ನವದೆಹಲಿ: ದ್ವೇಷ ಭಾಷಣದ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗೆ ಸುಪ್ರೀಂಕೋರ್ಟ್ ನಿಂದ ಬಿಗ್ ರಿಲೀಫ್ ಸಿಕ್ಕಂತಾಗಿದೆ. ಸಿಎಂ ಯೋಗಿ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ವಜಾಗೊಳಿಸಿ, ಇದರಲ್ಲಿ ಆರೋಪ ಸಾಬೀತಾಗುವ ಯಾವುದೇ ಅರ್ಹವಾದ ಅಂಶಗಳು ಇಲ್ಲ ಎಂದು ಹೇಳಿದೆ.
2007ರಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ದ್ವೇಷ ಭಾಷಣಕ್ಕೆ ಸಂಬಂಧಿಸಿದಂತೆ ಕ್ರಮ ಜರುಗಿಸಬೇಕೆಂದು ಕೋರಿ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿತ್ತು.
ಇದನ್ನೂ ಓದಿ:ಭಾರಿ ಮಳೆಗೆ ಕೋಳಿ ಫಾರಂ ಗೆ ನುಗ್ಗಿದ ನೀರು: 9ಸಾವಿರ ಕೋಳಿಗಳ ಸಾವು, ಬೀದಿಗೆ ಬಂದ ರೈತನ ಬದುಕು
ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ನೇತೃತ್ವದ ಪೀಠವು, ಈ ಪ್ರಕರಣದ ಪರಿಶೀಲನೆಯಲ್ಲಿ ಅಗತ್ಯವಿರುವ ಆರೋಪ ಕಂಡು ಬಂದಿಲ್ಲ ಎಂದು ತಿಳಿಸಿದೆ.
2018ರಲ್ಲಿ ಅಲಹಾಬಾದ್ ಹೈಕೋರ್ಟ್ ಕೂಡಾ ಯೋಗಿ ವಿರುದ್ಧ ದಾಖಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿ, ಯೋಗಿ ಅವರ ಭಾಷಣದಲ್ಲಿನ ಅಂಶಗಳಲ್ಲಿ ಅವರ ವಿರುದ್ಧ ಕ್ರಮ ಜರುಗಿಸುವಂತಹ ಯಾವುದೇ ಅಂಶಗಳಿಲ್ಲ ಎಂದು ಹೇಳಿತ್ತು.
ದ್ವೇಷ ಭಾಷಣದ ಆರೋಪ ಎದುರಿಸಿದ ವೇಳೆ ಯೋಗಿ ಆದಿತ್ಯನಾಥ್ ಅವರು ಸಂಸದರಾಗಿದ್ದರು. ಎರಡು ಸಮುದಾಯಗಳ ವಿರುದ್ಧ ದ್ವೇಷ ಹರಡುವ ರೀತಿಯಲ್ಲಿ ಯೋಗಿ ಅವರು ಭಾಷಣ ಮಾಡಿರುವುದಾಗಿ ಆರೋಪಿಸಿ ಗೋರಖ್ ಪುರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.