ರಾತ್ರಿಯಲ್ಲೊಂದು ನಾಳೆಯ ಹುಟ್ಟಿಗೆ ಕಾದು, ಕರಗಿ ಹೋದ ಚೆಂದದ ಹಗಲಿರುತ್ತದೆ ಎನ್ನುತ್ತಾರೆ. ಸಾಕು ಅನ್ನುವ ಕಷ್ಟದ ಹಿಂದೆ ಸುಖವಿದೆ ಅಂತಾರೆ. ಹುಡುಗಿ, ನನ್ನನ್ನು ತಿರಸ್ಕರಿಸು. ನಿಲ್ಲಿಸಿ ಬೈದು ಬಿಡು. ಆದರೆ ಎಲ್ಲಾ ಮುಗಿದ ಮೇಲೂ ನನ್ನನ್ನು ಆಜನ್ಮ ವೈರಿಯಂತೆ ದ್ವೇಷಿಸು. ನಾನೇನು ನಿನ್ನ ಪ್ರೀತಿ ಕೇಳಲಾರೆ. ಎಲ್ಲಾ ದ್ವೇಷ ಕರಗಿ ಕಳೆದಮೇಲೆ ಪ್ರೀತಿ ತಾನೇ ಉಳಿಯಬೇಕು?
ಮತ್ತೂಮ್ಮೆ ಎಲ್ಲವನ್ನೂ ತಂದು ನಿನ್ನ ಮುಂದೆ ಹರವಿ ನೆನಪಿಸಲಾರೆ! ಪ್ರೀತಿಗೆ, ಜನ್ಮ ಪೂರ್ತಿ ತೊಳೆದುಕೊಂಡರೂ ಹೋಗದಷ್ಟು ನೆನಪುಗಳಿರುತ್ತವೆ. ನಾನಂತೂ ಅವುಗಳನ್ನು ತೊಟ್ಟೇ ಬದುಕುತ್ತಿದ್ದೇನೆ. ಆದರೆ, ನನಗೆ ಆಶ್ಚರ್ಯವೆನಿಸುವುದು ನಿನ್ನ ಬಗ್ಗೆ. ಎಷ್ಟೋ ಬಾರಿ ನಿನ್ನದು ಬರೀ ನಾಟಕವಾ ಅನಿಸಿದ್ದೂ ಇದೆ. “ಈ ಜಗತ್ತಿನಲ್ಲಿ ನಮಗೆ ಜಾಗವಿಲ್ಲವೆಂದರೆ ಇಬ್ಬರೂ ಒಟ್ಟಿಗೆ ಎದ್ದು ಹೋಗಿ ಬಿಡೋಣ ಕಣೋ’ ಅಂತ ಕಣ್ತುಂಬಿಕೊಂಡಿದ್ದವಳು ನೀನೇನಾ?
ತಪ್ಪು ನನ್ನದಾ? ನಿನ್ನದಾ? ಅಥವಾ ನಮ್ಮನ್ನು ಕಂಡು ಹೊಟ್ಟೆಕಿಚ್ಚು ಪಟ್ಟ ಬದುಕೇ ನಮ್ಮ ದಾರಿಗೆ ಎಡವಲು ಕಲ್ಲನಿಟ್ಟಿತೊ ಏನೋ? ಆಗಿದ್ದು ಆಗಿ ಹೋಯ್ತು. ಬದುಕು ಬರಿ ಆವೊಂದು ದಿನದ್ದು ಅಷ್ಟೇ ಅಲ್ಲವಲ್ಲ! ಈ ಜಗಳದಿಂದ ನೀನು ಯು ಟರ್ನ್ ತೆಗೆದುಕೊಳ್ಳುತ್ತೀ ಅಂದುಕೊಂಡೆ. ದ್ವೇಷ ಕಾರುತ್ತೀ ಅಂದುಕೊಂಡೆ. ಅದೆಲ್ಲವೂ ದಿನೇ ದಿನೆ ಕರಗಿಹೋದ ಮೇಲೆ ಅಲ್ಲಿ ಪ್ರೀತಿ ಅಲ್ಲದೆ ಮತ್ತೆ ತಾನೇ ಏನು ಉಳಿದೀತು? ಅಂದುಕೊಂಡು ಸುಮ್ಮನಿದ್ದೆ ಆದರೆ ಆಗಿದ್ದೇ ಬೇರೆ!
ಸಾರಿ, ಯಾರು ನೀವು? ಅಂತ ಮುಖದ ಮೇಲೆ ಯಾವ ಭಾವದ ಗೆರೆಗಳು ಕೂಡ ಇಲ್ಲದೆ ನೀನು ಪ್ರಶ್ನೆ ಎಸೆದು ನಿಂತರೆ ನನ್ನಂಥ ಬಡಪಾಯಿಗೆ ಏನಾಗಬೇಡ? ಬದುಕುವುದಾದರೂ ಹೇಗೆ ಹೇಳು? ನಿನಗೆ, ನನ್ನ ಕಡೆ ಒಲವಿಲ್ಲದಿದ್ದರೂ ಒಂದು ಸಣ್ಣ ಮುನಿಸು, ದ್ವೇಷವಿರುತ್ತೆ ಅಂದುಕೊಂಡವನಿಗೆ, ನೀನು ಯಾವೂರು ದಾಸಯ್ಯ ಅನ್ನುವಂಥ ಲುಕ್ ಕೊಟ್ಟೆ. ಸಂಬಂಧವೇ ಇಲ್ಲದ ಮನುಷ್ಯನೊಬ್ಬನಿಗೆ ಹಲೋ ಅಂದಾಗ ಸುಮ್ಮನೆ ತಿರುಗಿ ನೋಡುತ್ತಾನಲ್ಲ, ಅಂಥದೊಂದು ನೋಟವಿತ್ತು ನಿನ್ನಲ್ಲಿ!
ಉಳಿದಿರುವ ಬರೀ ಮುಕ್ಕಾಲು ಪಾಲು ಬದುಕಿಗೆ ಇವೆಲ್ಲ ಬೇಕಾ? ಸಂಧಾನ, ಮಾತುಕತೆ, ತೀರ್ಮಾನ ಇವುಗಳಲ್ಲಿ ನಂಬಿಕೆ ಇಲ್ಲ ನನಗೆ. ಏನೇ ಆಗುವುದಿದ್ದರೂ ಅಲ್ಲಿ ಮಾತ್ರ ಆಗಬೇಕು. ಆದ ತಪ್ಪಿನಿಂದ ಮನಸ್ಸು ನೊಂದು, ಎಲ್ಲವನ್ನೂ ತೊಳೆದುಕೊಂಡು ನಿಂತಿದೆ. ಮತ್ತೂಮ್ಮೆ ಬಾಳಿಗೆ ಬಲಗಾಲನಿಡು. ಪ್ರೀತಿ ಹೊತ್ತು ಬಾರದಿದ್ದರೂ ಕನಿಷ್ಠ ಪಕ್ಷ ದ್ವೇಷವನ್ನಾದರೂ ಇಟ್ಟುಕೊಂಡು ಬಾ.
ಸದಾ, ಚಿಂತಾಮಣಿ