ಬೀದರ: ದೈಹಿಕ ಶ್ರಮದ ಕೊರತೆಯಿಂದಾಗಿ ಮನುಷ್ಯ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದು, ಇಂದು ಯೋಗ ಪದ್ಧತಿಯೂ ಜಾಗತಿಕ ಮಟ್ಟದಲ್ಲಿ ಪ್ರಾಶಸ್ತ್ಯ ಪಡೆಯುತ್ತಿದೆ ಎಂದು ಪತಂಜಲಿ ಯೋಗ ಸಮಿತಿ ರಾಜ್ಯಾಧ್ಯಕ್ಷ ಭವರಲಾಲ್ ಆರ್ಯ ಹೇಳಿದರು.
ನಗರದ ಕರ್ನಾಟಕ ಕಾಲೇಜಿನಲ್ಲಿ ದೈಹಿಕ ಶಿಕ್ಷಣ ವಿಭಾಗ ಆಯೋಜಿಸಿದ್ದ “ಆನಂದಮಯ ಜೀವನಕ್ಕಾಗಿ ಯೋಗ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಋಷಿ ಮುನಿಗಳಿಂದ ಉಡುಗೊರೆಯಾಗಿ ಬಂದಿರುವ ಯೋಗ ಶಿಕ್ಷಣವೂ ಇಂದು ದೇಶ- ವಿದೇಶಗಳಲ್ಲಿಗೂ ವ್ಯಾಪಿಸಿದೆ. ಯೋಗಾಸನ ಮಾಡಲು ಯಾವುದೇ ವಯಸ್ಸು- ಲಿಂಗಭೇದ ವಿಲ್ಲ. ದೇಹದ ಸರ್ವಾಂಗೀಣ ಆರೋಗ್ಯಕ್ಕೆ ಯೋಗ ಉತ್ತಮ ಕ್ರಿಯೆ. ಯೋಗದ ಮೂಲಕ ಜಗತ್ತೇ ಆರೋಗ್ಯಪೂರ್ಣವಾಗಿರಬೇಕು ಎಂಬುದಾಗಿದೆ. ವ್ಯಕ್ತಿ ತಾನು ಯಾವುದೇ ಕೆಲಸದಲ್ಲಿ ತೊಡಗಿಕೊಳ್ಳಬೇಕಾದರೆ ಹಾಗೂ ಅದರಲ್ಲಿ ಯಶಸ್ಸು ಕಾಣಬೇಕಾದರೆ ದೈಹಿಕ ಸಾಮರ್ಥ್ಯ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಉತ್ತಮ ಆರೋಗ್ಯ ಹೊಂದಲು ನಿತ್ಯ ಜೀವನದಲ್ಲಿ ಯೋಗ ಅಳವಡಿಸಿಕೊಳ್ಳಬೇಕು ಎಂದರು.
ಕೆಆರ್‌ಇ ಸಂಸ್ಥೆ ಕಾರ್ಯದರ್ಶಿ ಸಿದ್ದರಾಮ ಪಾರಾ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ವೇಳೆ ಸದಸ್ಯ ಸಿದ್ದು ಪಾಟೀಲ, ಉದ್ಯಮಿ ಜಗದೀಶ್ ಕೊಪ್ಪ, ಪ್ರಾಚಾರ್ಯ ಡಾ| ಮಲ್ಲಿಕಾರ್ಜುನ ಚಲುವಾ, ಉಪ ಪ್ರಾಂಶುಪಾಲ ಡಾ| ಮಲ್ಲಿಕಾರ್ಜುನ ಹಂಗರಗಿ ಸೇರಿದಂತೆ ಇತರರಿದ್ದರು.