ಮುಂಬಯಿ : ಅಮೆರಿಕದಲ್ಲಿ ನಾಗರಿಕ ವಾಯು ಪ್ರಯಾಣಕ್ಕೆ ಹೆಲಿಕಾಪ್ಟರ್ ಹಾರಾಟವನ್ನು ವ್ಯವಸ್ಥೆಗೊಳಿಸುವ ಅತೀ ದೊಡ್ಡ ಸಂಸ್ಥೆಯಾಗಿರುವ ಫ್ಲೈ ಬ್ಲೇಡ್ ಇಂಕ್, 2019ರ ಮಾರ್ಚ್ ನಿಂದ ಭಾರತದಲ್ಲಿ ತನ್ನ ಸೇವೆಯನ್ನು ಮುಂಬಯಿ – ಪುಣೆ ನಡುವೆ ಆರಂಭಿಸಲಿದೆ.
ಮುಂಬಯಿಯ ಜುಹು ಮತ್ತು ಮಹಾಲಕ್ಷ್ಮೀ ಯಿಂದ ಪುಣೆಗೆ ಹೆಲಿಕಾಪ್ಟರ್ ಹಾರಲಿದೆ. ಕ್ರಮೇಣ ಈ ಸೇವೆಯನ್ನು ಶಿರಡಿಗೂ ವಿಸ್ತರಿಸಲಾಗುವುದು ಎಂದು ಸಂಸ್ತೆಯ ಪ್ರಕಟನೆ ತಿಳಿಸಿದೆ.
ಅಮೆರಿಕದ ಹೊರಗೆ ಇದೇ ಮೊದಲ ಬಾರಿಗೆ ತನ್ನ ಸೇವೆಯನ್ನು ಆರಂಭಿಸುವ ಅಮೆರಿಕನ್ ಕಂಪೆನಿ ಫ್ಲೆ ಬ್ಲೇಡ್ ಇಂಕ್, ದಿಲ್ಲಿ ಮೂಲ ಶೇರು ಹೂಡಿಕೆ ಸಂಸ್ಥೆ ಹುಂಚ್ ವೆಂಚರ್ ಜತೆಗೆ ಭಾಗೀದಾರಿಕೆಯನ್ನು ಹೊಂದಿದೆ. ಹುಂಚ್ ವೆಂಚರ್ ಈ ಸಹೋಧ್ಯಕ್ಕೆ 10 ಕೋಟಿ ಡಾಲರ್‌ಗಳ ಹೂಡಿಕೆ ಮಾಡಿದೆ.
ಹೆಲಿಕಾಪ್ಟರ್ ಹಾರಾಟ ವೆಚ್ಚವು ಪ್ರಯಾಣಿಕರಿಗೆ ಬಾಡಿಗೆ ಜೆಟ್ ವಿಮಾನಕ್ಕಿಂತ ಬಹಳಷ್ಟು ಕಡಿಮೆ ಇರುತ್ತದೆ. ನಾಗರಿಕರು ತಮ್ಮ ವಾಯು ಪ್ರಯಾಣಕ್ಕಾಗಿ ವಿಮಾನ ನಿಲ್ದಾಣಗಳಿಗೆ ಹೋಗುವ ಉಸಾಬರಿಯೇ ಇರುವುದಿಲ್ಲ.
ಮೋಟಾರು ವಾಹನಗಳ ಮೂಲಕ ನಾಲ್ಕರಿಂದ ಎಂಟು ತಾಸುಗಳ ಅನಿಶ್ಚಿತತೆಯ ರಸ್ತೆ ಪ್ರಯಾಣ ಕೈಗೊಳ್ಳುವ ಬದಲು ಹೆಲಿಕಾಪ್ಟರ್ ಮೂಲಕ ಕೇವಲ 35 ನಿಮಿಷಗಳಲ್ಲಿ ಪ್ರಯಾಣವನ್ನು ಸುಖಕರವಾಗಿ ಮುಗಿಸಬಹುದಾಗಿದೆ ಎಂದು ಬ್ಲೇಡ್ ಸಿಇಓ ರಾಬ್ ವೆಸೆಂಥಾಲ್ ಹೇಳಿದ್ದಾರೆ.
ಈ ವರ್ಷ ಮೇ ತಿಂಗಳ ವರೆಗೂ ಏರ್ ಏಶ್ಯ ಇಂಡಿಯಾ ಇದರ ಮುಖ್ಯಸ್ಥರಾಗಿದ್ದ ಅಮರ್ ಆಬ್ರೋಲ್ ಅವರು ಬ್ಲೇಡ್ ಇಂಡಿಯಾ ದ ಸಿಇಓ ಆಗಿದ್ದಾರೆ.