Advertisement
1.30 ಸಾವಿರ ನೀರಾವರಿ ಸೇರಿ 4.30 ಲಕ್ಷ ಹೆಕ್ಟೇರ್ ಪ್ರದೇಶ ವಿಜಯಪುರ ಜಿಲ್ಲೆಯಲ್ಲಿ ಮುಂಗಾರು ಬಿತ್ತನೆಗೆ ಸಿದ್ಧವಾಗುತ್ತಿದ್ದು, ಅಂದುಕೊಂಡಂತೆ ಮುಂಗಾರು ಪೂರ್ವ ಮಳೆ ಉತ್ತಮವಾಗಿ ಸುರಿದರೆ ಜೂನ್ ಮೊದಲ ವಾರದಲ್ಲೇ ಹೆಸರು, ಉದ್ದು ಸುಮಾರು 30 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಗೆ ಸಿದ್ಧಗೊಳ್ಳುತ್ತಿದೆ. ಉಳಿದಂತೆ ಬೆಲೆ ಕುಸಿತದಸಂಕಷ್ಟದ ಮಧ್ಯೆಯೂ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ತೊಗರಿ ಬೆಳೆ ಪ್ರದೇಶ ಈ ಬಾರಿಯೂ 3 ಲಕ್ಷ ಹೆಕ್ಟೇರ್ ಬಿತ್ತನೆಯ ಆಗುತ್ತದೆ ಎಂದು ಕೃಷಿ ಇಲಾಖೆ ನಿರೀಕ್ಷಿಸುತ್ತಿದೆ. 60 ಸಾವಿರ ಹೆಕ್ಟೇರ್ ಮೆಕ್ಕೆಜೋಳ, 40 ಸಾವಿರ ಹೆಕ್ಟೇರ್ ಸಜ್ಜೆ ಬಿತ್ತನೆಯ ನಿರೀಕ್ಷೆ ಇದೆ.
ಇದಲ್ಲದೇ ಆರ್ಥಿಕ ಸಬಲೀಕರಣದೊಂದಿಗೆ ರಸಾಯನಿಕ-ವಿಷ ಮುಕ್ತ ಆಹಾರ ಉತ್ಪಾದನೆಗೆ ಆದ್ಯತೆ ನೀಡುವ ಉದ್ದೇಶದಿಂದ ರೈತರನ್ನು ಸಾವಯವದತ್ತ ಪ್ರಚೋದಿಸುವ ಕೆಲಸವೂ ಭರದಿಂದ ಸಾಗಿದೆ. ರೈತರು ಈಗಷ್ಟೇ ಇದಕ್ಕೆ ಒಗ್ಗಿಕೊಳ್ಳುತ್ತಿದ್ದರೂ ಜಿಲ್ಲೆಯಲ್ಲಿ ಸಾವಯವ ಕೃಷಿಕರ ಪ್ರಮಾಣ ಶೇ. 3ರಷ್ಟನ್ನು ಮೀರಿಲ್ಲ. ಹೀಗಾಗಿ ಈ ಪ್ರಮಾಣ ಹೆಚ್ಚಿಸಲು ಜಿಲ್ಲೆಯ 5 ತಾಲೂಕುಗಳಲ್ಲಿ ಪ್ರತಿ ತಾಲೂಕಿನ ತಲಾ 3 ಗ್ರಾಮಗಳಂತೆ 15 ಸಾವಯವ ಕೃಷಿಕರ ಕ್ಲಸ್ಟರ್ ಗುಂಪು ರಚಿಸಲಾಗಿದೆ. ಪ್ರತಿ ಕ್ಲಸ್ಟರ್‌ನಲ್ಲಿರುವ ರೈತರೆಲ್ಲ ತಲಾ ಕನಿಷ್ಠ 100 ಹೆಕ್ಟೇರ್ ಸಾವಯ ಕೃಷಿ ಉತ್ಪಾದನೆಗೆ ಮುಂದಾಗಿದ್ದಾರೆ.
ಸಾವಯವ ಹಾಗೂ ಪರಂಪರಾಗತ ಕೃಷಿ ವಿಕಾಸ ಯೋಜನೆ ಅಡಿಯಲ್ಲಿ ರೈತರಿಗೆ ಸಾವಯವ ಕೃಷಿಯತ್ತ ರೈತರನ್ನು ಹೆಚ್ಚಿನ ಪ್ರಮಾಣದಲ್ಲಿ ತೊಡಗುವಂತೆ ಮಾಡಲು ತರಬೇತಿ, ಭೂಮಿ ಆರೋಗ್ಯ ಸಂರಕ್ಷಣೆ, ಸತ್ವ ಹೆಚ್ಚಳಕ್ಕಾಗಿ ಮಣ್ಣು
ಪರೀಕ್ಷೆ, ಬೆಳೆ ಆಯ್ಕೆ, ಬೀಜೋಪಚಾರ, ಜೈವಿಕ ಪೀಡೆ ನಾಶಕ, ಕೀಟಗಳ ನೈಸರ್ಗಿಕ ನಿರ್ವಹಣೆ ಹೀಗೆ ಹಲವು ಬಗೆಯ ಮಾರ್ಗದರ್ಶನವೂ ಕೃಷಿ ಅಧಿಕಾರಿಗಳಿಂದ ನಡೆಯುತ್ತಿದೆ.
Related Articles
Advertisement