ಲಕ್ನೋ: ನಿರೀಕ್ಷೆಯಂತೆಯೇ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರಕಾರ ಮೊದಲ ಸಂಪುಟ ಸಭೆಯಲ್ಲಿಯೇ ರಾಜ್ಯದ ರೈತರ ಸಾಲ ಮನ್ನಾ ನಿರ್ಧಾರ ಕೈಗೊಂಡಿದೆ. ಈ ಮೂಲಕ ಬಿಜೆಪಿಯು ಪ್ರಣಾಳಿಕೆಯಲ್ಲಿ ನೀಡಿದ್ದ ಆಶ್ವಾಸನೆಯನ್ನು ಈಡೇರಿಸಿದೆ. ಲಕ್ನೋದ ಶಾಸ್ತ್ರಿ ಭವನದಲ್ಲಿ ಮಂಗಳವಾರ ಸಂಜೆ ಉತ್ತರಪ್ರದೇಶ ಸರಕಾರದ ಸಂಪುಟ ಸಭೆ ನಡೆಯಿತು. ಈ ವೇಳೆ, ಚುನಾವಣೆ ಪ್ರಚಾರದ ವೇಳೆ ಬಿಜೆಪಿ ನೀಡಿದ್ದ ಪ್ರಮುಖ ಆಶ್ವಾಸನೆಗಳಲ್ಲಿ ಒಂದಾದ ರೈತರ ಸಾಲ ಮನ್ನಾ ಸೇರಿದಂತೆ ಹಲವು ನಿರ್ಧಾರಗಳನ್ನು ಕೈಗೊಳ್ಳಲಾಯಿತು. ರೈತರ 5,630 ಕೋಟಿ ರೂ.ಗಳ ಅನುತ್ಪಾದಕ ಆಸ್ತಿ ಮತ್ತು 30,729 ಕೋಟಿ ರೂ.ಗಳ ಸಾಲವನ್ನು ಮನ್ನಾ ಮಾಡಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಯಿತು ಎಂದು ಆರೋಗ್ಯ ಸಚಿವ ಸಿದ್ಧಾರ್ಥನಾಥ್ ಸಿಂಗ್ ಹೇಳಿದ್ದಾರೆ. 1 ಲಕ್ಷ ರೂ. ವರೆಗಿನ ಸಾಲದ ಮಿತಿಯನ್ನೂ ವಿಧಿಸಲಾಗಿದೆ.
ಯೋಜನೆ 2.15 ಕೋಟಿ ರೈತರಿಗೆ ನೆರವಾಗಲಿದೆ. ಈ ರೈತರು ಬ್ಯಾಂಕುಗಳಿಗೆ 62 ಸಾವಿರ ಕೋಟಿ ರೂ. ಸಾಲ ಬಾಕಿ ಉಳಿಸಿಕೊಂಡಿದ್ದಾರೆ. ಸಾಲ ಮನ್ನಾ ಮಾಡಿದ ಬಳಿಕ ಬ್ಯಾಂಕುಗಳಿಗೆ ಹೇಗೆ ಹಣ ಪಾವತಿಸಲಾಗುತ್ತದೆ ಎಂಬ ಬಗ್ಗೆ ಸದ್ಯದಲ್ಲೇ ಸರ್ಕಾರ ಮಾಹಿತಿ ನೀಡಲಿದೆ. ಒಂದೋ ಕೇಂದ್ರ ಸರ್ಕಾರದಿಂದ ನೆರವು ಯಾಚಿಸಬಹುದು ಅಥವಾ ರಾಜ್ಯವೇ ಖುದ್ದಾಗಿ ಸಾಲ ಮಾಡಬಹುದು ಎಂದು ಹೇಳಲಾಗಿದೆ.
ಶ್ಲಾಘನೆ: ಇದೇ ವೇಳೆ, ಮಹಿಳೆಯರನ್ನು ಚುಡಾಯಿಸುವವರಿಗೆ ಪಾಠ ಕಲಿಸಲು ಆರಂಭಿಸಲಾದ ರೋಮಿಯೋ ನಿಗ್ರಹ ಪಡೆಯ ಬಗ್ಗೆ ಸಭೆಯಲ್ಲಿ ಶ್ಲಾಘನೆ ವ್ಯಕ್ತವಾಗಿದೆ. ಜತೆಗೆ, ಸಾರ್ವಜನಿಕ ಪ್ರದೇಶದಲ್ಲಿ ಒಪ್ಪಿಗೆಯಿಂದ ಕುಳಿತ ಜೋಡಿಗಳಿಗೆ ತೊಂದರೆ ಕೊಡಬಾರದು ಎಂದೂ ಸೂಚಿಸಲಾಗಿದೆ. ಸಾಲ ಮನ್ನಾ, ಅಕ್ರಮ ಕಸಾಯಿಖಾನೆಗಳ ವಿರುದ್ಧ ಕ್ರಮ, ಗ್ರಾಮೀಣ ಪ್ರದೇಶಗಳಿಗೆ ವಿದ್ಯುತ್, ಬುಂದೇಲ್‌ಖಂಡ್ ಪ್ರದೇಶ, ಪೂರ್ವಾಂಚಲ ಅಭಿವೃದ್ಧಿಗೆ ಯೋಜನೆಗಳು ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದೆ.
ಕಸಾಯಿಖಾನೆ ಕ್ರಮ ಸಮರ್ಥನೆ
ಸುಪ್ರೀಂ ಕೋರ್ಟ್ ಮತ್ತು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ಆದೇಶ ದಂತೆ ರಾಜ್ಯದಲ್ಲಿ ಅಕ್ರಮ ಕಸಾಯಿ ಖಾನೆಗಳ ವಿರುದ್ಧ ಕ್ರಮ ಕೈಗೊಳ್ಳುವುದನ್ನು ಮುಂದುವರಿಸಲಾಗುವುದು ಎಂದೂ ಸರ್ಕಾರ ಹೇಳಿದೆ. ಜತೆಗೆ, ಕಸಾಯಿಖಾನೆಗಳಿಗೆ ಹೊಸ ಮಾರ್ಗಸೂಚಿಗಳನ್ನೂ ಘೋಷಿಸಿದೆ. ಈವರೆಗೆ 26 ವಧಾಗೃಹ ಮುಚ್ಚಲಾಗಿದೆ ಎಂಬ ಮಾಹಿತಿಯನ್ನೂ ನೀಡಿದೆ.