ಹುಣಸೂರು: ದೇಶಾದ್ಯಂತ ಗೋಹತ್ಯೆ ನಿಷೇಧ ಜಾರಿಯಲ್ಲಿದೆ. ಆದರೆ ನಗರದಲ್ಲಿ ಅಕ್ರಮ ಗೋಮಾಂಸ ಮಾರಾಟ ಹಾಗೂ ಹತ್ಯೆ ಬಗ್ಗೆ ವ್ಯಾಪಕ ದೂರುಗಳು ಬಂದಿವೆ. ಸಂಪೂರ್ಣ ಬಂದ್‌ಗೆ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ನಿಮ್ಮನ್ನೇ ಹೊಣೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ನಗರಸಭೆ ಪೌರಾಯುಕ್ತ ಶಿವಪ್ಪನಾಯಕರಿಗೆ ಎಚ್ಚರಿಕೆ ನೀಡಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸಚಿವರ ಅಹವಾಲು ಸ್ವೀಕಾರ ಸಭೆಯಲಿ ಹುಣಸೂರು ನಗರ, ಕಟ್ಟೆಮಳಲವಾಡಿ, ರತ್ನಪುರಿಯಲ್ಲಿ ಗೋಹತ್ಯೆ ಹಾಗೂ ಗೋಮಾಂಸ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ಈ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದರೂ ಕ್ರಮಕೈಗೊಂಡಿಲ್ಲ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ಯೋಗಾನಂದಕುಮಾರ್, ನಗರ ಅಧ್ಯಕ್ಷ ರಾಜೇಂದ್ರ ದೂರಿದರು. ಕೂಡಲೇ ಸಚಿವರು, ಕಸಾಯಿಖಾನೆ ಮುಚ್ಚಿಸಲು ಆದೇಶಿಸಿದರು.
ರಸ್ತೆ ನಿಷೇಧ ತೆರವುಗೊಳಿಸಿ: ತಾಲೂಕು ಹನುಮಂತ ಜಯಂತಿ ಸಮಿತಿ ವಿ.ಎನ್.ದಾಸ್, ಬಿಜೆಪಿ ಅಧ್ಯಕ್ಷ ಯೋಗಾನಂದಕುಮಾರ್, ಮುಖಂಡ ಸುಬ್ಬರಾವ್, ರಾಜೇಂದ್ರ, ಅಪ್ಪಣ್ಣಯ್ಯರು ಕರ್ನಾಟಕ ರಾಜ್ಯೋತ್ಸವ ಮೆರವಣಿಗೆ ಸೇರಿದಂತೆ ಎಲ್ಲ ಧಾರ್ಮಿಕ ಆಚರಣೆಗೂ ನಗರದ 3 ರಸ್ತೆಗಳಲ್ಲಿ ನಿರ್ಬಂಧವಿದೆ. ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂಬ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ತಕ್ಷಣವೇ ರಸ್ತೆಗಳ ನಿರ್ಬಂಧ ತೆರವುಗೊಳಿಸುಲು ಕ್ರಮವಹಿಸಬೇಕು ಎಂದು ಉಪವಿಭಾಗಾಧಿಕಾರಿ ವೀಣಾ, ಡಿವೈಎಸ್‌ಪಿ ಸುಂದರ್‌ರಾಜ್‌ಗೆ ಸೂಚಿಸಿದರು.
ಕಲುಷಿತ ನೀರು-ಬೆಳೆಯಲಾಗದ ಸ್ಥಿತಿ: ನಗರಸಭೆಯಿಂದ ಕಲ್ಕುಣಿಕೆ ಬಳಿಯಲ್ಲಿ 4 ಎಕರೆ ಪ್ರದೇಶದಲ್ಲಿ ನಿರ್ಮಿಸಿರುವ ಒಳಚರಂಡಿ ನೀರು ಸಂಸ್ಕರಿಸುವ ಘಟಕವನ್ನು ಸಿಮೆಂಟ್ ತೊಟ್ಟಿ ನಿರ್ಮಿಸದೆ, ವೈಜ್ಞಾನಿಕವಾಗಿ ಸಂಸ್ಕರಿಸದೇ ಹರಿಸಲಾಗುತ್ತಿದೆ. ಕಲುಷಿತ ನೀರು ಅಂತರ್ಜಲಕ್ಕೆ ಸೇರಿ ಸುತ್ತಮುತ್ತಲಿನ 200 ಎಕರೆ ಪ್ರದೇಶದಲ್ಲಿ ಕಳೆದ ನಾಲ್ಕು ವರ್ಷದಿಂದ ಬೆಳೆ ಬೆಳೆಯಲಾಗುತ್ತಿಲ್ಲ. ಅಂತರ್ಜಲ ಮತ್ತಷ್ಟು ಕಲುಷಿತಗೊಂಡಿದ್ದು, ಬೋರ್‌ವೆಲ್‌ಗಳಲ್ಲಿ ಕಪ್ಪು ಮಿಶ್ರಿತ ನೀರು ಬರುತ್ತಿದೆ. ಈ ವರ್ಷ ಬಿದ್ದ ಮಳೆಯಿಂದ ಜೌಗು ಉಂಟಾಗಿ ಈ ಬಾರಿ ಬೆಳೆಯನ್ನೇ ಬೆಳೆಯಲಾಗದ ಸ್ಥಿತಿಗೆ ತಲುಪಿದ್ದೇವೆಂದು ಮುಖಂಡ ವೆಂಕಟೇಶ್ ಸೇರಿದಂತೆ ಅನೇಕ ರೈತರು ಮಾಡಿದ ಮನವಿಗೆ ಖುದ್ದು ಸ್ಥಳಪರಿಶೀಲಿಸಿದ್ದೇನೆ. ಇನ್ನು ನಾಲ್ಕು ತಿಂಗಳ ಕಾಲಾವಕಾಶ ನೀಡಿದಲ್ಲಿ ಇಲ್ಲಿನ ಸಮಸ್ಯೆ ಬಗೆಹರಿಸುತ್ತೇನೆಂದು ಸಚಿವರು ವಾಗ್ಧಾನ ಮಾಡಿದರು.
ಡಿಪೊ ಮ್ಯಾನೇಜರ್ ಕಿರುಕುಳ ಆರೋಪ: ಇಲ್ಲಿನ ಸಾರಿಗೆ ಸಂಸ್ಥೆಯ ಡಿಪೋ ಮ್ಯಾನೇಜರ್ ವಿಪಿನ್ ಕೃಷ್ಣ ಸಂಸ್ಥೆಯ ಸಿಬ್ಬಂದಿಗೆ ವಿನಾಕಾರಣ ಕಿರುಕುಳ ನೀಡುತ್ತಿದ್ದಾರೆ, ಇವರಿಂದಾಗಿ ಕರ್ತವ್ಯ ನಿರ್ವಹಿಸುವುದೇ ಕಷ್ಟವಾಗಿದೆ ಎಂದು ಅವರ ವಿರುದ್ದ ಮನವಿ ಸಲ್ಲಿಸಿದರು, ಈ ವೇಳೆ ದರ್ಪ ಬಿಡಿ, ಸಿಬ್ಬಂದಿಗಳೊಂದಿಗೆ ಸ್ನೇಹದಿಂದ ವರ್ತಿಸಿ, ನಿಮಗಿನ್ನೂ ಸರ್ವಿಸ್ ಇದೆ, ಪ್ರಯಾಣಿಕರ ಹಾಗೂ ನಿಮ್ಮ ಸಿಬ್ಬಂದಿಗಳ ಹಿತವನ್ನೂ ಕಾಯಬೇಕು, ಹೀಗಾಗಿ ಎಲ್ಲರೊಂದಿಗೆ ವಿಶ್ವಾಸದೊಡನೆ ಕಾರ್ಯನಿರ್ವಹಿಸಿರೆಂದು ತಾಕೀತು ಮಾಡಿದರು.
ಉಪವಿಭಾಗಾಧಿಕಾರಿ ವೀಣಾ, ತಹಶೀಲ್ದಾರ್ ಬಸವರಾಜ್, ಪೌರಾಯುಕ್ತ ಶಿವಪ್ಪನಾಯಕ, ಡಿವೈಎಸ್‌ಪಿ ಸುಂದರರಾಜ್, ಬಿ.ಜೆ.ಪಿ.ಜಿಲ್ಲಾಧ್ಯಕ್ಷ ಶಿವಣ್ಣ, ಮಹಿಳಾಘಟಕದ ವೆಂಕಟಲಕ್ಷ್ಮಮ್ಮ, ಹಬ್ಬನಕುಪ್ಪೆ ದಿನೇಶ್, ನಾಗಣ್ಣ, ನೀರಾವರಿ ಹಾಗೂ ಲೋಕೋಪಯೋಗಿ ಇಲಾಖೆ ಇಂಜಿನಿಯರ್‌ಗಳು, ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.