ಬೀದರ: ವೈಜ್ಞಾನಿಕ ರೀತಿಯಲ್ಲಿ ಯೋಗ ಮಾಡುವುದರಿಂದ ಜೀವನದಲ್ಲಿ ಬದಲಾವಣೆ ಕಾಣಲು ಸಾಧ್ಯ. ಈ ದಿಶೆಯಲ್ಲಿ ಜನತೆಗೆ ಉತ್ತಮ ಸಂದೇಶ ಹೋಗುವಂತೆ, ಪ್ರತಿಯೊಬ್ಬರಿಗೆ ಸ್ಫೂರ್ತಿ ದೊರೆಯುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಸಂಘಟಿಸಬೇಕು ಎಂದು ಜಿಲ್ಲಾ ಧಿಕಾರಿ ಅನಿರುದ್ಧ ಶ್ರವಣ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜೂ. 21ರಂದು ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ಅಗತ್ಯ ಸಿದ್ಧತೆ ಕೈಗೊಳ್ಳಬೇಕೆಂದು ಸೂಚಿಸಿದರು.
ಈ ಬಾರಿ ನಗರದ ನಾನಾ ಕಡೆಗಳಲ್ಲಿ ಸಾಮೂಹಿಕ ಯೋಗ ಕಾರ್ಯಕ್ರಮ ನಡೆಸುವ ದಿಶೆಯಲ್ಲಿ ನಗರದ ಮೂರ್‍ನಾಲ್ಕು ಕಡೆಗಳಲ್ಲಿ ಸ್ಥಳ ಗುರುತಿಸುವಂತೆ ಆಯುಷ್ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಪೌರ ಕಾರ್ಮಿಕರಿಗೂ ಯೋಗಾಭ್ಯಾಸದ ವ್ಯವಸ್ಥೆ ಮಾಡಲು ಪೌರಾಯುಕ್ತರಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳುವಂತೆ ವ್ಯವಸ್ಥೆ ಮಾಡಲು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ
ನಿರ್ದೇಶನ ನೀಡಿದರು.
ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ಮುಖ್ಯಸ್ಥರಾದ ಪ್ರತಿಮಾ ಸಹೋದರಿ, ಪ್ರಮುಖರಾದ ಶಕುಂತಲಾ ವಾಲಿ, ನಗರಸಭೆ ಪೌರಾಯುಕ್ತರಾದ ಮನೋಹರ ಎಸ್., ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಉಮೇಶ ಶಿರಹಟ್ಟಿಮಠ, ಮಲ್ಲಿಕಾರ್ಜುನ ಎಸ್., ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿ ರಾಜಶೇಖರ ಒಟಗೆ, ವಾರ್ತಾ ಇಲಾಖೆಯ ಅಧಿಕಾರಿ ಗವಿಸಿದ್ದಪ್ಪ ಹೊಸಮನಿ, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.