Advertisement

ಯೋಗಿ ಆದಿತ್ಯನಾಥ್‌: ಹಿಂದುತ್ವದ ಫೈರ್‌ಬ್ರ್ಯಾಂಡ್‌

11:19 AM Mar 12, 2022 | Team Udayavani |

ಅದು 2017. ಇಡೀ ದೇಶದ ರಾಜಕೀಯ ದಿಕ್ಕು ಬದಲಿಸಬಲ್ಲ ಸಾಮರ್ಥ್ಯವಿರುವ ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆ ಕಾಲ. ಆಗಲೂ ಇತ್ತೀಚೆಗಷ್ಟೇ ಮುಗಿದ ಚುನಾವಣೆಯಂತೆ ಏಳು ಹಂತಗಳಲ್ಲಿ ನಡೆದ ಮತದಾನ. ವಿಶೇಷವೆಂದರೆ ಚುನಾವಣೆಗೆ ಮುನ್ನವಾಗಲಿ, ಚುನಾವಣೆ ಆರಂಭದ ಅನಂತರವಾಗಲಿ ಅಥವಾ ಚುನಾವಣೆಯಲ್ಲಿ ಗೆದ್ದ ಮೇಲೂ ಮುಂದಿನ ಸಿಎಂ ಯಾರು ಎಂಬ ವಿಚಾರ ಬಿಜೆಪಿಯಲ್ಲಿಯೇ ಯಾರಿಗೂ ಗೊತ್ತಿರಲಿಲ್ಲ. ಅಷ್ಟೇ ಅಲ್ಲ, ಉತ್ತರ ಪ್ರದೇಶ ಚುನಾವಣೆಯ ಮೊದಲೆರಡು ಹಂತದಲ್ಲಿ  ಸ್ಟಾರ್‌ ಕ್ಯಾಂಪೇನರ್‌ ಪಟ್ಟಿಯಲ್ಲಿಯೂ ಇವರ ಹೆಸರು ಕೇಳಿಬಂದಿರಲಿಲ್ಲ.

Advertisement

ಹೌದು, ಇವರು ಬೇರಾರೂ ಅಲ್ಲ, ಯೋಗಿ ಆದಿತ್ಯನಾಥ್‌. 2017ರಲ್ಲಿ ಗೋರಖ್‌ಪುರದ ಸಂಸದರಾಗಿದ್ದ ಯೋಗಿ ಆದಿತ್ಯನಾಥ್‌, ಆಗ ಸಿಎಂ ಹುದ್ದೆಗೇರಿದ ಕಥೆಯೇ ರೋಚಕ. ಉತ್ತರ ಪ್ರದೇಶದಲ್ಲಿ ಬಿಜೆಪಿಯಲ್ಲಿ ಕೇಳಿಬರುತ್ತಿದ್ದ ಎರಡು ಹೆಸರುಗಳೆಂದರೆ ಒಂದು ಕೇಶವ್‌ ಪ್ರಸಾದ್‌ ಮೌರ್ಯ, ಮತ್ತೂಬ್ಬರು ಮನೋಜ್‌ ಸಿನ್ಹಾ. ಆದರೆ ಗೋರಖ್‌ಪುರಕ್ಕೆ ಮಾತ್ರ ಸೀಮಿತವಾಗಿ, ರಾಷ್ಟ್ರ ರಾಜಕಾರಣದಲ್ಲಿ ಮಾತ್ರ ಕಾಣಿಸಿಕೊಂಡಿದ್ದ ಯೋಗಿ, ದಿಢೀರನೇ ಸಿಎಂ ಆಗಿ ಬದಲಾಗಿಬಿಟ್ಟರು.

ಮೊದಲು ಸೇರಿದ್ದು ಎಸ್‌ಎಫ್ಐಗೆ! :ಯೋಗಿ ಆದಿತ್ಯನಾಥ್‌ ಅವರು ಕಾಲೇಜು ದಿನಗಳಲ್ಲಿ, ಸಂಬಂಧಿಯೊಬ್ಬರ ಸಲಹೆ ಮೇರೆಗೆ ಸ್ಟೂಡೆಂಟ್‌ ಫೆಡರೇಶನ್‌ ಆಫ್ ಇಂಡಿಯಾ(ಎಸ್‌ಎಫ್ಐ)ಗೆ ಸೇರಿದ್ದರು. ಆದರೆ ಯೋಗಿ ಅವರಿಗೆ ಇದು ಸೆಟ್‌ ಆಗಲಿಲ್ಲ. ಬಳಿಕ ಆರ್‌ಎಸ್‌ಎಸ್‌ನ ವಿದ್ಯಾರ್ಥಿ ವಿಭಾಗ ಮತ್ತು ಅಖೀಲ ಭಾರತ ವಿದ್ಯಾರ್ಥಿ ಪರಿಷತ್‌(ಎಬಿವಿಪಿ)ಗೆ ಸೇರಿದ್ದರು. ಗಾಸಿಪ್‌ಗಳನ್ನು ಇಷ್ಟಪಡದ ಮತ್ತು ಅತ್ಯಂತ ಕ್ಯೂರಿಯಸ್‌ ಆಗಿದ್ದ ಯೋಗಿ ಆದಿತ್ಯನಾಥ್‌, ಮಹಾಂತ ಮಠದ ಅವೈದ್ಯನಾಥ್‌ ಅವರ ಕಣ್ಣಿಗೆ ಬಿದ್ದಿದ್ದರು. ಇವರೇ ಯೋಗಿ ಆದಿತ್ಯನಾಥ್‌ ಅವರನ್ನು ಮಠಕ್ಕೆ ಸೇರುವಂತೆ ಕರೆದಿದ್ದರು. ಮಠ ಸೇರಿದ ಕೆಲವೇ ದಿನಗಳಲ್ಲಿ ಯೋಗಿ ಅವರನ್ನು ಕಿರಿಯ ಮಹಾಂತ ಎಂದೇ ಕರೆಯಲಾಗುತ್ತಿತ್ತು.

ಬಿಜೆಪಿ ನಾಯಕರ ಜತೆ ಸಂಬಂಧ ಅಷ್ಟಕ್ಕಷ್ಟೇ!: ಹೌದು, ಇದನ್ನು ನಂಬಲೇಬೇಕು. ಆರಂಭದ ದಿನಗಳಲ್ಲಿ ಯೋಗಿ ಆದಿತ್ಯನಾಥ್‌ ಅವರು, ಬಿಜೆಪಿ ನಾಯಕರೊಂದಿಗೆ ಇರಿಸಿಕೊಂಡಿದ್ದ ಸಂಬಂಧ ಅಷ್ಟಕ್ಕಷ್ಟೇ ಎಂಬಂತೆ ಇತ್ತು. 2010ರಲ್ಲಿ ಮಹಿಳಾ ಮಸೂದೆ ವಿಚಾರದಲ್ಲಿ ಬಿಜೆಪಿ ತೆಗೆದುಕೊಂಡಿದ್ದ ನಿಲುವಿನ ಬಗ್ಗೆ ಬಹಿರಂಗವಾಗಿಯೇ ಆಕ್ಷೇಪ ವ್ಯಕ್ತಪಡಿಸಿದ್ದರು. 2002ರಲ್ಲಿ ಗೋರಖ್‌ಪುರದಲ್ಲಿ ಬಿಜೆಪಿಯ ಅಧಿಕೃತ ಅಭ್ಯರ್ಥಿ ಬಿಟ್ಟು, ಹಿಂದೂ ಮಹಾಸಭಾದ ಅಭ್ಯರ್ಥಿಗೆ ಬೆಂಬಲ ಕೊಟ್ಟಿದ್ದರು. ಹಾಗೆಯೇ 2006ರಲ್ಲಿ ತಮ್ಮ ಸಾಮರ್ಥ್ಯ ಅನಾವರಣ ಮಾಡಲು ಗೋರಖ್‌ಪುರದಲ್ಲಿ ವಿರಾಟ್‌ ಹಿಂದೂ ಮಹಾ ಸಮ್ಮೇಳನ ಆಯೋಜಿಸಿದ್ದರು. ಅದೇ ಸಂದರ್ಭಕ್ಕೆ ಲಕ್ನೋದಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ನಡೆಯುತ್ತಿತ್ತು.

ಗೋರಖ್‌ಪುರದಲ್ಲಿ ಪ್ರಭಾವಶಾಲಿ: ಯೋಗಿ ಆದಿತ್ಯನಾಥ್‌ ಅವರನ್ನು ಗೋರಖ್‌ಪುರದಲ್ಲಿ ಯಾರೂ ಅಲುಗಾಡಿಸುವಂತಿಲ್ಲ. ಇದಕ್ಕೆ ಉದಾಹರಣೆ ಎಂದರೆ, 2007ರಲ್ಲಿನ ಕೋಮುಗಲಭೆ ಪ್ರಕರಣವೊಂದರ ಆರೋಪ ಸಂಬಂಧ ಯೋಗಿ ಅವರನ್ನು ಪೊಲೀಸರು ಬಂಧಿಸಿದ್ದರು. ಆದರೆ ಮಠದಿಂದ ಪೊಲೀಸ್‌ ಠಾಣೆಗೆ ಒಂದೂವರೆ ಕಿ.ಮೀ. ದೂರವಿದ್ದು, ಇಲ್ಲಿಂದ ಅಲ್ಲಿಗೆ ಕರೆದುಕೊಂಡು ಹೋಗಲು ಪೊಲೀಸರು 5 ಗಂಟೆ ಸಮಯ ತೆಗೆದುಕೊಂಡಿದ್ದರು. ಏಕೆಂದರೆ ಇವರ ಬಂಧನ ವಿರೋಧಿಸಿ ಇಡೀ ಗೋರಖ್‌ಪುರ ರಸ್ತೆಯಲ್ಲಿ ಬಂದು ನಿಂತಿತ್ತು. ಭಾರೀ ಟ್ರಾಫಿಕ್‌ ಜಾಮ್‌ಗೂ ಕಾರಣವಾಗಿತ್ತು.

Advertisement

ವ್ರಿಹಾದ್‌ ಹಿಂದೂ ಕಾರ್ಡ್‌ : ಹಿಂದೂ ಧರ್ಮದ ಉಳಿವಿಗಾಗಿ ಹೋರಾಡುತ್ತಿರುವ ಅಗ್ರ ನಾಯಕರಲ್ಲಿ ಯೋಗಿ ಆದಿತ್ಯನಾಥ್‌ ಕೂಡ ಒಬ್ಬರು. ಅದರ ಜತೆಗೆ ಹಿಂದೂ ಮತದಾರರಲ್ಲಷ್ಟೇ ಇವರು ಫೇಮಸ್‌ ಆಗಿ ಉಳಿದಿಲ್ಲ. ಹಿಂದೂ ಧರ್ಮದಲ್ಲೇ ಇರುವ, ಅತ್ಯಂತ ಹಿಂದುಳಿದವರಲ್ಲಿಯೂ ಯೋಗಿ ಆದಿತ್ಯನಾಥ್‌ ಬೆಂಬಲಿಗರಿದ್ದಾರೆ. ಹೀಗಾಗಿ ಇವರನ್ನು ವ್ರಿಹಾದ್‌ ಹಿಂದೂ ಕಾರ್ಡ್‌ ಆಗಿಯೂ ಗುರುತಿಸಲಾಗುತ್ತದೆ.

ಐದು ಬಾರಿ ಲೋಕಸಭೆಗೆ ಆಯ್ಕೆ
1998ರಿಂದ 2014ರ ವರೆಗೆ ಸತತ ಐದು ಬಾರಿಗೆ ಯೋಗಿ ಆದಿತ್ಯನಾಥ್‌ ಅವರು ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಅಂದರೆ 1998, 1999, 2004, 2009 ಮತ್ತು 2014ರಲ್ಲಿ ಗೋರಖ್‌ಪುರದಿಂದಲೇ ಆಯ್ಕೆಯಾಗಿದ್ದರು. 12ನೇ ಲೋಕಸಭೆಯಲ್ಲಿ ಅತ್ಯಂತ ಕಿರಿಯ ಸಂಸದ ಎಂಬ ಖ್ಯಾತಿಗೂ ಇವರೇ ಒಳಗಾಗಿದ್ದರು. 16ನೇ ಲೋಕಸಭೆಯಲ್ಲಿ ಯೋಗಿ ಅವರು ಶೇ.77ರಷ್ಟು ಹಾಜರಾತಿ ಪ್ರಮಾಣ ಇರಿಸಿಕೊಂಡಿದ್ದು, 284 ಪ್ರಶ್ನೆಗಳನ್ನು ಕೇಳಿದ್ದಾರೆ. 56 ಚರ್ಚೆಗಳಲ್ಲಿ ಭಾಗವಹಿಸಿದ್ದೂ ಅಲ್ಲದೇ, ಮೂರು ಖಾಸಗಿ ಮಸೂದೆಗಳನ್ನೂ ಮಂಡಿಸಿದ್ದರು.

ಯೋಗಿ ಕೆಲಸದ ಸ್ಟೈಲ್‌
ಯೋಗಿ ಆದಿತ್ಯನಾಥ್‌ ಅವರನ್ನು ಹತ್ತಿರದಿಂದ ಬಲ್ಲವರು ಹೇಳುವುದು ಹೀಗೆ; ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಅವರ ಕೆಲಸದ ಸ್ಟೈಲ್‌ ಹೆಚ್ಚು ಕಡಿಮೆ ಪ್ರಧಾನಿ ಮೋದಿ ಅವರಂತೆಯೇ ಇದೆ. 2017ರಲ್ಲಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಮೇಲೆ, ಮೋದಿ ಅವರು, ಯೋಗಿ ಅವರಿಗೆ ಅಧಿಕಾರಿಗಳ ಜತೆ ಸಭೆ ನಡೆಸುವಂತೆ ಹೇಳಿ, ಮುಂದಿನ 100 ದಿನ ಯಾವ ಕೆಲಸವನ್ನು ಆದ್ಯತೆಯಿಂದ ಮಾಡುತ್ತೀರಿ ಎಂದು ಪ್ರಶ್ನಿಸಿ ವಿವರಣೆ ತೆಗೆದುಕೊಳ್ಳುವಂತೆ ಸೂಚಿಸಿದ್ದರು.

ಅದೇ ಪ್ರಕಾರ, ಯೋಗಿ ಆದಿತ್ಯನಾಥ್‌ ಕೂಡ ಅಧಿಕಾರಿಗಳ ಜತೆ ಸಭೆ ನಡೆಸಲು ಶುರು ಮಾಡಿದರು. ಆರಂಭದಲ್ಲಿ ಅಧಿಕಾರಿಗಳು ಯೋಗಿ ಆದಿತ್ಯನಾಥ್‌ ಅವರನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿರಲಿಲ್ಲವಂತೆ. ಆದರೆ ಅನಂತರದ ದಿನಗಳಲ್ಲಿ ಯೋಗಿ ಅವರ ನೆನಪಿನ ಶಕ್ತಿ ಬಗ್ಗೆ ಗೊತ್ತಾಯಿತಂತೆ. ಅಂದರೆ ಅಧಿಕಾರಿಗಳು ಪ್ರತೀ  3 ತಿಂಗಳಿಗೊಮ್ಮೆ ತಮ್ಮ ಇಲಾಖೆಯಲ್ಲಿನ ಕೆಲಸದ ಬಗ್ಗೆ ವಿವರಣೆ ನೀಡಬೇಕಾಯಿತು. ಯಾರಾದರೂ ಅಧಿಕಾರಿ, ಹಿಂದಿನ ದಾಖಲೆಗಳನ್ನೇ ತೆಗೆದುಕೊಂಡು ಬಂದು, ವಿವರಣೆ ನೀಡಿದರೆ, ಯೋಗಿ ಅಲ್ಲೇ ತಡೆದು, ಇದು ಹಳೆಯ ಪರಿಶೀಲನ ವರದಿ. ಈಗ ಏನಾಗಿದೆ ಎಂಬುದನ್ನು ಹೇಳಿ ಎಂದು ಕೇಳುತ್ತಿದ್ದರು. ಅನಂತರದಲ್ಲಿ ಅಧಿಕಾರಿಗಳು, ಸರಕಾರದ ಯೋಜನೆಯನ್ನು ಅತ್ಯಂತ ವೇಗವಾಗಿ ಜಾರಿ ಮಾಡಲು ಮುಂದಾದರು ಎಂದು ಆಪ್ತವರ್ಗದವರು ಹೇಳುತ್ತಾರೆ.

ಯೋಗಿ ಕುರಿತ ರೋಚಕ ಸಂಗತಿಗಳು-
1. ಯೋಗಿ ಆದಿತ್ಯನಾಥ್‌ ಅವರ ಮೂಲ ಹೆಸರು ಅಜಯ್‌ ಸಿಂಗ್‌

2. 21ನೇ ವಯಸ್ಸಿನಲ್ಲಿಯೇ ಮನೆ ಬಿಟ್ಟು, ಗೋರಖ್‌ಪುರದ ಮಹಾಂತ ಆದಿತ್ಯನಾಥ್‌ ಶಿಷ್ಯರಾಗಿ ಸೇರಿಕೊಂಡ ಯೋಗಿ, ಅನಂತರದ ದಿನಗಳಲ್ಲಿ ಇದೇ ಮಠದ ಪ್ರಮುಖ ಅರ್ಚಕರಾಗಿ ಬದಲಾದರು.

3. ಉತ್ತರಾಖಂಡದ ಎಚ್‌ಎನ್‌ಬಿ ವಿವಿಯಲ್ಲಿ ಗಣಿತ ಶಾಸ್ತ್ರದಲ್ಲಿ ಪದವಿ ಮುಗಿಸಿದ್ದಾರೆ.

4. 1996ರಲ್ಲಿ ಮಹಾಂತ ಆದಿತ್ಯನಾಥ್‌ ಅವರ ಪರವಾಗಿ ಚುನಾವಣ ಪ್ರಚಾರದಲ್ಲಿ ತೊಡಗಿದ್ದರು. 1998ರಲ್ಲಿ ಮಹಾಂತ ಆದಿತ್ಯನಾಥ್‌ ಸಕ್ರಿಯ ರಾಜಕಾರಣ ಬಿಟ್ಟ ಮೇಲೆ ಅವರ ಉತ್ತರಾಧಿಕಾರಿಯಾದರು. ಅದೇ ವರ್ಷ ಗೋರಖ್‌ಪುರದಿಂದ ಲೋಕಸಭೆ ಕಣಕ್ಕಿಳಿದರು.

5.ವಿಶೇಷವೆಂದರೆ ಯೋಗಿ ಆದಿತ್ಯನಾಥ್‌ ಲೋಕಸಭೆ ಪ್ರವೇಶಿಸಿದಾಗ ಅವರ ವಯಸ್ಸು ಕೇವಲ 26.

6. 2002ರಲ್ಲಿ ಗೋವುಗಳ ರಕ್ಷಣೆಗಾಗಿ ಹಿಂದು ಯುವ ವಾಹಿನಿ ಎಂಬ ಸಂಘಟನೆಯೊಂದನ್ನು ಕಟ್ಟಿದರು.

7. 2005ರಲ್ಲಿ ಹಿಂದೂ ಧರ್ಮ ಬಿಟ್ಟು ಬೇರೆ ಧರ್ಮಕ್ಕೆ ಸೇರಿದ್ದವರನ್ನು ವಾಪಸ್‌ ಕರೆತರುವ ನಿಟ್ಟಿನಲ್ಲಿ ಘರ್‌ವಾಪ್ಸಿ ಆಂದೋಲನ ನಡೆಸಿದರು. ಈ ವೇಳೆ 5,000 ಮಂದಿಯನ್ನು ವಾಪಸ್‌ ಹಿಂದೂ ಧರ್ಮಕ್ಕೆ ಕರೆತಂದಿದ್ದರು.

8. ಪ್ರತೀ ದಿನವೂ ಯೋಗಿ ಆದಿತ್ಯನಾಥ್‌ ರಾತ್ರಿ 11ಗಂಟೆಗೆ ಮಲಗಿ, ಬೆಳಗಿನ ಜಾವ 3 ಗಂಟೆಗೆ ಏಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next