Advertisement
ದಿನಂಪ್ರತಿ ಮನೆಯೊಳಗೆ ಬಂಧಿಯಾಗಿ ಲಾಕ್‌ಡೌನ್‌ನಂತಹ ಸುರಕ್ಷ ನಿಯಮಗಳನ್ನು ಪಾಲಿಸುವಲ್ಲಿ ಬಹಳ ತಾಳ್ಮೆ, ದೃಢ ಮನಸ್ಸು ಹಾಗೂ ಶ್ರದ್ಧೆ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ದಿನಂಪ್ರತಿ ಮಾಡುವ ಯೋಗದ ಅನುಷ್ಠಾನ ನಮ್ಮ ದೇಹ, ಮನಸ್ಸು ಹಾಗೂ ಭಾವನೆಗಳನ್ನು ಆರೋಗ್ಯವಾಗಿರಿಸಿ ವಿಶ್ರಾಂತಿ, ರೋಗ ನಿರೋಧಕ ಶಕ್ತಿ, ಏಕಾಗ್ರತೆ, ಸ್ಮರಣ ಶಕ್ತಿಯನ್ನು ಹೆಚ್ಚಿಸುತ್ತದೆ. ಮಾತ್ರವಲ್ಲದೇ ನಮ್ಮ ವರ್ತನೆಗಳನ್ನು ಸಕಾರಾತ್ಮಕ ಮನೋಭಾವದಿಂದ ರಕ್ಷಿಸಿಕೊಳ್ಳಲು ಸಹಾಯ ಮಾಡುತ್ತದೆ.
ಕ್ರಮಬದ್ಧವಾಗಿ ಸರಳ ಆಸನಗಳನ್ನು ಉಸಿರಾಟದ ಜತೆ ಸೇರಿಸಿ ನಿಧಾನವಾಗಿ ಏಕಾಗ್ರತೆಯಿಂದ ಪ್ರತೀ ನಿತ್ಯ ಬೆಳಗ್ಗೆ ಪ್ರಥಮ ಅವಧಿಯಲ್ಲಿ ಕನಿಷ್ಠ 30 ನಿಮಿಷ ಅಭ್ಯಾಸ ಮಾಡುವುದು ಬಹಳಷ್ಟು ಪರಿಣಾಮಕಾರಿಯಾಗಿದೆ. ದೇಹದ ಜಡತ್ವವನ್ನು ದೂರಗೊಳಿಸುವಲ್ಲಿ ಶೀತಲೀ ಪ್ರಾಣಾಯಾಮ ನಮ್ಮ ಎಲ್ಲ ಸ್ನಾಯು ಸಮೂಹ ಹಾಗೂ ಕೀಲುಗಳಿಗೆ ಅತ್ಯುತ್ತಮ. ಅನಂತರ ಅರ್ಧಚಕ್ರಾಸನ, ಉತಿ§ತ ಪಾದಾಸನ, ಪವನ ಮುಕ್ತಾಸನ, ಭುಜಂಗಾಸನ, ವಕ್ರಾಸನ, ಅರ್ಧಘಟಿಚಕ್ರಾಸನ, ಅಧೋಮುಖ ಶ್ವಾನಾಸನ ಮೊದಲಾದ ಆಸನಗಳು ದೇಹದ ಎಲ್ಲ ಅಂಗಾಂಗಗಳ ನೋವು ನಿರ್ವಹಣೆಗೆ ಸಹಕಾರಿಯಾಗಿದೆ. ಇವುಗಳೊಂದಿಗೆ ಸರಳ ವಿಶ್ರಾಂತಿ ಕ್ರಿಯೆ ಅಭ್ಯಾಸ, ಭ್ರಾಮರಿ ಪ್ರಾಣಾಯಾಮ, ಓಂಕಾರ ಧ್ಯಾನ ಬಹಳ ಉತ್ತಮ.
Related Articles
Advertisement
ಈ ಎಲ್ಲ ಯೋಗ ಜೀವನ ಕಲೆಯನ್ನು ಅನುಸರಿಸಿ ದರೆ ನಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದರ ಜತೆಗೆ ಮಾನಸಿಕ ಹಾಗೂ ಭಾವನಾತ್ಮಕ ಆರೋಗ್ಯವೂ ಉತ್ತಮಗೊಳ್ಳುವುದು. ಇದರಿಂದ ನಮ್ಮ ಆರೋಗ್ಯವನ್ನು ನಾವು ರಕ್ಷಿಸಿಕೊಳ್ಳಬಹುದು.
ಆರೋಗ್ಯ ರಕ್ಷಣ ಸೂತ್ರಗಳನ್ನು ಪಾಲಿಸೋಣ
ದೈಹಿಕ, ಮಾನಸಿಕ, ಭಾವನಾತ್ಮಕ, ಸಾಮಾಜಿಕ ಹಾಗೂ ಆಧ್ಯಾತ್ಮಿಕ ಎಲ್ಲ ಸ್ತರಗಳ ಸಮತೋಲನವೇ ಪರಿಪೂರ್ಣ ಆರೋಗ್ಯದ ಲಕ್ಷಣ. ಆರೋಗ್ಯವೇ ದೊಡ್ಡ ಸಂಪತ್ತು. ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಎನ್ನುವುದನ್ನು ನಾವು ಎಂದಿಗೂ ಮರೆಯಬಾರದು. ಈ ನಿಟ್ಟಿನಲ್ಲಿ ನಮ್ಮ ದೈನಂದಿನ ದಿನಚರಿಯಲ್ಲಿ ಆರೋಗ್ಯ ರಕ್ಷಣ ಸೂತ್ರಗಳನ್ನು ಮರೆಯದೆ ಪಾಲಿಸಬೇಕಿದೆ.– ಬೆಳಗ್ಗೆ 30 ನಿಮಿಷ ಸರಳ ಯೋಗಾಭ್ಯಾಸ, ಸಂಜೆ 30 ನಿಮಿಷ ನಡಿಗೆ. – ಸಮಯಕ್ಕೆ ಸರಿಯಾಗಿ ಸರಳ, ಸಾತ್ವಿಕ, ಪೌಷ್ಟಿಕಾಂಶಯುಕ್ತ ಆಹಾರ ಸೇವನೆ – ರಾತ್ರಿ 6-7 ಗಂಟೆ ನಿದ್ರೆ – ದಿನದಲ್ಲಿ 2.5 ಲೀಟರ್ ನೀರು ಸೇವನೆ – ಒಂದು ಗಂಟೆಗಿಂತ ಹೆಚ್ಚು ಹೊತ್ತು ನಿರಂತರ ಕುಳಿತುಕೊಳ್ಳದೇ ಇರುವುದು. – ಗಂಟೆಗೊಮ್ಮೆ 5 ನಿಮಿಷಗಳ ನಡಿಗೆ – ಅನಗತ್ಯ ಚಿಂತೆ, ಭಯ, ಆತಂಕ, ಉದ್ವೇಗ, ಕೋಪ ಮಾಡಿಕೊಳ್ಳದೇ ಇರುವುದು. – ರಾತ್ರಿ ಮಲಗುವ ಮುಂಚೆ 10 ನಿಮಿಷ ಯಾವುದಾದರೂ ಸತ್‌ಗಥ ಪಠನ – ಮನಸ್ಸಿನ ಶಾಂತಿ, ಸಮಾಧಾನ, ನೆಮ್ಮದಿಗಾಗಿ ಪ್ರಾರ್ಥನೆ, ಧ್ಯಾನ ಇವುಗಳ ಅನುಷ್ಠಾನ – ಹೆಚ್ಚು ಎಣ್ಣೆಯಲ್ಲಿ ಕರಿದ, ಮಸಾಲೆ, ಸಿಹಿ ಹಾಗೂ ಜಂಕ್‌ಫುಡ್‌ಗಳ ಸೇವನೆಯಲ್ಲಿ ನಿಯಂತ್ರಣ. – ಕಾಫಿ, ಟೀ, ಮದ್ಯಪಾನ, ಧೂಮಪಾನ ಮಾಡದೇ ಇರುವುದು. – ಡಾ| ವಿವೇಕ್ ಉಡುಪ,
ಸಿಇಒ, ವೈದ್ಯಕೀಯ ನಿರ್ದೇಶಕರು, ಸರ್ವಕ್ಷೇಮ ಆಸ್ಪತ್ರೆ, ಸಂಶೋಧನ ಪ್ರತಿಷ್ಠಾನ, ಯೋಗಬನ, ಮೂಡುಗಿಳಿಯಾರು, ಕೋಟ