ಕಲಬುರಗಿ: ರೋಗ ಮುಕ್ತ ಸಮಾಜಕ್ಕೆ ಯೋಗ ಅಗತ್ಯ ಎನ್ನುವ ಸಂದೇಶ ಸಾರುವ ಸದ್ಭಾವನಾ ನಡಿಗೆಯನ್ನು ರವಿವಾರ ನಗರದಲ್ಲಿ ಹಮ್ಮಿಕೊಳ್ಳಲಾಗಿತ್ತು. ಭಾಗವಹಿಸಿದ ಯುವಕರು, ವಿದ್ಯಾರ್ಥಿಗಳು ಉತ್ಸಾಹದಿಂದ ಜೈಘೋಷ್ ಕೂಗಿದರು.
ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಜಗತ್ ವೃತ್ತದಿಂದ ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದವರೆಗೆ ವಿವಿಧ ಸಂಘಟನೆಗಳು ಹಮ್ಮಿಕೊಂಡಿದ್ದ ಸದ್ಭಾವನಾ ನಡಿಗೆಗೆ ಹೆಚ್ಚುವರಿ ಎಸ್‌ಪಿ ಜಯಪ್ರಕಾಶ ಚಾಲನೆ ನೀಡಿದರು. ಬಿ.ಕೆ. ವಿಜಯಾ ಮಾತನಾಡಿ, ಭಾರತ ಮೂಲದ ಯೋಗಜ್ಞಾನ ಇಂದು ವಿಶ್ವದ 172 ರಾಷ್ಟ್ರಗಳಲ್ಲಿ ಅನುಸರಿಸಲಾಗುತ್ತಿದೆ.
ಇದು ಯೋಗಿಗಳ ಸಾಧನೆಯನ್ನು ಎತ್ತಿ ತೋರಿಸುತ್ತದೆ. ಇಂದಿನ ಒತ್ತಡದ ಜೀವನದಲ್ಲಿ ಯೋಗ, ಪ್ರಾಣಾಯಾಮ ಉತ್ತಮ ಆರೋಗ್ಯಕ್ಕೆ ಪೂರಕವಾಗಿವೆ ಎಂದರು. ಭಾರತ ಸ್ವಾಭಿಮಾನ ಟ್ರಸ್ಟ್ ಜಿಲ್ಲಾಧ್ಯಕ್ಷ ಶಿವಾನಂದ ಸಾಲಿಮಠ ಮಾತನಾಡಿ, 3ನೇ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸುತ್ತಿರುವ ಈ ಸಮಯದಲ್ಲಿ, ಮೊದಲೆರಡು ವರ್ಷ ಶರಣಬಸವೇಶ್ವರ ವಸತಿ ಶಾಲೆ ಮೈದಾನದಲ್ಲಿ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಿದ್ದು, ಇಡೀ ಕರ್ನಾಟಕದಲ್ಲಿ ಪ್ರಥಮ ಸ್ಥಾನ ಪಡೆದು ಹರಿದ್ವಾರದಲ್ಲಿ ವಿಶೇಷ ಸನ್ಮಾನ ಸಿಕ್ಕಿದೆ.
ಈ ಬಾರಿಯೂ ಕೂಡಾ ಎನ್.ವಿ.ಸಂಸ್ಥೆಯ ಮೈದಾನದಲ್ಲಿ ಜೂ.21 ರಂದು ನಡೆವ ಅಂತಾರಾಷ್ಟ್ರೀಯ ಯೋಗ ಶಿಬಿರದಲ್ಲಿ ನಗರದ ಜನತೆ ಹಾಗೂ ಎಲ್ಲಾ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಬೇಕು ಎಂದು ಮನವಿ ಮಾಡಿದರು. ಪತಂಜಲಿ ಯೋಗ ಸಮಿತಿ ಅಧ್ಯಕ್ಷ ಮಚೇಂದ್ರನಾಥ ಮುಲಗೆ, ಮಹಿಳಾ ಪ್ರಭಾರಿ ಸುಮಂಗಲಾ ಚಕ್ರವರ್ತಿ ಮಾತನಾಡಿದರು.
ಭಾರತ ಸ್ವಾಭಿಮಾನ ಟ್ರಸ್ಟ್ ಉಪಾಧ್ಯಕ್ಷ ಎಚ್. ಸುಭಾಷಚಂದ್ರ, ಬಸವರಾಜ ಕೊಳ್ಳೂರ, ಜಿ. ಚಂದ್ರಶೇಖರ, ಕೆ.ಆರ್. ಕುಲಕರ್ಣಿ, ಪ್ರಭು ಶೆಳ್ಳಗಿ, ಶಿವರಾಯ ನಾವದಗಿ, ಬಾಬುರಾವ ಜಾಧವ, ಹನುಮಾನಸಿಂಗ ಠಾಕೂರ, ಮಂಜುಳಾ ಗದ್ದುಗೆ, ಅನಿತಾ ಸುಬೇದಾರ, ಇಂದಿರಾ ರಾಠೊಡ, ಇಂದಿರಾ ಶಹಾಪೂರ, ಉಮೇಶ ಗೊಡಬೋಲೆ, ರಾಮಕೃಷ್ಣ, ಸುನೀತಾ ಠಾಕೂರ ಹಾಗೂ ಇತರರು ಭಾಗವಹಿಸಿದ್ದರು.