ದಾವಣಗೆರೆ: ಕಳೆದು ಹೋದ ವಸ್ತುಗಳ ಬಗ್ಗೆ ದೂರು ನೀಡಲು ನಾಗರಿಕರು ಇನ್ನು ಮುಂದೆ ಪೊಲೀಸ್ ಠಾಣೆಗಳನ್ನು ಹುಡುಕಿಕೊಂಡು ಅಲೆಯಬೇಕಾಗಿಲ್ಲ. ತಮ್ಮಲ್ಲಿರುವ ಸ್ಮಾರ್ಟ್ ಫೋನ್‌ನಿಂದ ಕೂತಲ್ಲಿಂದಲೇ ದೂರು ದಾಖಲಿಸಿ ಡಿಜಿಟಲ್ ಸ್ವೀಕೃತಿ ಪಡೆಯಬಹುದು.
ಹೌದು, ಇಂಥದ್ದೊಂದು ವಿಶೇಷ ಸೌಲಭ್ಯವನ್ನು ಜಿಲ್ಲಾ ಪೊಲೀಸ್ ಇಲಾಖೆ ಅನುಷ್ಠಾನಗೊಳಿಸಿದೆ. ಸಾರ್ವಜನಿಕರು ತಮ್ಮ ಕೆಲಸಗಳಿಗೆ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ವಿವಿಧ ಸರ್ಕಾರಿ, ಖಾಸಗಿ ಸಂಸ್ಥೆಗಳು ತಮ್ಮ ವ್ಯವಹಾರವನ್ನು ಸಂಪೂರ್ಣ ಡಿಜಿಟಲೀಕರಣಗೊಳಿಸಿ ಇ-ಸೇವೆ ಮೂಲಕ ಸಾರ್ವಜನಿಕರು ಕೂತಲ್ಲಿಂದಲೇ ತಮ್ಮ ವ್ಯವಹಾರ ಮಾಡಲು ಅನುಕೂಲ ಕಲ್ಪಿಸಿವೆ.
ಅದೇ ರೀತಿ ಪೊಲೀಸ್ ಇಲಾಖೆ ಸಹ ತಂತ್ರಜ್ಞಾನ ಬಳಸಿಕೊಂಡು ಅನೇಕ ಇ-ಸೇವೆ ನೀಡುತ್ತಿದ್ದು ಇದರಲ್ಲಿ ಕಳೆದುಕೊಂಡ ವಸ್ತು, ದಾಖಲೆಗಳಿಗೆ ಸಂಬಂಧಿಸಿ ಆ್ಯಪ್ ಮೂಲಕ ದೂರು ದಾಖಲಿಸುವ ಸೇವೆ ಸೇರ್ಪಡೆಗೊಳಿಸಿದೆ. ಸಾರ್ವಜನಿಕರು ತಮ್ಮ ಮೊಬೈಲ್ ನಿಂದಲೇ ಕಳೆದುಕೊಂಡ ವಸ್ತುಗಳ ಬಗ್ಗೆ ಪೊಲೀಸ್ ದೂರು ನೀಡಲು ಪೊಲೀಸ್ ಇಲಾಖೆ “ಇ- ಲಾಸ್ಟ್ ರಿಪೋರ್ಟ್’ ಎಂಬ ಆ್ಯಪ್ ಅಭಿವೃದ್ಧಿ ಪಡಿಸಿದೆ. ಈಗಾಗಲೇ ಬೆಂಗಳೂರು ಮಹಾನಗರದಲ್ಲಿ ಈ ವ್ಯವಸ್ಥೆ ಅಳವಡಿಸಲಾಗಿದ್ದು ಇದನ್ನೇ ಜಿಲ್ಲೆಯಲ್ಲಿಯೂ ವಿಸ್ತರಿಸಲಾಗಿದೆ. ಇ-ಲಾಸ್ಟ್ ಆ್ಯಪ್‌ನಿಂದಾಗಿ ಸಾರ್ವಜನಿಕರು ಪೊಲೀಸ್ ಠಾಣೆಗೆ ಅಲೆದಾಡುವುದನ್ನು ತಪ್ಪಿಸುವಲ್ಲಿ ಸಹಕಾರಿಯಾಗಲಿದೆ. ತನ್ಮೂಲಕ ಜನರ ಸಮಯ, ಹಣ ವ್ಯಯ ತಪ್ಪಲಿದೆ. ಆದರೆ ಇ- ದೂರು ವ್ಯವಸ್ಥೆ ಇರುವುದು ಕೇವಲ ಕಳೆದ ಹೋದ ವಸ್ತು, ದಾಖಲೆಗೆ ಮಾತ್ರ. ಕಳ್ಳತನವಾದ ವಸ್ತುವಿಗೆ ಈ ವ್ಯವಸ್ಥೆ ಅನ್ವಯಿಸುವುದಿಲ್ಲ ಎಂಬುದನ್ನು ನಾಗರಿಕರು ಗಮನಹರಿಸಬೇಕಿದೆ.
ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಡ್ರೈವಿಂಗ್ ಲೈಸನ್ಸ್, ಚೆಕ್, ಡಿಡಿ, ಗುರುತಿನಚೀಟಿ, ಲ್ಯಾಪ್‌ಟಾಪ್, ಐಪ್ಯಾಡ್, ಮೊಬೈಲ್, ವೋಟರ್ ಕಾರ್ಡ್, ಪಾನ್‌ಕಾರ್ಡ್, ಪಾಸ್‌ಪೋರ್ಟ್, ರೇಶನ್ ಕಾರ್ಡ್, ವಿಡಿಯೋ ಕ್ಯಾಮರಾ, ಶೈಕ್ಷಣಿಕ ದಾಖಲಾತಿಗಳು ಸೇರಿದಂತೆ 15ಕ್ಕೂ ಹೆಚ್ಚು ದಾಖಲೆಗಳು ಇಲ್ಲವೇ ವಸ್ತುಗಳು ಕಳೆದುಹೋದ ಸಂದರ್ಭದಲ್ಲಿ ನಾಗರಿಕರು ಇ-ಲಾಸ್ಟ್ ಆ್ಯಪ್ ಡೌನ್ ಲೋಡ್ ಮಾಡಿಕೊಂಡು ಕೂತಲ್ಲಿಂದಲೇ ದೂರು ದಾಖಲಿಸಬಹುದಾಗಿದೆ.
ಆ್ಯಪ್ ಡೌನ್‌ಲೋಡ್ ಹೀಗೆ ಮಾಡಿ: ಈ ಸೌಲಭ್ಯ ಪಡೆಯಲು ನಾಗರಿಕರು ತಮ್ಮ ಮೊಬೈಲ್‌ನಲ್ಲಿರುವ ಪ್ಲೇಸ್ಟೋರ್ ನಲ್ಲಿ ಇ-ಲಾಸ್ಟ್ ರಿಪೋರ್ಟ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು. ದೂರು ದಾಖಲಿಸುವ ಮುನ್ನ ದೂರುದಾರ ತನ್ನ ಪ್ರಾಥಮಿಕ ವಿವರ ಸಲ್ಲಿಸಿ ನೋಂದಾಯಿಸಿಕೊಳ್ಳಬೇಕು. ಕಳೆದುಹೋದ ವಸ್ತು ಅಥವಾ ದಾಖಲೆಯ ವಿವರ, ಯಾವ ಸ್ಥಳದಲ್ಲಿ, ಯಾವ ಠಾಣೆ ವ್ಯಾಪ್ತಿ, ಕಳೆದುಹೋದ ಸಮಯ ಇತ್ಯಾದಿ ಮಾಹಿತಿಯನ್ನು ದಾಖಲಿಸಬೇಕು. ಹೀಗೆ ಮಾಹಿತಿ ದಾಖಲಿಸಿ ಸಲ್ಲಿಸಿದ ಬಳಿಕ ಸಂಬಂಧಪಟ್ಟ ಪೊಲೀಸ್ ಠಾಣೆಯಿಂದ ದೂರುದಾರನ ಮೊಬೈಲ್‌ಗೆ ಹಾಗೂ ಇ ಮೇಲ್‌ಗೆ ದೂರು ಸ್ವೀಕೃತಿ ವರದಿ ಬರುತ್ತದೆ.
ಈ ಡಿಜಿಟಲ್ ದೂರು ಸ್ವೀಕೃತಿಯ ಆಧಾರದ ಮೇಲೆ ಕಳೆದುಹೋದ ದಾಖಲೆಗಳ ನಕಲು ಪ್ರತಿ ಪಡೆಯಬಹುದಾಗಿದೆ. ಕಳೆದುಕೊಂಡ ವಸ್ತುಗಳ ಬಗ್ಗೆ ಮೊಬೈಲ್‌ನಿಂದಲೇ ಪೊಲೀಸ್ ಠಾಣೆಗೆ ದೂರು ಸಲ್ಲಿಸಲು ಪೊಲೀಸ್ ಇಲಾಖೆ ಕಲ್ಪಿಸಿದ ಈ ಸೌಲಭ್ಯವನ್ನು ನಾಗರಿಕರು ಬಳಸಿಕೊಳ್ಳುವ ಮೂಲಕ ಪೊಲೀಸ್ ಠಾಣೆಯ ಓಡಾಟ, ಸಮಯ, ಹಣ ಉಳಿತಾಯ ಮಾಡಿಕೊಳ್ಳಬಹುದಾಗಿದೆ.