ಲಕ್ನೋ: ಉತ್ತರಪ್ರದೇಶ ರಾಯ್ ಬರೇಲಿಯ ಸಾದಾರ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಅದಿತಿ ಸಿಂಗ್ ಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರಕಾರ “ವೈ” ಪ್ಲಸ್ ಭದ್ರತೆಯನ್ನು ನೀಡಲು ನಿರ್ಧರಿಸಿರವುದಾಗಿ ವರದಿ ತಿಳಿಸಿದೆ.
ಮಂಗಳವಾರ ಉತ್ತರಪ್ರದೇಶ ವಿಧಾನಸಭೆಯ ವಿಶೇಷ ಅಧಿವೇಶನವನ್ನು ಕಾಂಗ್ರೆಸ್ ಪಕ್ಷ ಬಹಿಷ್ಕರಿಸಿತ್ತು. ಆದರೆ ಕಾಂಗ್ರೆಸ್ ಶಾಸಕಿ ಅದಿತಿ ಸಿಂಗ್ ಅಧಿವೇಶನದಲ್ಲಿ ಪಾಲ್ಗೊಂಡಿದ್ದರು. ಮಹಾತ್ಮಗಾಂಧಿಯ 150ನೇ ಜನ್ಮ ಜಯಂತಿ ಹಿನ್ನೆಲೆಯಲ್ಲಿ ರಾಜ್ಯದ ಅಭಿವೃದ್ಧಿ ಕುರಿತಂತೆ ಚರ್ಚಿಸಲು 36 ಗಂಟೆಗಳ ವಿಶೇಷ ಅಧಿವೇಶನ ನಡೆಸುವುದಾಗಿ ಉತ್ತರಪ್ರದೇಶ ಸರಕಾರ ಹೇಳಿತ್ತು.
ಆದರೆ ಇದೊಂದು ದಾಖಲೆಗಾಗಿ ಮಾಡುತ್ತಿರುವ ನಾಟಕ ಎಂದು ಆರೋಪಿಸಿದ್ದ ಸಮಾಜವಾದಿ ಪಕ್ಷ, ಬಹುಜನ್ ಸಮಾಜ ಪಕ್ಷ ಹಾಗೂ ಕಾಂಗ್ರೆಸ್ ಅಧಿವೇಶನವನ್ನು ಬಹಿಷ್ಕರಿಸಿದ್ದವು. ಪಕ್ಷದ ವಿರೋಧದ ನಡುವೆಯೇ ಅದಿತಿ ಸಿಂಗ್ ವಿಶೇಷ ಅಧಿವೇಶನದಲ್ಲಿ ಭಾಗವಹಿಸಿದ್ದರು.
ಅಧಿವೇಶನದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರ ಜತೆ ಮಾತನಾಡಿದ ಸಿಂಗ್, ರಾಜ್ಯದ ಅಭಿವೃದ್ದಿ ವಿಚಾರ ಚರ್ಚಿಸಲು ಕರೆದ ಅಧಿವೇಶನದಲ್ಲಿ ಭಾಗವಹಿಸಿದ್ದೆ. ನಾನು ಕೂಡಾ ಕೇವಲ ಅಭಿವೃದ್ಧಿ ಬಗ್ಗೆ ಮಾತ್ರ ಮಾತನಾಡಿದ್ದೇನೆ. ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದುಪಡಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಅದನ್ನು ಪೂರ್ಣವಾಗಿ ಬೆಂಬಲಿಸಿದ್ದೇನೆ. ಯಾವಾಗ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಯುತ್ತದೆಯೋ ಅದನ್ನು ನಾವು ಪಕ್ಷವನ್ನು ಮೀರಿ ಆಲೋಚಿಸಬೇಕಾಗುತ್ತದೆ. ನಾನು ಅಧಿವೇಶನದಲ್ಲಿ ಭಾಗವಹಿಸಿದ್ದಕ್ಕೆ ಪಕ್ಷ ಯಾವ ನಿರ್ಧಾರ ಕೈಗೊಂಡರು ಅದನ್ನು ಸ್ವೀಕರಿಸಲು ಸಿದ್ದಳಾಗಿದ್ದೇನೆ. ಆದರೆ ನನ್ನ ಮೊದಲ ಆದ್ಯತೆ ಕ್ಷೇತ್ರದ ಅಭಿವೃದ್ದಿ ಎಂದು ತಿಳಿಸಿದ್ದರು.
ರಾಯ್ ಬರೇಲಿಯಲ್ಲಿ ಇತ್ತೀಚೆಗೆ ಸಿಂಗ್ ಮೇಲೆ ಹಲ್ಲೆ ಯತ್ನ ನಡೆದಿತ್ತು. ಈ ನಿಟ್ಟಿನಲ್ಲಿ ತನಗೆ ಭದ್ರತೆ ನೀಡಬೇಕೆಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಅದಿತಿ ಮನವಿ ಸಲ್ಲಿಸಿದ್ದರು. ಅದರಂತೆ ರಾಯ್ ಬರೇಲಿಯಲ್ಲಿರುವ ಅದಿತಿ ನಿವಾಸಕ್ಕೆ ಹಾಗೂ ಅದಿತಿಗೆ ವೈ ಪ್ಲಸ್ ಭದ್ರತೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ವರದಿ ವಿವರಿಸಿದೆ.