ಕರ್ನಾಟಕದಲ್ಲಿ ಸಿಎಂ ಆದವರು “ಚಾಮರಾಜನಗರ ಜಿಲ್ಲೆಗೆ ಹೋದರೆ ಅಧಿಕಾರ ಕಳೆದುಕೊಳ್ಳುತ್ತಾರೆ’ ಎಂಬ ಮೌಡ್ಯವೊಂದು ಹಲವು ವರ್ಷಗಳಿಂದಲೂ ನೆಲೆನಿಂತಿದೆ.
ಅಂಥದ್ದೇ ಒಂದು ಮೂಢನಂಬಿಕೆ ಉತ್ತರಪ್ರದೇಶದಲ್ಲೂ ಇದ್ದು, ಅದನ್ನು ಸಿಎಂ ಯೋಗಿ ಆದಿತ್ಯನಾಥ್ “ಸುಳ್ಳಾಗಿಸಿದ್ದಾರೆ!’
ಉತ್ತರಪ್ರದೇಶದ ಯಾವುದೇ ಮುಖ್ಯಮಂತ್ರಿಯು ಗೌತಮಬುದ್ಧ ನಗರ ಜಿಲ್ಲೆಯಲ್ಲಿರುವ ನೋಯ್ಡಾಗೆ ಭೇಟಿ ಕೊಟ್ಟರೆ, ಅವರು ಅಧಿಕಾರ ಕಳೆದುಕೊಳ್ಳುವುದು ನಿಶ್ಚಿತ ಎಂಬ ಮಿಥ್ಯೆಯೊಂದು ಕಳೆದ 30 ವರ್ಷಗಳಿಂದಲೂ ಚಾಲ್ತಿಯಲ್ಲಿದೆ. 2007ರ ಮಾರ್ಚ್‌ನಲ್ಲಿ ರಾಜ್ಯದ ಸಿಎಂ ಆಗಿ ಪ್ರಮಾಣ ಸ್ವೀಕರಿಸಿದ್ದ ಮಾಯಾವತಿಯವರು, ನವೆಂಬರ್‌ನಲ್ಲಿ ತಮ್ಮ ಆಪ್ತರೊಬ್ಬರ ಸಂಬಂಧಿಯ ವಿವಾಹಕ್ಕೆ ತೆರಳಿದ್ದರು. 2012ರ ಚುನಾವಣೆಯಲ್ಲಿ ಮಾಯಾ ಅಧಿಕಾರ ಕಳೆದುಕೊಂಡರು.
ಇದೇ ಕಾರಣಕ್ಕಾಗಿ ಸಿಎಂ ಸ್ಥಾನದಲ್ಲಿದ್ದ ಮುಲಾಯಂ ಸಿಂಗ್, ರಾಜನಾಥ್ ಸಿಂಗ್, ಕಲ್ಯಾಣ್ ಸಿಂಗ್ ಅವರು ನೋಯ್ಡಾಗೆ ತೆರಳಲು ಹಿಂದೇಟು ಹಾಕಿದ್ದರು. ಅಖೀಲೇಶ್ ಕೂಡ ಇದೇ ಟ್ರೆಂಡ್ ಅನ್ನು ಮುಂದುವರಿಸಿದ್ದರು. ಆದರೆ, ಯೋಗಿ ಅವರು ಮಾತ್ರ ಈ ಮೌಡ್ಯವನ್ನು ನಂಬದೇ 2017ರ ಬಳಿಕ ಸುಮಾರು 12ಕ್ಕೂ ಹೆಚ್ಚು ಬಾರಿ ನೋಯ್ಡಾಗೆ ಭೇಟಿ ನೀಡಿದ್ದರು. ಈಗ ಮತ್ತೆ ಗೆದ್ದು ಸಿಎಂ ಕುರ್ಚಿಗೇರುತ್ತಿರುವ ಅವರು, “ನೋಯ್ಡಾ’ಗಿದ್ದ ದುರದೃಷ್ಟದ ಕಳಂಕವನ್ನು ದೂರ ಮಾಡಿದ್ದಾರೆ.