Advertisement
ಎಂಟು ವರ್ಷಗಳಷ್ಟು ಸುದೀರ್ಘಾವಧಿಗೆ ಪ್ರಧಾನಿಯಾಗಿ ಅಧಿಕಾರದಲ್ಲಿದ್ದ ಅಬೆ ಅವರು ಅನಾರೋಗ್ಯದ ಕಾರಣ ನೀಡಿ ತಾವು ಪ್ರಧಾನಮಂತ್ರಿ ಸ್ಥಾನವನ್ನು ತ್ಯಜಿಸುತ್ತಿರುವುದಾಗಿ ಇತ್ತೀಚೆಗಷ್ಟೇ ಘೋಷಿಸಿದ್ದರು.
Related Articles
Advertisement
ಚತುರಮತಿ ರಾಜಕಾರಣಿ ಎಂದೇ ಜಪಾನ್ ರಾಜಕೀಯ ವಲಯದಲ್ಲಿ ಪ್ರಸಿದ್ಧಿಯನ್ನು ಪಡೆದುಕೊಂಡಿರುವ ಸುಗಾ ಅವರು ಅಬೆ ಅವರ ಸುದೀರ್ಘ ಆಡಳಿತಾವಧಿಯಲ್ಲಿ ಓರ್ವ ಸಮರ್ಥ ವಕ್ತಾರನಾಗಿ, ಸಲಹೆಗಾರನಾಗಿ ಮತ್ತು ಸರಕಾರದ ನೀತಿಗಳ ಅನುಷ್ಠಾನಗಾರನಾಗಿ ತಮ್ಮ ಪಾಲಿನ ಜವಾಬ್ದಾರಿಯನ್ನು ಸಮರ್ಥವಾಗಿಯೇ ನಿರ್ವಹಿಸಿಕೊಂಡು ಬಂದಿದ್ದಾರೆ.
ದೈನಂದಿನ ಪತ್ರಿಕಾಗೋಷ್ಠಿಗಳಲ್ಲಿ ಸರಕಾರದ ಪರವಾಗಿ ಮಾತನಾಡುತ್ತಿದ್ದ ಸುಗಾ ಅವರು ನಿಜಾರ್ಥದಲ್ಲಿ ಶಿಂಜೋ ಅಬೆ ಸರಕಾರದ ‘ಫೇಸ್’ ಆಗಿಯೇ ಗುರುತಿಸಲ್ಪಟ್ಟಿದ್ದರು.
ಇದನ್ನೂ ಓದಿ: ನಟಿ ಸಂಜನಾ ಗಲ್ರಾನಿ ಮತ್ತೆ ಮೂರು ದಿನ ಸಿಸಿಬಿ ಪೊಲೀಸರ ವಶಕ್ಕೆ ನೀಡಿದ ಕೋರ್ಟ್
ರೈತಾಪಿ ವರ್ಗದ ಹಿನ್ನಲೆಯಲ್ಲಿ ಬೆಳೆದು ಬಂದ ರಾಜಕಾರಣಿ
ಉತ್ತರ ಜಪಾನಿನ ಗ್ರಾಮೀಣ ಪ್ರದೇಶದಲ್ಲಿ ಸ್ಟ್ರಾಬೆರಿ ರೈತನ ಮಗನಾಗಿ ಜನಿಸಿದ ಯೋಶಿಹಿಡೆ ಸುಗಾ ಅವರು ತಮ್ಮ ಪ್ರೌಢ ಶಾಲಾ ಶಿಕ್ಷಣವನ್ನು ಪೂರೈಸಿದ ಬಳಿಕ ಟೋಕಿಯೋ ನಗರಕ್ಕೆ ಆಗಮಿಸಿದರು. ಇಲ್ಲಿ ಉನ್ನತ ಶಿಕ್ಷಣಕ್ಕಾಗಿ ಅರೆ ಕಾಲಿಕ ಉದ್ಯೋಗದ ಮೊರೆ ಹೋದ ಸುಗಾ ಅವರು ಬಹಳ ಕಷ್ಟದಿಂದಲೇ ರಾತ್ರಿ ಕಾಲೇಜು ಶಿಕ್ಷಣವನ್ನು ಪೂರೈಸುತ್ತಾರೆ. ಬಳಿಕ 1987ರಲ್ಲಿ ಸುಗಾ ಅವರು ಪ್ರಪ್ರಥಮ ಬಾರಿಗೆ ಯೊಕೊಹೊಮಾ ನಗರದ ಮುನ್ಸಿಪಲ್ ಅಸೆಂಬ್ಲಿ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸುತ್ತಾರೆ. ಇತ್ತ, 2012ರಲ್ಲಿ ಶಿಂಜೋ ಅಬೆ ಅವರು ಎಲ್ಲಾ ವ್ಯತಿರಿಕ್ತತೆಗಳನ್ನು ಮೆಟ್ಟಿನಿಂತು ಎರಡನೇ ಬಾರಿಗೆ ದೇಶದ ಪ್ರಧಾನಿಯಾಗಿ ಅಧಿಕಾರವನ್ನು ವಹಿಸಿಕೊಂಡ ಸಂದರ್ಭದಲ್ಲಿ ಅಬೆ ಅವರು ಸುಗಾ ಅವರನ್ನು ಪ್ರಧಾನ ಸಂಪುಟ ಕಾರ್ಯದರ್ಶಿಯನ್ನಾಗಿ ನೇಮಕ ಮಾಡುತ್ತಾರೆ. ಇದು ಅತ್ಯಂತ ಆಯಕಟ್ಟಿನ ಹುದ್ದೆಯಾಗಿದ್ದು ಅಬೆ ಅವರ ಬಲಗೈಯಂತೆ ಸುಗಾ ಅವರು ತಮ್ಮ ರಾಜಕೀಯ ಸಾಮರ್ಥ್ಯವನ್ನು ಒರೆಗೆ ಹಚ್ಚಲು ಸಿಕ್ಕ ಈ ಅವಕಾಶವನ್ನು ಎಲ್ಲಾ ರೀತಿಯಲ್ಲೂ ಸದುಪಯೋಗಪಡಿಸಿಕೊಳ್ಳುತ್ತಾರೆ. ಮುಖ್ಯ ಸಂಪುಟ ಕಾರ್ಯದರ್ಶಿ, ಸರಕಾರದ ಉನ್ನತ ವಕ್ತಾರ, ನೀತಿ ನಿರೂಪಣೆಗಳನ್ನು ಜಾರಿಗೊಳಿಸುವಲ್ಲಿ ಸರಕಾರ ಮತ್ತು ಕಾರ್ಯಾಂಗದ ನಡುವೆ ಸಂವಹನ ರೂಪಿಸುವುದು ಸೇರಿದಂತೆ ಸುಗಮ ಆಡಳಿತ ವಿಚಾರದಲ್ಲಿ ಪ್ರಧಾನಿ ಅಬೆ ಅವರ ಹೆಗಲಿಗೆ ಹೆಗಲು ಕೊಟ್ಟು ಸುಗಾ ಅವರು ಈ ಎಂಟು ವರ್ಷಗಳ ಅವಧಿಯಲ್ಲಿ ಓರ್ವ ಪರಿಪೂರ್ಣ ರಾಜಕಾರಣಿ ಮತ್ತು ಪಕ್ಷ ಆಡಳಿತಗಾರನಾಗಿ ರೂಪುಗೊಳ್ಳುತ್ತಾ ಸಾಗುತ್ತಾರೆ. ಇದನ್ನೂ ಓದಿ: ರಿಯಾಗೆ ಡ್ರಗ್ಸ್ ಸರಬರಾಜು ಮಾಡ್ತಿದ್ದದ್ದು ನಟಿ ಸಾರಾ ಅಲಿ ಖಾನ್? ಈಕೆ ಸ್ಟಾರ್ ನಟನ ಪುತ್ರಿ
ಸುಗಾ ಮುಂದಿರುವ ಸವಾಲುಗಳು:
ಶಿಂಜೋ ಅಬೆ ಅವರ ಜೊತೆಯಲ್ಲಿದ್ದೇ ರಾಜಕೀಯ ಪಟ್ಟುಗಳನ್ನು ಕರಗತ ಮಾಡಿಕೊಂಡಿರುವ ಸುಗಾ ಅವರ ಮುಂದಿನ ರಾಜಕೀಯ ಜೀವನ ಹೂವಿನ ಹಾಸಿಗೆಯೇನಲ್ಲ. ಕೋವಿಡ್ 19 ಕಾರಣದಿಂದ ಕುಸಿದಿರುವ ಆರ್ಥಿಕತೆಯನ್ನು ಮೇಲೆತ್ತುವ ಮಹತ್ವದ ಸವಾಲು ಇವರ ಮುಂದಿದೆ. ಇನ್ನು ಮುಂದೂಡಲ್ಪಟ್ಟಿರುವ ಒಲಂಪಿಕ್ಸ್ ಕೂಟವನ್ನು ಸಾಂಗವಾಗಿ ನಡೆಸಿ ವಿಶ್ವದ ಮುಂದೆ ಜಪಾನ್ ದೇಶದ ತಾಕತ್ತನ್ನು ನಿರೂಪಿಸುವ ಬಲುದೊಡ್ಡ ಜವಾಬ್ದಾರಿಯೂ ಸುಗಾ ಹೆಗಲ ಮೇಲಿದೆ. ಇನ್ನು ಹೊಸದಾಗಿ ಆಯ್ಕೆಯಾಗುವ ಅಮೆರಿಕಾ ಅಧ್ಯಕ್ಷರೊಂದಿಗೆ ಉತ್ತಮ ರಾಜಕೀಯ ಬಾಂಧವ್ಯವನ್ನು ಸ್ಥಾಪಿಸಬೇಕಾದ ಮಹತ್ವದ ಸವಾಲೂ ಸಹ ಸುಗಾ ಮುಂದಿದೆ. ಇನ್ನು ನೆರೆ ರಾಷ್ಟ್ರ ಚೀನಾದೊಂದಿಗೆ ಇರುವ ಸಾಗರ ಗಡಿ ಸಮಸ್ಯೆಗಳನ್ನು ಸೂಕ್ಷ್ಮ ರೀತಿಯಲ್ಲಿ ನಿಭಾಯಿಸಬೇಕಾದ ಸವಾಲೂ ಇವರ ಮುಂದಿದೆ. ಇನ್ನು ರಾಜಕೀಯ ಪಂಡಿತರು ಹೇಳುವಂತೆ ಸುಗಾ ಅವರು ತತ್ವಾಧಾರಿತ ರಾಜಕಾರಣಕ್ಕಿಂತ ವಿಷಯಗಳನ್ನು ಸೂಕ್ಷ್ಮವಾಗಿ ನಿಭಾಯಿಸುವ ವಿಚಾರದಲ್ಲಿ ಎತ್ತಿದ ಕೈ. ಹಾಗಾಗಿ ಯಾವುದೇ ಪರಿಸ್ಥಿತಿ ಎದುರಾದರೂ ಅದನ್ನು ಸವಾಲಾಗಿ ತೆಗೆದುಕೊಂಡು ದೇಶದ ಹಿತಾಸಕ್ತಿಗೆ ಧಕ್ಕೆಯಾಗದ ರೀತಿಯಲ್ಲಿ ನಿಭಾಯಿಸುವ ತಾಕತ್ತು ಇವರಿಗಿದೆ ಎಂಬುದು ಸದ್ಯಕ್ಕೆ ಇವರ ಮೇಲೆ ಇರುವ ಭರವಸೆ.