ಧಾರವಾಡ: ಜಿಲ್ಲಾಡಳಿತ, ಜಿಲ್ಲಾ ಆಯುಷ್ ಇಲಾಖೆ ಹಾಗೂ ವಿವಿಧ ಯೋಗ ಸಂಸ್ಥೆಗಳ ಸಹಯೋಗದಲ್ಲಿ ಜೂ.21ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ಜಿಲ್ಲೆಯ ಹುಬ್ಬಳ್ಳಿ, ಧಾರವಾಡ ಹಾಗೂ ಅಣ್ಣಿಗೇರಿಯಲ್ಲಿ ಪ್ರತ್ಯೇಕವಾಗಿ ಆಯೋಜಿಸಲಾಗುತ್ತಿದೆ. ಜಿಲ್ಲೆಯ ಎಲ್ಲ ಯೋಗಾಸಕ್ತರು ವಯೋಭೇದವಿಲ್ಲದೇ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಹೇಳಿದರು.
ಡಿಸಿ ಕಚೇರಿ ಸಭಾಂಗಣದಲ್ಲಿ 8ನೇ ಅಂತಾರಾಷ್ಟ್ರೀಯ ಯೋಗ ದಿನ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಆಯುಷ್ ಇಲಾಖೆ ಮಾರ್ಗಸೂಚಿಗಳ ಪ್ರಕಾರ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಜಿಲ್ಲೆಯಲ್ಲಿ ಐತಿಹಾಸಿಕ ಮತ್ತು ಪಾರಂಪರಿಕ ಹಿನ್ನೆಲೆ ಹೊಂದಿರುವ ಮೂರು ಸ್ಥಳಗಳನ್ನು ಗುರುತಿಸಲಾಗಿದೆ. ಧಾರವಾಡದ ಮುರುಘಾಮಠ, ಹುಬ್ಬಳ್ಳಿಯ ಸಿದ್ಧಾರೂಢ ಮಠ ಹಾಗೂ ಅಣ್ಣಿಗೇರಿಯ ಐತಿಹಾಸಿಕ ಅಮೃತೇಶ್ವರ ದೇವಸ್ಥಾನ ಆವರಣಗಳಲ್ಲಿ ಜೂ.21ರಂದು ಯೋಗ ದಿನಾಚರಣೆ ಆಯೋಜಿಸಲಾಗಿದೆ.
ಅಂದು ಬೆಳಗ್ಗೆ 6:45 ಗಂಟೆಗೆ ಉದ್ಘಾಟನಾ ಸಮಾರಂಭ, ಬೆಳಗ್ಗೆ 7ರಿಂದ 8 ಗಂಟೆವರೆಗೆ ಯೋಗಾಭ್ಯಾಸ ನಡೆಯಲಿವೆ. ಈ ಬಾರಿ “ಮಾನವೀಯತೆಗಾಗಿ ಯೋಗ’ ಧ್ಯೇಯವಾಕ್ಯದೊಂದಿಗೆ ಯೋಗ ದಿನ ಆಚರಿಸಲಾಗುತ್ತಿದೆ ಎಂದರು.
ಸ್ಕೌಟ್ಸ್, ಗೈಡ್ಸ್ ಸ್ವಯಂಸೇವಕರು, ಶಾಲೆ-ಕಾಲೇಜು ಹಾಗೂ ಹಾಸ್ಟೆಲ್ ವಿದ್ಯಾರ್ಥಿಗಳು, ಪೊಲೀಸ್ ಸಿಬ್ಬಂದಿ, ಜಿಲ್ಲೆಯ ಎಲ್ಲ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿ, ಸಿಬ್ಬಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ತಿಳಿಸಲಾಗಿದೆ.
ಜಿಲ್ಲೆಯ ವಿವಿಧ ಯೋಗ ಸಂಸ್ಥೆಗಳ ಪದಾ ಧಿಕಾರಿಗಳು, ಯೋಗಾಭ್ಯಾಸಿಗಳು, ಯೋಗಾಸಕ್ತರು ಪಾಲ್ಗೊಳ್ಳಬೇಕು ಎಂದು ಕೋರಿದರು. ಸಂಜೀವಕುಮಾರ ಹಡಗಲಿ, ಜಗದೀಶ ಮಳಗಿ ಮತ್ತಿತರರು ಮಾತನಾಡಿದರು. ಜಿಲ್ಲಾ ಆಯುಷ್ ಅಧಿಕಾರಿ ಡಾ| ಮೀನಾಕ್ಷಿ ಅವಲೂರು ಇದ್ದರು.