Advertisement

ನೀ ಬಲು ದೊಡ್ಡ ಮಾಯಾವಿ

08:47 PM Nov 04, 2019 | mahesh |

ಇನ್ನೇನು ಮದುವೆ ಎಂಬ ಬಂಧನದಲ್ಲಿ ಬಂಧಿಯಾಗುವೆ ಎನ್ನುವ ಆಸೆಯೂ ತುದಿಗಾಲಿನಲ್ಲಿತ್ತು. ನನ್ನ ಬದುಕಿಗೆ ನೀ ಜೊತೆಗಾರನಾಗುವೆ ಅನ್ನೋ ಕನಸು ನನ್ನ ಕಣ್ಣ ತುಂಬ. ತಾಯಿಯ ಪ್ರೀತಿಯ ನಿನ್ನ ಅಮ್ಮನಲ್ಲಿ ಕಂಡೆ. ಆದರೆ ವಿಧಿಯು ನನ್ನ ಮುಂದೆ ತಿರುಗಿ ನಿಂತಿತ್ತು ಎಂದು ನನಗೆ ಅರಿವಿಗೇ ಬರಲೇ ಇಲ್ಲ.

Advertisement

ನನ್ನದು ರಂಗುರಂಗಿನ ಬದುಕು. ಕಣ್ಣ ತುಂಬಾ ಸಾವಿರ ಕನಸು, ತಾಳ್ಮೆಯೇ ನನಗಿರುವ ಬಹುದೊಡ್ಡ ಆಸ್ತಿ. ಜೀವನದ ಪ್ರತಿ ಹೆಜ್ಜೆಯಲ್ಲಿ ನಾನು ಒಂಟಿ. ತಂದೆ ತಾಯಿಯ ಪ್ರೀತಿಯಿಂದ ವಂಚಿತಳಾದವಳು. ಬಂಧುಗಳ ಆಸರೆಯೂ ಸಿಗಲಿಲ್ಲ. ಆದರೂ, ಅದು ಹೇಗೋ ಜೀವನದ ಹಾದಿ ಸಾಗುತ್ತಿತ್ತು. ಅಂಥ ಸಂದರ್ಭದಲ್ಲೇ ಒಂದೇ ಸಮನೆ ಸುರಿಯುವ ಮಳೆಯಂತೆ ನನ್ನ ಬದುಕಿನ ಅಂಗಳಕ್ಕೆ ನೀ ಲಗ್ಗೆ ಇಟ್ಟೆ. ಹಿಡಿ ಪ್ರೀತಿಗಾಗಿ ದಿನವೂ ಹಂಬಲಿಸಿದ್ದವಳಿಗೆ ನೀ ಕೈ ಚಾಚಿದಾಗ ಒಲ್ಲೆ ಎನ್ನುವ ಮನಸ್ಸು ಬರಲಿಲ್ಲ.

ಬದುಕಿನ ದಾರಿಯಲ್ಲಿ ಒಂಟಿಯಾಗಿ ಸಾಗುತ್ತಿದ್ದ ನನಗೆ ಒಂದು ಜೀವದ ಅವಶ್ಯಕತೆ ಇತ್ತು. ನೀ ಸಿಕ್ಕಾಗ ನನಗೆ ಇಷ್ಟು ವರ್ಷದ ಕಾಳಜಿ, ನಂಬಿಕೆ, ಸ್ನೇಹ, ಪ್ರೀತಿಯನ್ನು ನಿನ್ನಲ್ಲಾದರೂ ಕಾಣಬಹುದು ಎಂಬ ಹೆಬ್ಬಯಕೆ. ಒಂದಲ್ಲ, ಎರಡಲ್ಲ ಸುಮಾರು ಆರು ವರ್ಷಗಳು ಜೊತೆಯಾಗಿ ಸಾಗಿದೆವು.

ಇನ್ನೇನು ಮದುವೆ ಎಂಬ ಬಂಧನದಲ್ಲಿ ಬಂಧಿಯಾಗುವೆ ಎನ್ನುವ ಆಸೆಯೂ ತುದಿಗಾಲಿನಲ್ಲಿತ್ತು. ನನ್ನ ಬದುಕಿಗೆ ನೀ ಜೊತೆಗಾರನಾಗುವೆ ಅನ್ನೋ ಕನಸು ನನ್ನ ಕಣ್ಣ ತುಂಬ. ತಾಯಿಯ ಪ್ರೀತಿಯ ನಿನ್ನ ಅಮ್ಮನಲ್ಲಿ ಕಂಡೆ. ಆದರೆ ವಿಧಿಯು ನನ್ನ ಮುಂದೆ ತಿರುಗಿ ನಿಂತಿತ್ತು ಎಂದು ನನಗೆ ಅರಿವಿಗೇ ಬರಲೇ ಇಲ್ಲ. ಬದುಕಿನಲ್ಲಿ ಎಲ್ಲರೂ ಸಿಕ್ಕರು ಎಂದುಕೊಳ್ಳುವಷ್ಟರಲ್ಲಿ ನೀನು ನಿನ್ನವರು ನನಗರಿವಿಲ್ಲದೇನೇ ದೂರವಾಗಲು ತುದಿಗಾಲಲ್ಲಿ ನಿಂತಿದ್ದಿರಿ. ಕಾಲ ಕಳೆದ ಹಾಗೆ ನಾನು ನಿನ್ನ ಮನೆಯವರಿಗೆ ಬೇಡವಾದೆ ಅಲ್ವಾ?

ನನ್ನ ಬದುಕಿನಲ್ಲಿ ಸಂಬಂಧದ ಕೊರತೆ ಇಂಚಿಂಚು ಕಾಡಿದ್ದನ್ನು ಬಿಟ್ಟರೆ, ದುಡ್ಡಿಗೇನೂ ಕೊರತೆ ಇಲ್ಲವಾಗಿತ್ತು. ಕೈ ತುಂಬ ಸಂಬಳ ಸಿಗುವ ಕೆಲಸ. ಆದರೆ, ಬದುಕಲ್ಲಿ ಹಣವೇ ಎಲ್ಲವೂ ಅಲ್ಲವಲ್ಲ; ಹಣಕ್ಕಾಗಿ ನಾನು ಆಸೆ ಪಟ್ಟವಳೂ ಅಲ್ಲವಲ್ಲ… ನಾನು ಬಯಸಿದ್ದು ಪ್ರೀತಿ ಮತ್ತು ವಾತ್ಸಲ್ಯ, ಪ್ರೀತಿ ಮತ್ತು ಬಾಂಧವ್ಯ. ಪ್ರೀತಿ ಮತ್ತು ಪರಿಣಯ. ಆದರೆ, ನನಗೆ ಅದು ಸಿಗಲೇ ಇಲ್ಲ.

Advertisement

ಇವತ್ತಿಗೂ ನಿನ್ನ ಪ್ರೀತಿಯ ಸೋನೆ ಮಳೆ ಮತ್ತೆ ಬೀಳಬಹುದೆಂಬ ನಿರೀಕ್ಷೆ ಎನಗೆ.
ನನ್ನ ಕನಸಿನ ಮಹಾಪೂರ ಒಡೆದು ಚೂರಾಗಿದೆ, ಜೋಡಿಸುವ ಮನಸ್ಸು ನನಗೆ ಇಲ್ಲ. ನೀ ಬಂದರೆ ಮಾತ್ರ, ಬಾಳಿನ ಈ ರೈಲು ಸುಲಭವಾಗಿ ಸಾಗಬಹುದು. ಇಲ್ಲದಿದ್ದರೆ, ಒಂಟಿ ಹೆಜ್ಜೆಯಿಟ್ಟು ಯಾರ ಹಂಗಿಲ್ಲದೇ ಸಾಗುವಳು ನಾನು…

ಸಾಯಿನಂದಾ ಚಿಟ್ಪಾಡಿ

Advertisement

Udayavani is now on Telegram. Click here to join our channel and stay updated with the latest news.

Next