ಬೆಂಗಳೂರು: ಮುಖ್ಯಮಂತ್ರಿ ತವರು ಜಿಲ್ಲೆ ಹಾವೇರಿಯಲ್ಲಿ ನಡೆಯಲಿರುವ 86ನೇ ಅಕ್ಷರ ಜಾತ್ರೆ ಹಲವು ವೈಶಿಷ್ಟ್ಯಗಳಿಂದ ಕೂಡಿರಲಿದೆ. ಕನ್ನಡ ನಿಘಂಟಿಗೆ ವಿಶಿಷ್ಟ ಕೊಡುಗೆ ನೀಡಿದ ಫರ್ಡಿನೆಂಡ್ ಕಿಟೆಲ್ ಹಾಗೂ ಮೊದಲ ಕನ್ನಡ ದಿನಪತ್ರಿಕೆ “ಮಂಗಳೂರು ಸಮಾಚಾರ್’ ಪ್ರಾರಂಭಿಸಿದ ಹರ್ಮನ್ ಮೋಗ್ಲಿಂಗ್ ಅವರ ಕುಟುಂಬ ಈ ಬಾರಿಯ ಸಾಹಿತ್ಯ ಸಮ್ಮೇಳನಕ್ಕೆ ಸಾಕ್ಷಿಯಾಗಲಿದೆ.
ಜ 6ರಿಂದ 3 ದಿನಗಳ ಕಾಲ ಕನ್ನಡ ಅಕ್ಷರ ಜಾತ್ರೆಗೆ ನಿಘಂಟು ತಜ್ಞ ಕಿಟೆಲ್ ಅವರ ಮೊಮ್ಮಗ ಜರ್ಮನಿಯಲ್ಲಿರುವ ಯಾರ್ಕ್ ಕಿಟೆಲ್ ಹಾಗೂ ಮೋಗ್ಲಿಂಗ್ ಅವರ ಕುಟುಂಬದ ಸದಸ್ಯರನ್ನು ಆಹ್ವಾನಿಸಲು ಕಸಾಪ ನಿರ್ಧರಿಸಿದೆ. ಈಗಾಗಲೇ ಯಾರ್ಕ್ ಕಿಟೆಲ್ ಅವರಿಗೆ ಆಹ್ವಾನ ನೀಡಿದ್ದು, ಅವರು ಸಮ್ಮೇ ಳ ನ ದಲ್ಲಿ ಭಾಗವಹಿಸಲಿದ್ದಾರೆ ಎಂದು ಪರಿಷತ್ತಿನ ಪದಾಧಿಕಾರಿಯೊಬ್ಬರು ದೃಢಪಡಿಸಿದ್ದಾರೆ.
ಜತೆಗೆ 1843ರಲ್ಲಿ ಮೊದಲ ಕನ್ನಡ ದಿನಪತ್ರಿಕೆ “ಮಂಗಳೂರು ಸಮಾಚಾರ್’ ಅನ್ನು ಪ್ರಾರಂಭಿಸಿದ ಹರ್ಮನ್ ಮೋಗ್ಲಿಂಗ್ ಅವರ ಕುಟುಂಬಕ್ಕೂ ಕಸಾಪ ಆಹ್ವಾನ ನೀಡಿದೆ. ಹಾಗೆಯೇ ಕನ್ನಡದವರು ವಿದೇಶದಲ್ಲಿ ಹೋಗಿ ಅಪ್ರತಿಮ ಸಾಧನೆ ಮಾಡಿದ್ದಾರೆ ಅವರನ್ನು ಕೂಡ ಆಹ್ವಾನಿಸಿ ಅಕ್ಷರ ಜಾತ್ರೆಯಲ್ಲಿ ಗೌರವಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಕನ್ನಡ ಸಾಹಿತ್ಯ ಸಮ್ಮೇಳನ” ಸಾಮರಸ್ಯದ ಭಾವ ಕನ್ನಡದ ಜೀವ’ ಘೋಷ ವಾಕ್ಯದಡಿ ನಡೆಯಲಿದೆ. ಜರ್ಮನ್ ಮೂಲದವರಾದ ಫರ್ಡಿನೆಂಡ್ ಕಿಟೆಲ್ ಅವರು ಕನ್ನಡ ಕಲಿತು ಆ ನಂತರ ಕನ್ನಡ ನಿಘಂಟು ಹೊರತಂದರು. ಅವರನ್ನು ಕನ್ನಡಿಗರು ಸದಾ ನೆನೆಯುತ್ತಾರೆ. ಹೀಗಾಗಿ, ಅವರ ಕೊಡುಗೆಯನ್ನು ಈಗಿನ ಪೀಳಿಗೆಗೆ ಪರಿಚಯಿಸುವುದರ ಜತೆಗೆ ಕೃತಜ್ಞತೆಯ ಭಾಗವಾಗಿ ಅವರ ಕುಟುಂಬವನ್ನು ಗೌರವಿಸುವ ಕೆಲಸ ಆಗಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಹೇಳಿದರು.
ಈ ಹಿಂದೆ ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಸ್ಥಾನದಲ್ಲಿ ಕನ್ನಡ ತಾಯಿ ಭುವನೇಶ್ವರಿಯ ನೂತನ ಪ್ರತಿಮೆ ಪ್ರತಿಷ್ಠಾಪನೆ ವೇಳೆ ಕಸಾಪ ರೆವರೆಂಡ್ ಫರ್ಡಿನೆಂಡ್ ಕಿಟೆಲ್ ಅವರ ಮರಿ ಮೊಮ್ಮಗಳು ಅಲ್ಮಥ್ ಮೆಯರ್ ಅವರಿಗೆ ಆಹ್ವಾನ ನೀಡಲಾಗಿತ್ತು. ಪರಿಷತ್ತಿನ ಆಹ್ವಾನ ಸ್ವೀಕರಿಸಿ ಅಲ್ಮಥ್ ಅವರು ಕುಟುಂಬ ಸಮೇತರಾಗಿ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅದೇ ರೀತಿಯಲ್ಲಿ ಕಿಟೆಲ್ ಅವರ ಮೊಮ್ಮಗ ಯಾರ್ಕ್ ಕಿಟೆಲ್ ಕೂಡ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸು ಸಮ್ಮತಿಸಿದ್ದಾರೆ ಎಂದು ತಿಳಿಸಿದ್ದಾರೆ.
‘ಕನಕ ಶರೀಫ ಸರ್ವಜ್ಞರ ವೇದಿಕೆ’
ಸಮ್ಮೇಳನಕ್ಕೆ ಈ ಬಾರಿ ಪ್ರಧಾನ ವೇದಿಕೆಗೆ “ಕನಕ ಶರೀಫ ಸರ್ವಜ್ಞರ ವೇದಿಕೆ’ ಎಂದು ಹೆಸರಿಡಲು ಕನ್ನಡ ಸಾಹಿತ್ಯ ಪರಿಷತ್ತು ನಿರ್ಧರಿಸಿದೆ. ಜತೆಗೆ ವಿದೇಶಿ ಕನ್ನಡಿಗಾರಿಗಾಗಿಯೇ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಾ.ದೊಡ್ಡರಂಗೇಗೌಡ ಅವರು ರಚಿಸಿದ ಕವಿತೆಗಳ ಗಾಯನ ಕೂಡ ನಡೆಯಲಿದೆ. ಹಾಗೆಯೇ ಕುವೆಂಪು, ದ.ರಾ.ಬೇಂದ್ರ, ಜಿ.ಎಸ್.ಶಿವರುದ್ರಪ್ಪ ಸೇರಿದಂತೆ ನಾಡಿನ ಹೆಸರಾಂತ ಕವಿಗಳ ಕವಿತೆಗಳ ಸಾಮೂಹಿಕ ಗಾಯನ ಮತ್ತು ನೃತ್ಯ ಪ್ರದರ್ಶನ ಕೂಡ ಇರಲಿದೆ. ವರನಟ ಡಾ.ರಾಜ್‌ಕುಮಾರ್ ಮತ್ತು ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರನ್ನು ನೆನಪಿಸುವ ಕಾರ್ಯಕ್ರಮಗಳು ಕೂಡ ನಡೆಯಲಿವೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಕ್ಷರ ಜಾತ್ರೆಯನ್ನು ಅದ್ಧೂರಿಯಾಗಿ ಆಚರಿಸಲಾಗುವುದು. ಕನ್ನಡ ನಿಘಂಟು ಕ್ಷೇತ್ರಕ್ಕೆ ಕೊಡುಗೆ ನೀಡಿರುವ ಕನ್ನಡ ನಿಘಂಟು ತಜ್ಞ ರೆವರೆಂಡ್ ಫರ್ಡಿನೆಂಡ್ ಕಿಟೆಲ್ ಮತ್ತು ಹರ್ಮನ್ ಮೋಗ್ಲಿಂಗ್ ಅವರ ಕುಟುಂಬದವರನ್ನು ಸನ್ಮಾನಿಸಲಾಗುವುದು.
ಮಹೇಶ ಜೋಶಿ, ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು