ಲಕ್ನೋ : ರಾಜ್ಯದಲ್ಲಿರುವ ಅಕ್ರಮ ಕಸಾಯಿಖಾನೆಗಳ ವಿರುದ್ಧ ಮಾತ್ರವೇ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಹೊರತು ಪರವಾನಿಗೆ ಹೊಂದಿರುವ ಕಸಾಯಿಖಾನೆಗಳಿಗೆ ಯಾವುದೇ ತೊಂದರೆ ಇಲ್ಲ ಮತ್ತು ಮಾಂಸ ವ್ಯಾಪಾರ ಮುಂದುವರಿಯಲಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭರವಸೆ ನೀಡಿದ್ದಾರೆ.
ಗುರುವಾರ ಸಂಜೆ ಮಾಂಸ ವ್ಯಾಪಾರಿಗಳು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಬಳಿಕ ಈ ಹೇಳಿಕೆ ನೀಡಿದ್ದಾರೆ.
ನಾವು ಜಾತಿ, ಧರ್ಮವನ್ನು ಗುರಿಯಾಗಿರಿಸಿಕೊಂಡು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ,ಅಕ್ರಮಗಳ ವಿರುದ್ಧ ಮಾತ್ರ ಕಾರ್ಯಾಚರಣೆ ನಡೆಸುತ್ತಿದ್ದೇವೆ ಎಂದು ನಿಯೋಗದ ಬಳಿ ಯೋಗಿ ಹೇಳಿರುವುದಾಗಿ ವರದಿಯಾಗಿದೆ.
ಮಾತುಕತೆಯ ಬಳಿಕ ಸಚಿವ ಸಿದ್ಧಾರ್ಥ್ ನಾಥ್ ಸಿಂಗ್ ಹೇಳಿಕೆ ನೀಡಿ ಪರವಾನಿಗೆ ಇರುವ ಕಸಾಯಿಖಾನೆಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಅಂತಹವುಗಳ ಮೇಲೆ ಕ್ರಮ ಕೈಗೊಂಡರೆ ಅಧಿಕಾರಿಗಳ ವಿರುದ್ಧವು ಶಿಸ್ತು ಕ್ರಮ ಜರಗಿಸುತ್ತೇವೆ ಎಂದು ಸ್ಪಷ್ಟನೆ ನೀಡಿದರು.
ಮಾತುಕತೆ ಫಲಪ್ರದವಾಗಿದ್ದು, ಭಾರತೀಯರಾಗಿ ನಿಮ್ಮ ನಿರ್ಧಾವನ್ನು ಸ್ವಾಗತಿಸುವುದಾಗಿ ಯಾವುದೇ ಅಕ್ರಮಗಳನ್ನು ನಾವು ಬೆಂಬಲಿಸುವುದಿಲ್ಲ ಎಂದು ಮಾಂಸ ವ್ಯಾಪಾರಿಗಳು ಸಿಎಂ ಕ್ರಮಕ್ಕೆ ಬೆಂಬಲ ಸೂಚಿಸಿರುವುದಾಗಿ ಸಿದ್ಧಾರ್ಥ್ ನಾಥ್ ತಿಳಿಸಿದ್ದಾರೆ.
ಮಾಂಸ ರಫ್ತು ಉದ್ಯಮಿ ಸಿರಾಜುದ್ದೀನ್ ಖುರೇಷಿ ನಾವು ಸಿಎಂ ಯೋಗಿ ಅವರೊಂದಿಗೆ ಫಲಪ್ರದ ಮಾತುಕತೆ ನಡೆಸಿದ್ದು , ಸಕ್ರಮ ಕಸಾಯಿಖಾನೆಗಳಿಗೆ ಯಾವುದೇ ತೊಂದರೆ ಇಲ್ಲ ಎಂದು ಭರವಸೆ ನೀಡಿದ್ದಾರೆ ಎಂದು ಟ್ವೀಟ್‌ನಲ್ಲಿ ಬರೆದಿದ್ದಾರೆ.
ಪ್ರತಿಭಟನೆ ನಡೆಸುವರು ತಮ್ಮ ಕೆಲಸಕ್ಕೆ ವಾಪಾಸಾಗಬೇಕು. ಪರವಾನಿಗೆ ಪಡೆದು ಮಾಂಸ ವ್ಯಾಪಾರ ಶುರು ಮಾಡಬೇಕು. ಸರ್ಕಾರ ನಿಮಗೆ ಎಲ್ಲಾ ರೀತಿ ನೆರವು ನೀಡಲಿದೆ ಎಂದು ಖುರೇಷಿ ಕರೆ ನೀಡಿದ್ದಾರೆ.
ಸರ್ಕಾರ ಕಸಾಯಿಖಾನೆಗಳ ವಿರುದ್ಧ ಕಾರ್ಯಾಚರಣೆ ನಡೆಸಿದ ಕಾರಣ 25 ಲಕ್ಷ ಮಂದಿ ಮಾಂಸ ವ್ಯಾಪಾರಿಗಳು ಕಂಗಾಲಾಗಿ ಹೋಗಿದ್ದರು. ಆ ಬಳಿಕ ವ್ಯಾಪಾರ ಸ್ಥಗಿತ ಗೊಳಿಸಿ ಪ್ರತಿಭಟನೆಯನ್ನೂ ನಡೆಸಿದ್ದರು.