ಪ್ರತಾಪಗಢ, ಉತ್ತರ ಪ್ರದೇಶ : ದಲಿತರನ್ನು ತಲುಪುವ ಉದ್ದೇಶದೊಂದಿಗೆ ರೂಪಿಸಲಾಗಿರುವ ಗ್ರಾಮ ಸ್ವರಾಜ್ಯ ಯೋಜನೆಯಲ್ಲಿ ಉತ್ತರ ಪ್ರದೇಶದ ಸುಮಾರು 50,000 ಗ್ರಾಮ ಪಂಚಾಯತ್‌ಗಳಿಗೆ ಭೇಟಿ ನೀಡುವ ಕಾರ್ಯಕ್ರಮದ ಅಂಗವಾಗಿ ನಡೆದ ಮುಕ್ತ ಸಂವಾದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, “ನಿಮಗಾಗಿ ಸರಕಾರ ಶೌಚಾಲಯಗಳನ್ನು ನಿರ್ಮಿಸಿ ಕೊಟ್ಟಿದೆಯೇ?’ ಎಂದು ಕೇಳಿದಾಗ ನೆರೆದಿದ್ದ ದಲಿತ ಸಮೂಹ ದೊಡ್ಡ ಧ್ವನಿಯಲ್ಲಿ “ಇಲ್ಲ’ ಎಂದು ಉತ್ತರಿಸುವ ಮೂಲಕ ಯೋಗಿ ಅವರಿಗೆ ತೀವ್ರ ಮುಜುಗರ ಉಂಟುಮಾಡಿದ ಘಟನೆ ವರದಿಯಾಗಿದೆ.
ಸಿಎಂ ಯೋಗಿ ಆದಿತ್ಯನಾಥ್ ಅವರು ಪ್ರತಿಯೋಂದು ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಿ ಅಲ್ಲಿ ಆಗಿರುವ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸುತ್ತಿರುವ ಸಂದರ್ಭದಲ್ಲಿ ಈ ಮುಜುಗರ ಅನುಭವಿಸಬೇಕಾಯಿತು ಎಂದು ವರದಿಗಳು ತಿಳಿಸಿವೆ.
ಸಿಎಂ ಯೋಗಿ ಆದಿತ್ಯನಾಥ್ ಅವರು ನಿನ್ನೆ ಸೋಮವಾರ ಪ್ರತಾಪ್‌ಗ್ಢ ಜಿಲ್ಲೆಯ ಕಂದಾಯಿಪುರ ಮಾಧುಪರ ಗ್ರಾಮಗಳಿಗೆ ಭೇಟಿ ಅಲ್ಲಿನ ಗ್ರಾಮಸ್ಥರೊಂದಿಗೆ ಭೋಜನ ಸ್ವೀಕರಿಸುವ ಚೌಪಾಲ್ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಬಳಿಕ ನಡೆದ ಸಂವಾದ ಕಾರ್ಯಕ್ರಮದಲ್ಲಿ ನಿಮಗಾಗಿ ಶೌಚಾಲಯ ನಿರ್ಮಿಸಿಕೊಡಲಾಗಿದೆಯೇ ಎಂದುಸಿಎಂ ಯೋಗಿ ನೆರೆದ ಗ್ರಾಮಸ್ಥರನ್ನು ಕೇಳಿದರು. ಆಗ ಅವರು ಗಟ್ಟಿ ಸ್ವರದಲ್ಲಿ ಇಲ್ಲ ಎಂದು ಕೂಗಿದಾಗ, ಸಿಎಂ ಯೋಗಿ ಅವರಿಗೆ ಗ್ರಾಮ ಮುಖ್ಯಸ್ಥರು ತಮ್ಮ ಗ್ರಾಮದಲ್ಲಿ ಸರಕಾರದಿಂದ ಒಂದೇ ಒಂದು ಶೌಚಾಲಯವೂ ನಿರ್ಮಾಣವಾಗಿಲ್ಲ ಎಂದು ತಿಳಿಸಿದರು.
ಕೂಡಲೇ ಸಿಎಂ ಅವರು ಅಧಿಕಾರಿಗಳನ್ನು ಜನರ ಮುಂದೆಯೇ ಕರೆಸಿಕೊಂಡು 24 ತಾಸುಗಳ ಒಳಗೆ ಶೌಚಾಲಯ ನಿರ್ಮಾಣಕ್ಕಾಗಿ ಹಣ ಬಿಡುಗಡೆ ಮಾಡುವಂತೆ ಆದೇಶಿಸಿದರು. ಗ್ರಾಮದ ಪ್ರತಿಯೋರ್ವರಿಗೂ ರೇಶನ್ ಕಾರ್ಡ್ ಕೊಡಿಸುವಂತೆ ಸಿಎಂ ಆದೇಶಿಸಿದರು.
ಆದಿತ್ಯನಾಥ್ ಅವರು ದಲಿತ ಕುಟುಂಬವೊಂದರ ಮನೆಗೂ ಭೇಟಿ ನೀಡಿ ಅಲ್ಲಿ ಆತಿಥ್ಯ ಸ್ವೀಕರಿಸಿದರು.