ಲಕ್ನೋ : ಎರಡನೇ ಬಾರಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್ ಅವರು ಶುಕ್ರವಾರ ಸಂಜೆ ಪ್ರಮಾಣವಚನ ಸ್ವೀಕರಿಸಿದರು. ರಾಜ್ಯ ಪಾಲರಾದ ಆನಂದಿಬೆನ್ ಪಟೇಲ್ ಅವರು ಪ್ರಮಾಣ ವಚನ ಭೋದಿಸಿದರು.
ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿ ಹಲವು ರಾಜ್ಯದ ಮುಖ್ಯಮಂತ್ರಿಗಳು ಹಾಜರಿದ್ದರು. ಅಪಾರ ಸಂಖ್ಯೆಯ ಬಿಜೆಪಿ ಕಾರ್ಯಕರ್ತರು ಭವ್ಯ ಕಾರ್ಯಕ್ರಮಕ್ಕಾಗಿ ಸೇರಿದ್ದರು.
ಉಪ ಮುಖ್ಯಮಂತ್ರಿಗಳಾಗಿ ಕೇಶವ್ ಪ್ರಸಾದ್ ಮೌರ್ಯ, ಬ್ರಜೇಶ್ ಪಾಠಕ್ ಪ್ರಮಾಣ ವಚನ ಸ್ವೀಕರಿಸಿದರು. 52 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಯೋಗಿ ಕ್ಯಾಬಿನೆಟ್ 2.0 ರಲ್ಲಿ ಪ್ರಮುಖ ನಾಯಕರಾದ ಸುರೇಶ್ ಕುಮಾರ್ ಖನ್ನಾ, ಸೂರ್ಯ ಪ್ರತಾಪ್ ಶಾಹಿ, ಸ್ವತಂತ್ರ ದೇವ್ ಸಿಂಗ್, ಬೇಬಿ ರಾಣಿ ಮೌರ್ಯ, ಲಕ್ಷ್ಮೀ ನಾರಾಯಣ ಚೌಧರಿ, ಜೈವೀರ್ ಸಿಂಗ್, ಧರಂ ಪಾಲ್ ಸಿಂಗ್, ನಂದ ಗೋಪಾಲ್ ಗುಪ್ತ, ಭೂಪೇಂದ್ರ ಸಿಂಗ್ ಚೌಧರಿ, ಅನಿಲ್ ರಾಜಭರ್, ಜಿತಿನ್ ಪ್ರಸಾದ, ರಾಕೇಶ್ ಸಚನ್, ಅರವಿಂದ್ ಕುಮಾರ್ ಶರ್ಮಾ, ಯೋಗೇಂದ್ರ ಉಪಾಧ್ಯಾಯ, ಆಶಿಶ್ ಪಟೇಲ್ ಮತ್ತು ಸಂಜಯ್ ನಿಶಾದ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೂ ಮುನ್ನ ಗೋರಖ್‌ಪುರ ದೇವಸ್ಥಾನದಲ್ಲಿ ಪ್ರಧಾನ ಅರ್ಚಕರು ಮತ್ತು ಸಂತರು ವಿಶೇಷ ಪೂಜೆ ನಡೆಸಿ ಪ್ರಾರ್ಥನೆ ಸಲ್ಲಿಸಿದರು.
ಯೋಗಿ ಆದಿತ್ಯನಾಥ್ ಅವರ ಪೂರ್ವಿಕರ ನಿವಾಸ ಉತ್ತರಾಖಂಡದ ಪೌರಿ ಗರ್ವಾಲ್ ಜಿಲ್ಲೆಯ ಪಂಚೂರ್ ಗ್ರಾಮದಲ್ಲಿ ಜನರು ಸಂಭ್ರಮಾಚರಣೆ ನಡೆಸಿ ಕುಣಿದು ಕುಪ್ಪಳಿಸಿದ್ದಾರೆ.