ಲಕ್ನೋ: ಪಾತಕಿಗಳು, ಗೂಂಡಾಗಿರಿ ವಿರುದ್ಧ ಸಮರ ಸಾರಿದ್ದ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇದೀಗ ಭ್ರಷ್ಟಾಚಾರದ ವಿರುದ್ಧವೂ ಕಠಿಣ ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ಆರೋಪದಡಿ ಲೋಕೋಪಯೋಗಿ ಇಲಾಖೆ ಸೇರಿದಂತೆ ಐವರು ಅಧಿಕಾರಿಗಳನ್ನು ಅಮಾನತು ಮಾಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಸಿಎಂ ಹುದ್ದೆಯ ಕನಸು ಬಿಚ್ಚಿಟ್ಟ ರಾಮನಗರದ ಕಲಿಗಳು: ಚಾಮುಂಡಿ ತಾಯಿ ಮುಂದಿಟ್ಟು ರಾಜಕೀಯ
ಅಮಾನತುಗೊಂಡಿರುವ ಅಧಿಕಾರಿಗಳ ಪೈಕಿ ಪಿಡಬ್ಲ್ಯುಡಿ ಮುಖ್ಯಸ್ಥ, ಮುಖ್ಯ ಇಂಜಿನಿಯರ್ ಮನೋಜ್ ಗುಪ್ತಾ ಹೆಸರು ಸೇರಿದ್ದು, ಇತರ ನಾಲ್ವರು ಅಧಿಕಾರಿಗಳನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಇಲಾಖೆಯ ವರ್ಗಾವಣೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ವರದಿ ವಿವರಿಸಿದೆ.
ಲೋಕೋಪಯೋಗಿ ಸಚಿವ ಜಿತಿನ್ ಪ್ರಸಾದ್ ಅವರ ಒಎಸ್ ಡಿ( ಆಫೀಸರ್ ಆನ್ ಸ್ಪೆಷಲ್ ಡ್ಯೂಟಿ) ಅನಿಲ್ ಕುಮಾರ್ ಪಾಂಡೆ ವಿರುದ್ಧ ಜುಲೈ 18ರಂದು ಕ್ರಮ ತೆಗೆದುಕೊಂಡ ನಂತರ ಈ ಬೆಳವಣಿಗೆ ನಡೆದಿದೆ.
ರಸ್ತೆಗಳಿರುವುದು ಜನರ ಸಂಚಾರಕ್ಕಾಗಿ, ಹೀಗಾಗಿ ಯಾವುದೇ ಧಾರ್ಮಿಕ ಚಟುವಟಿಕೆಗೆ ಅನುಮತಿ ನೀಡಬಾರದು,ಇದರಿಂದ ಸಂಚಾರ ವ್ಯವಸ್ಥೆಗೆ ಅಡ್ಡಿಯುಂಟಾಗುತ್ತದೆ ಎಂದು ಸಿಎಂ ಯೋಗಿ ಸೋಮವಾರ ತಿಳಿಸಿದ್ದರು. ಧಾರ್ಮಿಕ ಯಾತ್ರೆಯ ವೇಳೆ ಪಟಾಕಿ, ಸಿಡಿಮದ್ದುಗಳನ್ನು ಬಳಸಬಾರದು ಎಂದು ಸೂಚನೆ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.