Advertisement
ಯೋಗವೆಂದರೆ ಶಿಸ್ತಿನ ಒಂದು ಗುಂಪು ಎಂದರ್ಥವಿದೆ. ಒಗ್ಗೂಡು ಎನ್ನುವ ಅರ್ಥ ಕೂಡ ಇದೆ. ಆದರೆ ಯೋಗವೆಂದರೆ ಕೆಲವಷ್ಟು ಆಸನಗಳಲ್ಲ. ಪ್ರಾಣಾಯಾಮ ಮತ್ತು ಆಸನ ಸೇರಿದರೆ ಮಾತ್ರ ಯೋಗವಾಗುತ್ತದೆ. ಇವೆರಡನ್ನು ಕ್ರಮಬದ್ಧವಾಗಿ ಅನುಭವ ಪೂರಕವಾಗಿ ಸಂಘಟಿಸುವವರೂ ಇರಬೇಕು. ಪತಂಜಲಿ ಮುನಿಗಳು ಯೋಗವನ್ನು ಚಿತ್ತ ವೃತ್ತಿ ನಿರೋಧ ಎಂದಿದ್ದಾರೆ. ದಿನವಿಡೀ ದಣಿದ ಮನಸ್ಸನ್ನು ವಿಶ್ರಾಂತಗೊಳಿಸುವುದು ಮುಖ್ಯ.
Related Articles
Advertisement
ಯೋಗವು ಸರ್ವರ ಕ್ಷೇಮವನ್ನು ಬಯಸುತ್ತಿದೆ. ವಿಜ್ಞಾನದ ಮನೆಯನ್ನು ಪ್ರವೇಶಿಸಿದೆ. ಯೋಗ ಮಾಡುವುದು ಧರ್ಮ ನಿಷಿದ್ಧವಲ್ಲವೆನ್ನುವುದನ್ನು ಅನೇಕ ರಾಷ್ಟ್ರಗಳು ಸ್ಪಷ್ಟಪಡಿಸಿವೆ. ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಜೀವನ ಕ್ರಮವು ಒತ್ತಡದಿಂದ ಕೂಡಿದೆ. 22 ಮಾತ್ರೆ ತಿನ್ನುವ ಒಬ್ಬ ರೋಗಿಯ ವೈಯಕ್ತಿಕ ಜೀವನವನ್ನು ಅಧ್ಯಯನ ಮಾಡಿದಾಗ ಕಂಡು ಬಂದಿರುವ ಕಟುವಾದ ಸತ್ಯವೆಂದರೆ ದೈಹಿಕವಾಗಿ ಅವನಿಗೆ ಬೇಕಾಗಿರುವುದು 6 ಮಾತ್ರೆ ಮಾತ್ರ. ಮತ್ತೆಲ್ಲಾ ಮಾತ್ರೆಗಳು ಅವನ ಮಾನಸಿಕ ಒತ್ತಡದಿಂದ ಅವನೇ ತಂದುಕೊಂಡ ಕೃತಕ ಕಾಯಿಲೆಗಳೆಂದು ಸಂಶೋಧನೆಯಿಂದ ದೃಢಪಟ್ಟಿದೆ. ಒಬ್ಬ ವ್ಯಕ್ತಿಗೆ ವೈಯಕ್ತಿಕ ಸಮಸ್ಯೆ, ಕೌಟುಂಬಿಕ ಸಮಸ್ಯೆ, ಸಾಮಾಜಿಕ ಸಮಸ್ಯೆ, ಔದ್ಯೋಗಿಕ ಸಮಸ್ಯೆ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಆದರೆ ಇವುಗಳಿಗೆಲ್ಲಾ ಪರಿಹಾರ ಯೋಗದಲ್ಲಿದೆ.
ಯೋಗಕ್ಕೆ ಕ್ಲಪ್ತವಾದ ಸಮಯವನ್ನು ನೀಡಬೇಕು. ಆದರೆ ಹೇಗೆ? ಉದಾಸೀನ ಮಾಡುವವರಿಗೆ ಫಲವು ಸಿದ್ಧಿಸುವುದಿಲ್ಲ. ವಿಶ್ವಯೋಗದ ದಿನವೆಂದರೆ ಆ ದಿನಮಾತ್ರ ಯೋಗವನ್ನು ಮಾಡಿ ಸೆಲ್ಫಿಗಳನ್ನು ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಡುವುದಲ್ಲ. ಯೋಗವು ಕೇವಲ ಒಂದು ದಿನಕ್ಕಾಗಿ ಅಲ್ಲ. ಯಾವುದೋ ಸಿನಿಮಾ ನಟನೋ ಅಥವಾ ರಾಜಕೀಯ ವ್ಯಕ್ತಿಯೋ ಯೋಗವನ್ನು ಮಾಡುವ ಪೋಸ್ಟರ್ ನೋಡಿ, ನಾವು ಯೋಗ ಮಾಡಿದರೆ ನಗೆಪಾಟಲಾಗುತ್ತೇವೆ. ಅವರಂತೆ ನಮ್ಮ ಯೋಗವು ಕೂಡ ಒಂದೇ ದಿನಕ್ಕೆ ಸೀಮಿತವಾಗುತ್ತದೆ. ಯೋಗ ಮಾಡುವ ಪ್ರತಿಯೊಬ್ಬನೂ ಯೋಗದ ಮೇಲೆ ಆತ್ಮಗೌರವವನ್ನು ಹೊಂದಿರಬೇಕಾಗುತ್ತದೆ. ನಾನು ಮಾಡುವ ಯೋಗವು ನನಗೆ ಫಲ ಕೊಡುತ್ತದೋ ಇಲ್ಲವೋ, ಯೋಗ ಬೇಕೋ ಬೇಡವೋ ಎನ್ನುವ ಅನುಮಾನ ಇಟ್ಟುಕೊಳ್ಳಬಾರದು. ಯೋಗದಲ್ಲಿ ನಿರಂತರತೆ, ಕಠಿಣ ಪರಿಶ್ರಮ ಬಹಳ ಮುಖ್ಯ.
ಜಗತ್ತಿನ ಹಲವು ಕಾಯಿಲೆಗಳು ಮನುಷ್ಯನ ಮನಸ್ಸಿನ ಮೇಲೆ ಆದ ಆಘಾತದ ಪರಿಣಾಮದಿಂದ ಬರುತ್ತದೆ ಎಂದು ವಿಜ್ಞಾನ ಹೇಳುತ್ತದೆ. ಹಾಗಾಗಿ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಲು ಯೋಗವು ಸಹಾಯ ಮಾಡುತ್ತದೆ. ಯೋಗದಿಂದ ಕ್ರೂರ ಭಾವನೆ, ಸಿಟ್ಟು, ಅಹಂಕಾರ ಹಾಗೂ ಆತಂಕ ದೂರವಾಗಿ ಶಾಂತ ಭಾವನೆ ಬರುತ್ತದೆ. ಸಕಾರಾತ್ಮಕ ಮನೋಭಾವನೆ ಬೆಳೆಸಿ ಕೊಳ್ಳುವಂತೆ ಮಾಡುತ್ತದೆ.
‘ಯೋಗಃ ಕರ್ಮಸು ಕೌಶಲಂ’ ಯೋಗವೆಂದರೆ ಕೌಶಲವನ್ನು ವ್ಯಕ್ತಪಡಿಸುತ್ತದೆ. ‘ಸಮತ್ವಂ ಯೋಗಮುಚ್ಯತೇ’. ಯೋಗವು ಸಮಚಿತ್ತವನ್ನು ಪ್ರತಿಬಿಂಬಿತ್ತದೆ. ‘ಯುವಾ ವೃದ್ಧೋತಿ ವೃದ್ಧೋವಾ ವ್ಯಾಧಿತೋ ದುರ್ಬಲೋಪಿ ವಾ ಅಭ್ಯಾಸಾತ್ ಸಿದ್ಧಮಾಪ್ರೋತಿ’. ಯೋಗವನ್ನು ಯುವಕರು, ವೃದ್ಧರು, ವಯೋವೃದ್ಧರು, ರೋಗಿಗಳು, ದುರ್ಬಲರು ಅಭ್ಯಸಿಸಿದರೆ ಸಿದ್ಧಿಯನ್ನು ಪಡೆಯಬಹುದು. ‘ಆಸನಾನಿ ಸಮಸ್ತಾನಿ ಯಾವಂತು ಜೀವ ಜಂತವಃ’ ಎಂದು ಘೇರಂಡ ಸಂಹಿತೆಯಲ್ಲಿ ಬಿತ್ತರವಾಗಿದೆ.
ಒಟ್ಟು 84 ಮುಖ್ಯ ಆಸನಗಳಿವೆ. ಅದನ್ನು ರೂಪಾಂತರ ಮಾಡಿ 100 ಆಸನಗಳಾಗಿ ಅಭ್ಯಾಸ ಮಾಡುತ್ತಾರೆೆ. ಯೋಗಗಳನ್ನು ಹೂ, ಪ್ರಾಣಿ, ಪಕ್ಷಿ, ಋಷಿ, ಗಿಡ-ಮರ, ಸಸ್ತನಿ ಹೆಸರಿನಲ್ಲಿ ಗುರುತಿಸುತ್ತಾರೆ. ಪಥ್ಯಾಹಾರವನ್ನು ಯೋಗ ಮಾಡುವ ಮುಂಚೆಯೇ ಮಾಡಿದರೆ ಶರೀರದಲ್ಲಿ ಎಲ್ಲವೂ ಅಸ್ತವ್ಯಸ್ಥ ಆಗುತ್ತದೆ. ಯೋಗವೇ ನಮ್ಮ ಎಲ್ಲಾ ಅಸಹಜ ಪ್ರಾಕೃತಿಕ ಗುಣಗಳನ್ನು ನಿಯಂತ್ರಿಸುತ್ತದೆ. ಹಾಗಾಗಿ ಯೋಗವನ್ನು ಮಾಡಬೇಕೇ ಹೊರತು ತಕ್ಷಣಕ್ಕೆ ನಮ್ಮ ಎಲ್ಲಾ ಹವ್ಯಾಸವನ್ನು ನಿಯಂತ್ರಣ ಮಾಡಿ ಮಾನಸಿಕವಾಗಿ ಕುಗ್ಗುವುದಕ್ಕಿಂತ ಯೋಗವನ್ನು ಮಾಡುತ್ತಾ ಯೋಗದ ಪರಿಣಾಮವನ್ನು ಅರಿಯುತ್ತಾ ಮುಂದುವರಿಯುವುದು ಮುಖ್ಯ.
ಯೋಗ ಮಾಡಲು ಹೊರಟಾಗ ದೈಹಿಕ ಸಾಮರ್ಥ್ಯ ಮತ್ತು ನ್ಯೂನತೆಗಳು ತಿಳಿಯುತ್ತದೆ. ಹೆಚ್ಚು ನಡೆದರೆ ಉಬ್ಬಸ ಬರುವುದು, ಬಾಗಿದರೆ ದೇಹದ ಭಾಗಗಳು ನೋಯುವುದು, ನರ ಹಿಡಿಯು ವುದು, ಕೆಲವು ಆಸನ ಮಾಡಿದಾಗ ಕಣ್ಣು ಮಂಜಾಗುವುದು, ಕೈಕಾಲು ಕಂಪಿಸುವುದು ಹೀಗೆ ನಮ್ಮ ನ್ಯೂನತೆಗಳು ಯೋಗ ಮಾಡುವ ಪ್ರಾರಂಭದಲ್ಲಿಯೇ ನಮಗೆ ತಿಳಿಯುತ್ತದೆ. ಆಗ ನಮ್ಮ ಸಮಸ್ಯೆಯನ್ನು ಗುರುತಿಸಿಕೊಂಡು ಅದಕ್ಕೆ ಸಂಬಂಧ ಪಟ್ಟ ಆಸನವನ್ನು ಯೋಗ ಗುರುವಿನಿಂದ ತಿಳಿದು ಮುಂದುವ ರಿಸಬಹುದು. ನಮ್ಮ ಎಲ್ಲಾ ದೈಹಿಕ ಚಟುವಟಿಕೆಗೆ ಮುಖ್ಯ ಕಾರಣ ಮೆದುಳು. ಯೋಗದಿಂದ ಮೆದುಳಿನ ರಾಸಾಯನಿಕ ಸಂಯೋ ಜನೆ ಬದಲಾಗುತ್ತದೆ. ಆಟೋಟ, ಜಿಮ್, ಗರಡಿ ಮನೆ ಇತ್ಯಾದಿ ಚಟುವಟಿಕೆಗಳಿಗಿಂತ ಯೋಗವು ವಿಭಿನ್ನ ಸ್ಥಾನದಲ್ಲಿ ನಿಲ್ಲುತ್ತದೆ. ದೇಹಕ್ಕೆ ಹಲವು ಅವಸ್ಥೆಗಳಿವೆ. ದೇಹದ ರಚನೆ, ಬೆಳವಣಿಗೆ, ಕಾಯಿಲೆಗಳು ಬರುವ ವರ್ಷವು ಹುಟ್ಟುವಾಗಲೇ ನಿಗದಿ ಆಗಿರುತ್ತದೆ. ಅವನ್ನು ಮುಂದೆ ತಳ್ಳುವ ಶಕ್ತಿ ಯೋಗಕ್ಕಿರುತ್ತದೆ.
ಒತ್ತಾಯಪೂರ್ವಕ ಯೋಗವು ನಿರರ್ಥಕವಾದುದು.ಯೋಗವನ್ನು ಸ್ವಇಚ್ಛೆಯಿಂದ ಮಾಡಬೇಕು. ಇತ್ತೀಚೆಗೆ ಕೆಲವು ಒತ್ತಡದ ಕೆಲಸದ ನಡುವೆ ಕಂಪನಿಗಳಲ್ಲಿ ಉದ್ಯೋಗಿಗಳಿಗೆ ಯೋಗ ಮಾಡುವ ಪರಿಪಾಠವನ್ನು ಮಾಡಲಾಗುತ್ತಿದೆ. ಇದು ಎಷ್ಟು ಪ್ರಯೋಜನಕಾರಿಯಾದುದೆಂದು ಯೋಚಿಸಿ. ಯೋಗ ಮಾಡುವಾಗ ಮನಸ್ಥಿತಿ ಬಹಳ ಮುಖ್ಯ. ಯಾರದೋ ಒತ್ತಾಯಕ್ಕೆ ಯೋಗ ಮಾಡುವುದು ಪ್ರಯೋಜನಕಾರಿಯಲ್ಲ.
ಯೋಗ ಮಾಡಲು ಒಳ್ಳೆಯ ವಾತಾವರಣ ಬೇಕು. ನಿಶ್ಶಬ್ದ ಇಲ್ಲದಿದ್ದರೂ ಅದು ಕಿರಿಕಿರಿ ಉಂಟು ಮಾಡಬಾರದು. ಯೋಗ ಗುರುವಿನಲ್ಲಿ ಕಲಿತ ಯೋಗವನ್ನು ಕನ್ನಡಿ ಮುಂದೆ ಮಾಡಿ ಸರಿಪಡಿಸಿಕೊಳ್ಳಬೇಕು. ಯೋಗಕ್ಕೆ ಭಂಗ ಬರುವ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳಬಾರದು. ಮಾತನಾಡಬಾರದು. ಮನಸ್ಸಿಗೆ ಖುಷಿಯನ್ನು ಕೊಡುವ ಯೋಗ ಮತ್ತು ಪ್ರಾಣಾಯಾಮಗಳನ್ನು ಮಾತ್ರ ಮಾಡಿ. ಯೋಗದ ಮುಂಚೆ ಯೋಗಕ್ಕೆ ಸಂಬಂಧಪಟ್ಟ ಪ್ರಾರ್ಥನೆಯು ಸುಪ್ತ ಸ್ಥಿತಿಗೆ ಕರೆದೊಯ್ಯಲು ಸಹಕಾರಿ ಆಗಿರುತ್ತದೆ. ದಿನದಲ್ಲಿ ಬೆಳಿಗ್ಗೆ ಕನಿಷ್ಠವೆಂದರೆ ಖಾಲಿ ಹೊಟ್ಟೆಯಲ್ಲಿ ಸ್ಪಲ್ಪ ನೀರನ್ನು ಕುಡಿದು ಒಂದು ಗಂಟೆ ಮತ್ತೂ ಸಾಧ್ಯವಾದರೆ, ಸಂಜೆ ಖಾಲಿ ಹೊಟ್ಟೆಯಲ್ಲಿ ಒಂದು ಗಂಟೆ ಯೋಗ ಮಾಡಿದರೆ ಪರಿಣಾಮಕಾರಿಯಾಗುತ್ತದೆ.
ಯಾರು ಎಷ್ಟು ಯೋಗ ಮಾಡಬೇಕು? ಎನ್ನುವುದನ್ನು ನಾವು ಯೋಗ್ಯವಾದ ಯೋಗ ಗುರುಗಳಿಂದ ತಿಳಿದುಕೊಳ್ಳಬೇಕು. ಯೋಗ ಆರೋಗ್ಯಂ ಉಚ್ಛತೆಯೆನ್ನುವಂತೆ ಈ ಯೋಗ ವಿಜ್ಞಾನವನ್ನು ನಮ್ಮ ಜೀವನದಲ್ಲಿ ಅನುಸರಿಸಿ ಯೋಗ್ಯರಾಗಿ ಇರೋಣ.
∙ಮಂಜುನಾಥ.ಕೆ.ಎಸ್.