Advertisement

ಯೋಗ ಬದುಕಿನ ಸುಯೋಗವಾಗಲಿ

02:10 PM Jun 19, 2019 | Team Udayavani |

ಧಾರವಾಡ: ಯೋಗ ಎಂದರೆ ಬರೀ ಆಸನಗಳನ್ನು ಮಾಡುವುದಲ್ಲ, ಬದುಕನ್ನು ಸಾತ್ವಿಕವಾಗಿ ಮತ್ತು ಶ್ರೇಷ್ಠತೆಯೊಂದಿಗೆ ಜೀವಿಸುವುದಾಗಿದೆ ಎಂದು ದೇವರಹುಬ್ಬಳ್ಳಿಯ ಸಿದ್ಧಾಶ್ರಮದ ಶ್ರೀ ಸಿದ್ಧಶಿವಯೋಗಿ ಸ್ವಾಮೀಜಿ ಹೇಳಿದರು.

Advertisement

ವಿಶ್ವ ಯೋಗ ದಿನಾಚರಣೆ ಅಂಗವಾಗಿ ಸಿದ್ಧಾಶ್ರಮದಲ್ಲಿ ಹಮ್ಮಿಕೊಂಡಿರುವ ಯೋಗಾಭ್ಯಾಸ ಶಿಬಿರದಲ್ಲಿ ಅವರು ಮಾತನಾಡಿದರು. ಯೋಗ ಎಂದರೆ ಎಲ್ಲರೂ ಬರೀ ಆಸನಗಳನ್ನು ಹಾಕುವುದು ಎಂದು ತಿಳಿಸಿದ್ದಾರೆ. ಆದರೆ ಇದರಲ್ಲಿ ಎಂಟು ವಿಧಾನಗಳಿದ್ದು, ಅವುಗಳಲ್ಲಿ ಆಸನಗಳು ಮೂರನೇ ಕ್ರಮವಾಗಿದೆ. ಈ ಎಂಟು ವಿಧಾನಗಳನ್ನು ಸರಿಯಾಗಿ ಅಳವಡಿಸಿಕೊಂಡಾಗ ಮಾತ್ರ ಪರಿಪೂರ್ಣ ಯೋಗ ಸಿದ್ಧಿ ಸಾಧ್ಯವಿದೆ. ಆದರೆ ಇಂದಿನ ದಿನಗಳಲ್ಲಿ ಬರೀ ಆಸನಗಳಿಗೆ ಎಲ್ಲರೂ ಮಹತ್ವ ಕೊಟ್ಟು ಉಳಿದ ಯೋಗತ್ವದ ಅಂಶಗಳನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದರು.

ಇಡೀ ಮನುಕುಲದ ಉದ್ಧಾರಕ್ಕಾಗಿ ಪತಂಜಲಿ ಮಹರ್ಷಿಗಳು ಸೇರಿ ಋಷಿ ಮುನಿಗಳು ಯೋಗವನ್ನು ಈ ಪ್ರಪಂಚಕ್ಕೆ ಕೊಡುಗೆಯಾಗಿ ನೀಡಿದರು. ಆದರೆ ಇಂದಿನ ದಿನಗಳಲ್ಲಿ ಯುವಕರು ಇದನ್ನು ಬಳಸಿಕೊಳ್ಳದೇ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ತರುಣರು ರಾಷ್ಟ್ರ ಕಟ್ಟುವ ಶಕ್ತಿಯಾಗಿ ಬೆಳೆದು ನಿಲ್ಲಬೇಕು ಎಂದು ಹೇಳಿದರು.

ಸಮರ್ಥ ರಾಮದಾಸರು ಹಳ್ಳಿ ಹಳ್ಳಿಗಳಲ್ಲಿ ಹನುಮಾನ ಮಂದಿರಗಳನ್ನು ನಿರ್ಮಿಸುವ ಮೂಲಕ ಜನರಲ್ಲಿ ಆರೋಗ್ಯ ಮತ್ತು ರಾಷ್ಟ್ರ ರಕ್ಷಣೆಯ ಪರಿಕಲ್ಪನೆ ಮೂಡಿಸಿದ್ದರು. ಆದರೆ ಇದನ್ನು ಅರ್ಥ ಮಾಡಿಕೊಳ್ಳದ ಜನ ಬರೀ ಹನುಮಾನ ಮಂದಿರದಲ್ಲಿ ಭಕ್ತಿ ಕಾರ್ಯಕ್ರಮ ನಡೆಸಿ ಸುಮ್ಮನಾಗುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.

ಐದು ದಿನದ ಶಿಬಿರ: ದೇವರಹುಬ್ಬಳ್ಳಿ ಗ್ರಾಮದ ವಿದ್ಯಾರ್ಥಿಗಳು, ತರುಣರು ಮತ್ತು ವಯೋವೃದ್ಧರಿಗೆ ಐದು ದಿನಗಳ ಕಾಲ ಯೋಗಾಸನ, ಪ್ರಾಣಾಯಾಮ ಕುರಿತು ಶ್ರೀ ಸಿದ್ಧಶಿವಯೋಗಿಗಳಿಂದ ಸದ್ಬೋಧನೆ ಹಮ್ಮಿಕೊಳ್ಳಲಾಗಿದೆ. ಜೂ. 21ರಂದು ಗ್ರಾಮದಲ್ಲಿ ಯೋಗದಿನಾಚರಣೆ ಹಮ್ಮಿಕೊಳ್ಳಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next