ಲಕ್ನೋ: ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿತಗೊಳಿಸಿದ ಬೆನ್ನಲ್ಲೇ ಉತ್ತರಪ್ರದೇಶ ಸರ್ಕಾರ ಕೂಡಾ ಪೆಟ್ರೋಲ್, ಡೀಸೆಲ್ ಮೇಲಿನ ವ್ಯಾಟ್ ಅನ್ನು ಕಡಿತಗೊಳಿಸುವ ಮೂಲಕ ಪ್ರತಿ ಲೀಟರ್ ಗೆ 12 ರೂಪಾಯಿ ಇಳಿಕೆಯಾದಂತಾಗಿದೆ ವರದಿ ತಿಳಿಸಿದೆ.
ಇದನ್ನೂ ಓದಿ:ಮೆಲ್ಬೋರ್ನ್ ರೆನಿಗೇಡ್ಸ್ ಸೇರಿದ ಚಾಂದ್: ಬಿಬಿಎಲ್ ಆಡುತ್ತಿರುವ ಮೊದಲ ಭಾರತೀಯ ಆಟಗಾರ
ಕೇಂದ್ರ ಸರ್ಕಾರದ ಮನವಿಯಂತೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ಕಡಿತಗೊಳಿಸಿರುವುದಾಗಿ ಮುಖ್ಯಮಂತ್ರಿ ಕಚೇರಿ ಗುರುವಾರ(ನವೆಂಬರ್ 04) ತಿಳಿಸಿದೆ. ಉತ್ತರಪ್ರದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಪ್ರತಿ ಲೀಟರ್ ಬೆಲೆಯನ್ನು 12 ರೂಪಾಯಿಯಷ್ಟು ಕಡಿತಗೊಳಿಸಲಾಗಿದೆ ಎಂದು ವಿವರಿಸಿದೆ.
ಸತತವಾಗಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗುತ್ತಿರುವ ನಡುವೆ ಕೇಂದ್ರ ಸರ್ಕಾರ ಬುಧವಾರ ದೀಪಾವಳಿ ಕೊಡುಗೆಯಾಗಿ ಅಬಕಾರಿ ಸುಂಕವನ್ನು ಕಡಿತಗೊಳಿಸಿತ್ತು, ಪೆಟ್ರೋಲ್ ಬೆಲೆ ಲೀಟರ್ ಗೆ 5 ರೂಪಾಯಿ ಹಾಗೂ ಡೀಸೆಲ್ ಮೇಲೆ 10 ರೂ. ಅಬಕಾರಿ ಸುಂಕ ಕಡಿತಗೊಳಿಸಿ, ರಾಜ್ಯ ಸರ್ಕಾರಗಳು ಕೂಡಾ ವ್ಯಾಟ್ ಕಡಿತಗೊಳಿಸುವಂತೆ ಮನವಿ ಮಾಡಿತ್ತು.
ಉತ್ತರಪ್ರದೇಶ ಸರ್ಕಾರ ಪೆಟ್ರೋಲ್ ಲೀಟರ್ ಗೆ 7 ರೂಪಾಯಿ ಹಾಗೂ ಡೀಸೆಲ್ ಗೆ 2 ರೂಪಾಯಿಯಷ್ಟು ವ್ಯಾಟ್ ಕಡಿತಗೊಳಿಸುವ ನಿರ್ಧಾರ ತೆಗೆದುಕೊಂಡಿದೆ. ಇದೀಗ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ವ್ಯಾಟ್ ಕಡಿತದಿಂದಾಗಿ ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಪ್ರತಿ ಲೀಟರ್ ಗೆ 12 ರೂಪಾಯಿ ಇಳಿಕೆಯಾದಂತಾಗಿದೆ ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನವನೀತ್ ಸೆಹಗಾಲ್ ಪಿಟಿಐಗೆ ತಿಳಿಸಿದ್ದಾರೆ.
ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯ ನಿರ್ಧಾರಕ್ಕೆ ಸಂಬಂಧಿಸಿದಂತೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸಿ ಟ್ವೀಟ್ ಮಾಡಿದ್ದಾರೆ. ಅಲ್ಲದೇ ರಾಜ್ಯದಲ್ಲಿಯೂ ವ್ಯಾಟ್ ಇಳಿಕೆ ಮಾಡಿರುವುದಾಗಿ ತಿಳಿಸಿದ್ದಾರೆ.