ಕಾರಟಗಿ: ಕರ್ನಾಟಕ ಪಬ್ಲಿಕ್ ಶಾಲಾ ಆವರಣದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ತ ಪತಂಜಲಿ ಯೋಗ ಸಮಿತಿಯಿಂದ ನಡೆದ ಯೋಗ, ಪ್ರಾಣಾಯಾಮ ಶಿಬಿರ ಮಂಗಳವಾರ ಸಮಾರೋಪಗೊಂಡಿತು.
ಶಿಬಿರಾರ್ಥಿಗಳು ಹಾಗೂ “ಹೆಜ್ಜೆ’ ಮಹಿಳಾ ಸಂಘದಿಂದ ಪತಂಜಲಿ ಜಿಲ್ಲಾ ಪ್ರಭಾರಿ ಸಿ.ಎಚ್. ಶರಣಪ್ಪ, ಮಹಿಳಾ ಜಿಲ್ಲಾ ಪ್ರಭಾರಿ ಮೀನಾಕ್ಷಿ ಶರಣಪ್ಪ, ತಾಲೂಕು ಪ್ರಭಾರಿ ಪ್ರಸಾದ ಚಿಟ್ಟೂರಿ ಹಾಗೂ ವೆಂಕಟೇಶ ಕೆಂಚನಗುಡ್ಡ ಅವರಿಗೆ ಸನ್ಮಾನ ಮಾಡಲಾಯಿತು.
ನಂತರ “ಹೆಜ್ಜೆ’ ಮಹಿಳಾ ಸಂಘದ ಅಧ್ಯಕ್ಷೆ ಡಾ| ಶಿಲ್ಪಾ ಆನಂದ ದಿವಟರ್ ಮಾತನಾಡಿ, ಯೋಗ ಕೇವಲ ವ್ಯಾಯಾಮ ಅಲ್ಲ ದೇಹ ಮತ್ತು ಮನಸ್ಸು ಒಂದು ಮಾಡುವ ಸಾಧನವಾಗಿದೆ. ಯೋಗಾಭ್ಯಾಸವು ನಮ್ಮ ದೈನಂದಿನ ಚಟುವಟಿಕೆಯ ಒಂದು ಅವಿಭಾಜ್ಯ ಅಂಗವಾಗಬೇಕು. ಅನೇಕ ಒತ್ತಡಗಳ ಮಧ್ಯೆ ಜೀವನ ಸಾಗಿಸುವ ಇಂದಿನ ಸಂದರ್ಭದಲ್ಲಿ ಪ್ರತಿದಿನ ಯೋಗಾಭ್ಯಾಸಕ್ಕಾಗಿ ಸಮಯ ಮೀಸಲಿಟ್ಟು ದೈಹಿಕ, ಮಾನಸಿಕ ಒತ್ತಡದಿಂದ ನಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.
ಜಿಲ್ಲಾ ಪ್ರಭಾರಿ ಸಿ.ಎಚ್. ಶರಣಪ್ಪ ಮಾತನಾಡಿ, ಮನಸ್ಸು ಮತ್ತು ದೇಹವನ್ನು ಶುದ್ಧವಾಗಿಡುವ ಶಕ್ತಿ ಯೋಗಕ್ಕಿದೆ. ಹಾಗಾಗಿ ಪ್ರತಿಯೊಬ್ಬರು ದಿನಕ್ಕೆ ಕನಿಷ್ಟ ಅರ್ಧ ಗಂಟೆಯಾದರೂ ಯೋಗ ಮಾಡಿ ಕಾಯಿಲೆ ದೂರಮಾಡಿಕೊಳ್ಳಿ ಎಂದು ವಿನಂತಿಸಿದರು. ಯೋಗ, ಧ್ಯಾನ, ಪ್ರಾಣಾಯಾಮ ಮಾಡುವುದರಿಂದ ಮನುಷ್ಯನ ಸರ್ವತೋಮುಖ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವು ಕೂಡ ಹೆಚ್ಚಾಗುತ್ತದೆ ಎಂದರು.
ಪತಂಜಲಿ ಮಹಿಳಾ ತಾಲೂಕು ಪ್ರಭಾರಿ ಉಮಾಚಂದ್ರಮೌಳಿ, ಶಿಬಿರಾರ್ಥಿಗಳಾದ ಪರುಶುರಾಮ ದಾರಿಮನಿ, ರಾಮ್‌ಬಾಬು, ಆಶೋಕ ಚಿನಿವಾಲ, ಚಂದ್ರಕಾಂತ ಸಜ್ಜನ್, ಜಿ. ಬಸವರಾಜ, ಪ್ರಶಾಂತ ಹಿರೇಮಠ, ವಿನೋದ ಚಿನಿವಾಲ, ಗೋಪಾಲ, ಗುರುರಾಜ, ಶಿವರಾಜ ನಾಗನಕಲ್, ಶೀಲಾ ಮಿಸ್ಕಿನ್, ಗೌರಿ ಚಿನಿವಾಲ, ತ್ರಿಪೂರ್ಣಪ್ರಸಾದ ಚಿಟ್ಟೂರಿ, ಸುಮಲತ, ರೂಪಾ ಸುಂಕದ, ನಾಗೇಶ್ವರಿ “ಹೆಜ್ಜೆ’ ಮಹಿಳಾ ಸಂಘದ ಹರ್ಷಿತ ಭಂಡಾರಿ ಸೇರಿದಂತೆ ಇತ್ತರಿದ್ದರು.
ಸಮಾರೋಪದ ಕಾರ್ಯಕ್ರಮವನ್ನು ಶಿಬಿರಾರ್ಥಿ ಸುಮಾ ಹಿರೇಮಠ, ಶಿಕ್ಷಕಿ ಮಂಜುಳ, ರಾಘವೇಂದ್ರ ನಿರ್ವಹಿಸಿದರು.