Advertisement

ನಿಮ್ಮಿಂದಲೇ ಸಿಎಂ ಆಗಿರುವೆ: ಸಿದ್ದರಾಮಯ್ಯ

12:47 PM Apr 18, 2018 | Team Udayavani |

ಮೈಸೂರು: ಡಾ.ಬಾಬಾ ಸಾಹೇಬ್‌ ಅಂಬೇಡ್ಕರ್‌ ರಚಿಸಿದಂತಹ ಸಂವಿಧಾನವನ್ನು ಬದಲಿಸಲು ಹೊರಟಿರುವ ಬಿಜೆಪಿಯವರಿಗೆ ತಕ್ಕಪಾಠ ಕಲಿಸಬೇಕಾದರೆ ಆ ಪಕ್ಷಕ್ಕೆ ಮತ ಹಾಕಬೇಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದರು.

Advertisement

ವರುಣಾ ಕ್ಷೇತ್ರದ ಕೊಣನೂರು, ದಾಸನೂರು, ಕಾರ್ಯ, ತಗಡೂರು, ಮಲ್ಲೂಪುರ, ನಗರ್ಲೆ, ಬಿಳಿಗೆರೆ ಸೇರಿದಂತೆ 16 ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಡಾ.ಯತೀಂದ್ರ ಸಿದ್ದರಾಮಯ್ಯ ಪರ ರೋಡ್‌ ಶೋ ನಡೆಸಿ ಮತಯಾಚಿಸಿ ಅವರು ಮಾತನಾಡಿದರು.

ಕೆಲಸ ಮಾಡಿದ್ದೇವೆ: ಬಿಜೆಪಿ ಪಕ್ಷ ಡೋಂಗಿ ಪಕ್ಷವಾಗಿದ್ದು, ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್‌ ಎಂದು ಬಾಯಲ್ಲಿ ಹೇಳುತ್ತಾರೆ. ಆದರೆ ನಾವು ಅದನ್ನು ಮಾಡಿ ತೋರಿಸಿದ್ದೇವೆ. ವಿರೋಧ ಪಕ್ಷಗಳ ಮಾತು ಕೇಳಬೇಡಿ. ನಾನು ಈ ಮಣ್ಣಿನ ಮಗ, ನಾನು ಮತ್ತು ನನ್ನ ಮಗ ಯತೀಂದ್ರ ನಿಮ್ಮ ಕಷ್ಟ-ಸುಖಕ್ಕೆ ಆಗುವವರು, ನನಗೆ ಮತ್ತು ನಿಮಗೆ ಸಂಬಂಧ ಇರುವುದು ಎಲ್ಲಿಂದಲೋ ಬಂದವರು ಚುನಾವಣೆ ಮುಗಿದ ಮೇಲೆ ನಾಪತ್ತೆಯಾಗುತ್ತಾರೆಂದು ಹೇಳಿದರು. 

ವರುಣಾ ಮಾದರಿ ಕ್ಷೇತ್ರ ಮಾಡುವೆ: ವರುಣಾ ಮತ್ತು ಚಾಮುಂಡೇಶ್ವರಿ ಕ್ಷೇತ್ರಗಳು ನನಗೆ ಎರಡು ಕಣ್ಣುಗಳಿದ್ದಂತೆ. ವರುಣಾ ಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿ ಕ್ಷೇತ್ರ ಮಾಡುತ್ತೇನೆ. ನನಗೆ ಜಾತಿ ರಾಜಕೀಯ ಮಾಡಿ ಗೊತ್ತಿಲ್ಲ. ಎಲ್ಲಾ ಸಮುದಾಯದವರಿಗೂ ಒಂದಲ್ಲಾ ಒಂದು ಕಾರ್ಯಕ್ರಮ ಕೊಟ್ಟಿದ್ದೇನೆ. ಎಲ್ಲಾ ಸರ್ಕಾರಿ ಕಚೇರಿಗಳಲ್ಲಿಯೂ ಬಸವಣ್ಣನವರ ಭಾವಚಿತ್ರ ಹಾಕಿಸಿದ್ದೇನೆ. ಬಸವ ಕಲ್ಯಾಣ ಅಭಿವೃದ್ಧಿಗೆ ಹಣ ನೀಡಿದ್ದೇವೆ. ಬಸವ ಭವನಗಳ ನಿರ್ಮಾಣಕ್ಕೆ ಹಣ ನೀಡಿದ್ದೇವೆ ಎಂದು ಹೇಳಿದರು. 

ಅಂತರ್ಜಲ ವೃದ್ಧಿಗೆ ಕ್ರಮ: ರಾಜ್ಯದಲ್ಲಿ ಅಂತರ್ಜಲ ಅಭಿವೃದ್ಧಿಗೆ ಈಗಾಗಲೇ 9 ಸಾವಿರ ಕೋಟಿ ರೂ. ಖರ್ಚು ಮಾಡಿ ಕೆರೆಗಳಿಗೆ ನೀರು ತುಂಬಿಸಿದ್ದೇವೆ. ಮುಂದಿನ 2 ವರ್ಷದಲ್ಲಿ ರಾಜ್ಯದ 36 ಸಾವಿರ ಕೆರೆಗಳನ್ನು ತುಂಬಿಸುತ್ತೇವೆ. ಹಿಂದಿನ ಸರ್ಕಾರ ನೀರಾವರಿಗೆ 5 ವರ್ಷದಲ್ಲಿ 18 ಸಾವಿರ ಕೋಟಿ ರೂ. ಮಾಡಿತ್ತು. ನಾವು 58 ಸಾವಿರ ಕೋಟಿ ರೂ. ಖರ್ಚು ಮಾಡಿದ್ದೇವೆ. ರೈತರ ಸಾಲ 8165 ಕೋಟಿ ರೂ. ಮನ್ನಾ ಮಾಡಿದ್ದೇವೆ. ವಿವಿಧ ನಿಗಮಗಳಲ್ಲಿದ್ದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದವರು ಹಾಗೂ ಅಲ್ಪ$ಸಂಖ್ಯಾತರ ಸಾಲ ಮನ್ನಾ ಮಾಡಿದ್ದೇವೆ. ಅನ್ನಭಾಗ್ಯ, ಕ್ಷೀರಭಾಗ್ಯ, ಇಂದಿರಾ ಕ್ಯಾಂಟೀನ್‌ ಮಾಡಿದ್ದೇವೆ ಎಂದರು.

Advertisement

ನಿಮ್ಮಿಂದಲೇ ಸಿಎಂ ಆಗಿರುವೆ: ವರುಣಾದಲ್ಲಿ ನನ್ನನ್ನು 2 ಬಾರಿ ಆಯ್ಕೆ ಮಾಡಿದ್ದೀರಿ. ಆದ್ದರಿಂದಲೇ ನಾನು ಮುಖ್ಯಮಂತ್ರಿಯಾಗಿದ್ದೇನೆ. ನನಗೆ ಮತ ಕೊಟ್ಟವರಿಗೆ ಅಗೌರವ ತರುವ ಕೆಲಸ ಎಂದೂ ಮಾಡಿಲ್ಲ. ನಿಮ್ಮ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ನನ್ನ ಮಗ ಯತೀಂದ್ರ ಈಗ ಅಭ್ಯರ್ಥಿಯಾಗಿದ್ದಾನೆ. ಅಪಪ್ರಚಾರ, ಸುಳ್ಳು ಹೇಳಿಕೆಗಳು, ಆಸೆ ಆಮಿಷಗಳಿಗೆ ಒಳಗಾಗದೆ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸಿ ಡಾ.ಯತೀಂದ್ರರನ್ನು ಆಶೀರ್ವದಿಸಿ ನನಗಿಂತ ಹೆಚ್ಚಿನ ಅಂತರದಲ್ಲಿ ಗೆಲ್ಲಿಸಬೇಕೆಂದು ಮನವಿ ಮಾಡಿದರು.

ಹೊರಗಿನವರಿಗೆ ಪಾಠ ಕಲಿಸಿ: ಸಚಿವ ಡಾ. ಎಚ್‌.ಸಿ.ಮಹದೇವಪ್ಪಮಾತನಾಡಿ, ದೇಶಕ್ಕೆ ಸಿದ್ದರಾಮಯ್ಯನವರ ನಾಯಕತ್ವದ ಅನಿವಾರ್ಯತೆ ಇದೆ. ಪ್ರಜಾಪ್ರಭುತ್ವ ಉಳಿಯಬೇಕಾದರೆ ಸಂವಿಧಾನ ರಕ್ಷಣೆಯಾಗಬೇಕಾದರೆ ಸಿದ್ದರಾಮಯ್ಯನವರು ಮತ್ತೆ ಮುಖ್ಯಮಂತ್ರಿಯಾಗಬೇಕು. ಡಾ.ಯತೀಂದ್ರರನ್ನು ಶಾಸಕನಾಗಿ ಆಯ್ಕೆ ಮಾಡಬೇಕು. ಕ್ಷೇತ್ರಕ್ಕೆ ಸಂಬಂಧವೇ ಇಲ್ಲದವರು, ಎಲ್ಲಿಂದಲೋ ಬಂದು ವೋಟು ಕೇಳುತ್ತಿದ್ದಾರೆ. ಅಂತಹವರಿಗೆ ತಕ್ಕಪಾಠ ಕಲಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಂಸದ ಆರ್‌. ಧ್ರುವನಾರಾಯಣ್‌, ಡಾ.ಯತೀಂದ್ರ ಸಿದ್ದರಾಮಯ್ಯ, ಮಾಜಿ ಸಂಸದ ಸಿ.ಎಚ್‌. ವಿಜಯಶಂಕರ್‌, ವಿಧಾನಪರಿಷತ್‌ ಸದಸ್ಯ ಐವಾನ್‌ ಡಿಸೋಜಾ, ಮಾಜಿ ಶಾಸಕ ಎಂ.ಸತ್ಯನಾರಾಯಣ, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಸಿದ್ದರಾಜು, ಎಸ್‌.ಸಿ.ಬಸವರಾಜು, ಕೆಪಿಸಿಸಿ ಕಾರ್ಯದರ್ಶಿ ಡಾ.ನಾಗಲಕ್ಷ್ಮೀ, ವರುಣಾ ಮಹೇಶ್‌ ಮತ್ತಿತರರು ಹಾಜರಿದ್ದರು.

ಬಸವರಾಜಪ್ಪ ಆರೋಗ್ಯ ವಿಚಾರಿಸಿದ ಸಿಎಂ: ವಿಧಾನಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಹನುಮನ ಪುರ ಗ್ರಾಮದ ಮುಖಂಡ ಬಸವರಾಜಪ್ಪಮನೆಗೆ ತೆರಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅನಾರೋಗ್ಯಕ್ಕೀಡಾಗಿರುವ ಬಸವರಾಜಪ್ಪಆರೋಗ್ಯ ವಿಚಾರಿಸಿದರು.

ಸುತ್ತೂರು ಶ್ರೀ ಆಶೀರ್ವಾದ ಪಡೆದ ಸಿಎಂ: ಸುತ್ತೂರು ಮಠಕ್ಕೆ ತೆರಳಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರಿಂದ ಆಶೀರ್ವಾದ ಪಡೆದರು. ಬಳಿಕ ಆದಿ ಜಗದ್ಗುರು ಶಿವರಾತ್ರೀಶ್ವರರ ಗದ್ದುಗೆಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಈ ವೇಳೆ ಸಚಿವ ಡಾ.ಎಚ್‌.ಸಿ.ಮಹದೇವಪ್ಪ, ಸಂಸದ ಆರ್‌.ಧ್ರುವನಾರಾಯಣ, ಡಾ.ಯತೀಂದ್ರ ಜೊತೆಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next