Advertisement

ಯೋಗ ನಾಯಕಿ ನಾಝಿಯಾ

06:46 PM Jul 16, 2019 | mahesh |

ಬಿಡದೆ ಕಾಡುತ್ತಿದ್ದ ತಲೆನೋವಿನಿಂದ ಪಾರಾಗಲು ನಾಝಿಯಾ ಯೋಗ ತರಗತಿಗೆ ಸೇರಿದರು. ಆನಂತರದಲ್ಲಿ ತಲೆನೋವಿನಿಂದ ಮುಕ್ತಿ ಪಡೆದಿದ್ದು ಮಾತ್ರವಲ್ಲ; ಯೋಗದ ಎಲ್ಲಾ ಪಟ್ಟುಗಳನ್ನೂ ಕಲಿತು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಯನ್ನೂ ಗೆದ್ದರು…

Advertisement

ಯೋಗ, ವಿಶ್ವಕ್ಕೆ ಭಾರತ ನೀಡಿದ ಬಹು ದೊಡ್ಡ ಕೊಡುಗೆ. ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ದಾರಿದೀಪವಾಗಿರುವ ಯೋಗವು, ಇತ್ತೀಚೆಗೆ ಜಾಗತಿಕ ಮನ್ನಣೆ ಪಡೆದಿರುವುದು ಭಾರತೀಯರಿಗೆ ಹೆಮ್ಮೆಯ ವಿಷಯ. ಆ ಹೆಮ್ಮೆಯ ಕಿರೀಟಕ್ಕೆ ಇನ್ನೊಂದು ಗರಿಯನ್ನು ಮುಡಿಸಿರುವುದು ಕನ್ನಡ ಮಣ್ಣಿನ ನಾಝಿಯಾ.

ಮೂಲತಃ ಉಡುಪಿ ಜಿಲ್ಲೆ, ಕಾರ್ಕಳ ತಾಲೂಕಿನ ನಿಟ್ಟೆಯ ಅಂಬಡೆಕಲ್ಲಿನವರಾದ ನಾಝಿಯಾ, ಯೋಗದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಿರುವ ಪ್ರತಿಭೆ. ಈಗಾಗಲೇ ಹಲವಾರು ಯೋಗ ಸ್ಪರ್ಧೆಗಳಲ್ಲಿ ಪ್ರಶಸ್ತಿ ಪಡೆದಿರುವ ಇವರಿಗೆ, ಈಗ ನಲವತ್ಮೂರು ವರ್ಷ! ಎರಡು ವರ್ಷಗಳ ಹಿಂದೆ ಗಂಡನನ್ನು ಕಳೆದುಕೊಂಡಿರುವ ನಾಝಿಯಾ, ಬಟ್ಟೆ ಹೊಲಿದು ಕುಟುಂಬ ನಿರ್ವಹಿಸುತ್ತಿದ್ದಾರೆ.

ರೋಗಕ್ಕೆ ಪರಿಹಾರ ಕೊಟ್ಟ ಯೋಗ
ನಾಝಿಯಾರನ್ನು ಯೋಗದತ್ತ ಕರೆದೊಯ್ದಿದ್ದು ಸದಾ ಅವರನ್ನು ಕಾಡುತ್ತಿದ್ದ ತಲೆನೋವು. ಪದೇ ಪದೆ ಕಾಣಿಸಿಕೊಂಡು ಜೀವ ಹಿಂಡುತ್ತಿದ್ದ ತಲೆನೋವಿಗೆ ಅವರು ಮಾಡದ ಮದ್ದಿಲ್ಲ, ನೋಡದ ವೈದ್ಯರಿಲ್ಲ. ನೋವಿಗೆ ಪರಿಹಾರ ಹುಡುಕುತ್ತಿದ್ದ ಅವರು, ನಿಟ್ಟೆಯ ಮಹಿಳಾ ಸಮಾಜ ನಡೆಸಿದ ಹತ್ತು ದಿನಗಳ ಯೋಗ ಶಿಬಿರಕ್ಕೂ ಸೇರಿದರು. ತಲೆನೋವಿಗೆ ಏನು ಕಾರಣವಿತ್ತೋ ಗೊತ್ತಿಲ್ಲ. ಆದರೆ, ಹತ್ತೇ ದಿನದಲ್ಲಿ ಇವರ ತಲೆನೋವು ವಾಸಿಯಾಯಿತು. ಸ್ವತಃ ನಾಝಿಯಾಗೂ ಅಚ್ಚರಿಯಾಯ್ತು. ಯೋಗ ಕಲಿಯುವ ಆಸಕ್ತಿಯೂ ಮೂಡಿತು. ಶಿಬಿರದಲ್ಲಿ ಯೋಗ ಕಲಿಸಿದ ಗುರು ನರೇಂದ್ರ ಕಾಮತ್‌ ಅವರನ್ನು ಮತ್ತೆ ಭೇಟಿಯಾದ ನಾಝಿಯಾ, ಅವರಿಂದ ಹೆಚ್ಚಿನ ಯೋಗಾಸನಗಳನ್ನು ಕಲಿತರು. ನಿತ್ಯವೂ ತಪ್ಪದೇ ಯೋಗಾಭ್ಯಾಸ ಪ್ರಾರಂಭಿಸಿದರು. ಕಾರ್ಕಳಕ್ಕೆ ಹೋಗಿ ಮತ್ತಷ್ಟು ಕಲಿತ ನಾಝಿಯಾ, ತಾವು ಕಲಿತದ್ದನ್ನು ಇತರರಿಗೆ ಕಲಿಸಲು ಮುಂದಾದರು.

ಯೋಗ ಸಾಧನೆ
ತಮ್ಮ ವಯಸ್ಸು, ಸಾಮಾಜಿಕ ಮತ್ತು ಆರ್ಥಿಕ ಅಡೆತಡೆಗಳನ್ನು ಮೆಟ್ಟಿ ನಿಂತ ನಾಝಿಯಾರ ಯೋಗದ ಕನಸು ದಿನದಿನಕ್ಕೂ ಹೆಚ್ಚತೊಡಗಿತು. ಪ್ರತಿದಿನ ಬೆಳಗ್ಗೆ ನಿಟ್ಟೆಯ ರೋಟರಿ ಭವನದಲ್ಲಿ ಆಸಕ್ತರಿಗೆ ಯೋಗ ಕಲಿಸಿ, ನಂತರ ಮನೆಗೆಲಸ, ಬಟ್ಟೆ ಹೊಲಿಗೆ ಕೆಲಸ ಮಾಡುತ್ತಲೇ, ಯೋಗದಲ್ಲಿ ಏನಾದರೂ ಸಾಧಿಸಬೇಕೆಂದು ಕನಸು ಕಾಣತೊಡಗಿದರು. ಇಂಥ ಸಮಯದಲ್ಲೇ, ಯೋಗ ಸ್ಪರ್ಧೆಗಳಲ್ಲಿ ಭಾಗವಹಿಸುವಂತೆ ಧೈರ್ಯ ತುಂಬಿದವರು ಗುರುಗಳಾದ ನರೇಂದ್ರ ಕಾಮತ್‌. 2017ರಲ್ಲಿ ಬೆಂಗಳೂರಿನಲ್ಲಿ ನಡೆದ, 40-45 ವಯಸ್ಸಿನ ಮಹಿಳೆಯರ ರಾಷ್ಟ್ರಮಟ್ಟದ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದ ನಾಝಿಯಾ, ಮಲೇಷ್ಯಾದಲ್ಲಿ ನಡೆಯಲಿದ್ದ ಅಂತಾರಾಷ್ಟ್ರೀಯ ಯೋಗ ಸ್ಪರ್ಧೆಗೆ ಆಯ್ಕೆಯಾದರು.

Advertisement

ಹಣ ಹೊಂದಿಸಲಾಗಲಿಲ್ಲ
ವಿದೇಶ ಪ್ರಯಾಣದ ಖರ್ಚು ವೆಚ್ಚ ನಿಭಾಯಿಸುವ ಶಕ್ತಿ ನಾಝಿಯಾಗೆ ಇರಲಿಲ್ಲ. ಸ್ವಾಭಿಮಾನಿಯಾದ ಆಕೆ ಯಾರ ನೆರವನ್ನೂ ಪಡೆಯಲಿಲ್ಲ. ಅಲ್ಲದೆ, ಮಕ್ಕಳ ಶೈಕ್ಷಣಿಕ ಸಾಲದ ಹೊರೆಯೂ ಇದ್ದುದರಿಂದ, ಮಲೇಷ್ಯಾದ ಕನಸನ್ನು ಮರೆತುಬಿಟ್ಟರು.

2018ರಲ್ಲಿ ಬೆಂಗಳೂರಿನಲ್ಲಿ ನಡೆದ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಮತ್ತೆ ಭಾಗವಹಿಸಿ, ಥಾಯ್ಲೆಂಡ್‌ನ‌ಲ್ಲಿ ನಡೆಯುವ ಅಂತರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆಯಾದರು. ಈ ಬಾರಿ ಅವರಿಗೆ ಅನೇಕ ಸಹೃದಯರು ನೆರವಾದರು.

ಉಪನ್ಯಾಸಕ ಮಂಜುನಾಥ ಕಾಮತ್‌ರ ಮೂಲಕ, ಕಲ್ಯಾಣಪುರದ ರೋಟರಿ ಸಂಸ್ಥೆ ಹಾಗೂ ಇತರ ಸಹೃದಯರ ನೆರವಿನಿಂದ ಹಣ ಸಂಗ್ರಹಿಸಿ ಥಾಯ್ಲೆಂಡ್‌ಗೆ ಪ್ರಯಾಣ ಬೆಳೆಸಿದರು. ಎಸ್‌.ಜಿ.ಎಸ್‌. ಇಂಟರ್‌ನ್ಯಾಷನಲ್‌ ಯೋಗ ಫೌಂಡೇಷನ್‌ ನಡೆಸಿದ ಯೋಗ ಸ್ಪರ್ಧೆಯ ಮೂರು ವಿಭಾಗಗಳಲ್ಲಿ ಮೂರು ಪ್ರಶಸ್ತಿ ಪಡೆಯುವ ಮೂಲಕ, ಭಾರತದ ಕೀರ್ತಿಯನ್ನು ಎತ್ತಿ ಹಿಡಿದರು. ಭಾರತದ ಮುಸ್ಲಿಂ ಮಹಿಳೆಯೊಬ್ಬಳ ಸಾಧನೆ ಹಲವರ ಮೆಚ್ಚುಗೆಗೆ ಪಾತ್ರವಾಯ್ತು.

ನಾಝಿಯಾರ ಜೀವನ ಪ್ರೀತಿ ಎಲ್ಲರಿಗೂ ಮಾದರಿಯಾಗಲಿ. ನಾಝಿಯಾರ ಸಾಧನೆಯನ್ನು ಅಭಿನಂದಿಸಲು, ಅವರಿಂದ ಯೋಗದ ಮಾಹಿತಿ ಪಡೆಯಲು 9035587346 ಮೂಲಕ ಅವರನ್ನು ಸಂಪರ್ಕಿಸಬಹುದು.

“ಯೋಗ ನನಗೆ ಮರುಜನ್ಮವನ್ನೇ ನೀಡಿದೆ. ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು. ಯೋಗದಲ್ಲಿಯೇ ಮುಂದುವರಿಯಬೇಕೆಂಬ ಛಲ ಮೂಡಿದೆ’
-ನಾಝಿಯಾ

ನಾಲ್ವರು ಮಕ್ಕಳಲ್ಲಿ ಒಬ್ಬ ಫೋಟೊಗ್ರಫಿ ಮಾಡುತ್ತಿದ್ದು, ಉಳಿದವರು ಬಿ.ಕಾಂ, ನರ್ಸಿಂಗ್‌ ಹಾಗೂ ಪಿಯುಸಿ ಓದುತ್ತಿದ್ದಾರೆ. ನಾಝಿಯಾ ಏಳನೆಯ ತರಗತಿಯವರೆಗೆ ಮಾತ್ರ ಓದಿದ್ದು, ಕಳೆದ ಹತ್ತು ವರ್ಷಗಳಿಂದ ಬಟ್ಟೆ ಹೊಲಿದು ಮಕ್ಕಳನ್ನು ಸಾಕುತ್ತಿದ್ದಾರೆ. ಬಡತನದ ಮಧ್ಯೆಯೂ ಅವರು ಮಾಡಿರುವ ಸಾಧನೆ ಶ್ಲಾಘನೀಯ.

-ಸುರೇಶ ಗುದಗನವರ

Advertisement

Udayavani is now on Telegram. Click here to join our channel and stay updated with the latest news.

Next