂತಚಿತ್ತರಾಗಿದ್ದರೆ ಬಡಾ ಖಯಾಲ… ಕೇಳಿದ ನಂತರ ಛೋಟಾ ಖಯಾಲ… ಕೇಳುತ್ತಾರೆ ಅಷ್ಟೆ. ನೀವು ನುಡಿಸಿದ್ದು ಏನು ಅಂತ ತಿಳೀಲಿಲ್ಲ. ಆದರೆ ಬಹಳ ಇಮೋಷನಲ… ಆಗಿತ್ತು- ಇಂಥಾದೊಂದು
ಮಾತನ್ನು ಮೂವ್ವತ್ತೈದು ವರ್ಷದ ಜಾರ್ಜ್‌ ಹ್ಯಾರಿಸನ್‌, ಪಂ. ರವಿಶಂಕರರ ಎದುರು ನಿಂತು ಹೇಳುವಾಗ ರಾಕ್‌
ಸಂಗೀತದ ಬಂಡೆಯಂತಿದ್ದ ಅವನಿಗೆ ಭಾರತೀಯ ಶಾಸ್ತ್ರೀಯ ಸಂಗೀತವೆಂದರೇನು ಎಂದು ನಿಜಕ್ಕೂ ಗೊತ್ತಿರಲಿಲ್ಲ.

ಅದೃಷ್ಟವಶಾತ್‌ ಇಂದು ತಂತ್ರಜ್ಞಾನದ ಕಾರಣದಿಂದಾಗಿ ನಾವು ಎಲ್ಲಿದ್ದೂ ಶಾಸ್ತ್ರೀಯ ಸಂಗೀತವನ್ನು ಕೇಳುತ್ತೇವೆ. ಮುಂಚಿನಂತೆ ಫ‌ಕ್ಕನೆ ಜ್ಞಾನೋದಯವಾಗಲು ಕಛೇರಿಗೆ ಹೋಗಬೇಕು ಎಂದಿಲ್ಲ ಮತ್ತು ಸುತ್ತಲಿನ ಓಟದ ನಡುವೆ ಓಡಿ ಸುಸ್ತಾದ ನಮಗೆ ಶಾಸ್ತ್ರೀಯ ಸಂಗೀತವು ಲಘು ಸಂಗೀತಕ್ಕಿಂತ ಹೆಚ್ಚಿನ ಸಮಾಧಾನವನ್ನು ನೀಡುತ್ತದೆ ಮತ್ತು ಯುವ ಪೀಳಿಗೆಗೆ ಆ ಸಮಾಧಾನವನ್ನು, ಬೇಕಾದ ಸಾಂತ್ವನವನ್ನು ಅನುಭಾವ ಮತ್ತು ರಸಾನುಭೂತಿಯ ಮೂಲಕ ಶಾಸ್ತ್ರೀಯ ಸಂಗೀತದ ರಾಗಗಳು ನೀಡುತ್ತವೆ. ನಿಜವಾಗಿ ನೋಡಿದರೆ ಅರ್ಥದ ಜಿಜ್ಞಾಸೆಯ ಸಮಸ್ಯೆಯೂ ಇಲ್ಲಿರುವುದಿಲ್ಲ
ಮತ್ತು ರಾಗವನ್ನು ಅನುಸರಿಸುವ ಅನುರಾಗಕ್ಕೆ ವಯಸ್ಸಿನ ಅಂತರದ ಸಮಸ್ಯೆಯೂ ಇರುವುದಿಲ್ಲ 

Advertisement

Udayavani is now on Telegram. Click here to join our channel and stay updated with the latest news.

Next