Advertisement

ಬೃಂದಾವನದಲ್ಲಿ ಯೋಗಿಗಳ ಧ್ಯಾನ

06:32 PM Apr 07, 2021 | Team Udayavani |

ನ್ಯೂಜರ್ಸಿ :  ಆಧುನಿಕತೆಯ ಜಂಜಾಟದಲ್ಲಿ ಮನುಷ್ಯ ಜೀವನ ಲಂಗುಲಗಾಮಿಲ್ಲದೆ ನಾಗಾಲೋಟದಿಂದ ಸಾಗುತ್ತಿರುವಾಗ ಕೋವಿಡ್ ಎಂಬ ಮಹಾಮಾರಿ ಎಲ್ಲವನ್ನೂ ಸ್ತಬ್ಧವಾಗಿಸಿ, ಎಲ್ಲರೂ ಆರೋಗ್ಯ, ರೋಗನಿರೋಧಕತೆ, ಮಾನಸಿಕ ಶಾಂತಿಯ ಬಗ್ಗೆ ಕಾಳಜಿ ವಹಿಸುವಂತೆ ಮಾಡಿದೆ. “ಯೋಗ ಬಲ್ಲವನಿಗೆ ರೋಗ ಇಲ್ಲ’ ಎಂಬ ನಾಣ್ಣುಡಿ ಈ ಸಮಯದಲ್ಲಿ ಎಷ್ಟು ಸೂಕ್ತ ಅನ್ನಿಸುತ್ತಿದೆ ಅಲ್ಲವೇ?

Advertisement

ಪ್ರಪಂಚಕ್ಕೆ ಭಾರತದ ಅತ್ಯಮೂಲ್ಯ ಕೊಡುಗೆಯೇ ಈ ಯೋಗಪದ್ಧತಿ. ಯೋಗ ಅಂದರೆ ಎಷ್ಟೋ ಜನರು ಕೇವಲ ಆಸನ ಮಾಡುವುದು ಎಂದು ತಿಳಿದಿದ್ದಾರೆ. ನಾನು ಹಾಗೆಯೇ ಅಂದುಕೊಂಡಿದ್ದೆ. ಆದರೆ ಯೋಗದೆಡೆಗೆ ನನಗಿದ್ದ ಆಸಕ್ತಿ, ಅದರ ಬಗ್ಗೆ ತಿಳಿಯುವ ಕುತೂಹಲವನ್ನು ಇನ್ನೂ ಹೆಚ್ಚಿಸಿತು. ಕಲಿತಷ್ಟು ಮತ್ತೆ ಹೆಚ್ಚು ಕಲಿಯುವ ಹಂಬಲ ತೀವ್ರವಾಯಿತು. ಬಹುಮಂದಿ ತಿಳಿದುಕೊಂಡಿರುವಂತೆ ಯೋಗ ಕೇವಲ ಆಸನವಲ್ಲ. ಇದೊಂದು ವೈಜ್ಞಾನಿಕ ಜೀವನಶೈಲಿ. ಯೋಗ ಎಂಬ ಪದದ ಅರ್ಥ ಐಕ್ಯ ಅಥವಾ ಸಂಯೋಗ. ಮನಸ್ಸು ಹಾಗೂ ದೇಹದ ಐಕ್ಯತೆಯೇ ಯೋಗ. ಈ ಸಂಪೂರ್ಣ ಪದ್ದತಿ ನಮ್ಮ ಶಾರೀರಿಕ, ಮಾನಸಿಕ, ಬೌದ್ಧಿಕ ಹಾಗೂ ಭಾವನಾತ್ಮಕ ಸಮತೋಲನಕ್ಕೆ ಸಹಕಾರಿಯಾಗುತ್ತದೆ.

ನಮ್ಮ ದಿನನಿತ್ಯದ ಬದುಕಿನ ಅಸಮತೋಲನಕ್ಕೆ ಹಲವಾರು ಬಾಹ್ಯ ಹಾಗೂ ಆಂತರಿಕ ಪ್ರಭಾವಗಳೇ ಕಾರಣ. ಸದಾ ಒತ್ತಡ, ಭಯ, ಅಭದ್ರತೆ, ಖರ್ಚುವೆಚ್ಚಗಳು, ದೈನಂದಿನ ಕೆಲಸದ ಜವಾಬ್ದಾರಿಗಳು ಹೀಗೆ ನಾನಾ ವಿಧದ ಯೋಚನೆಗಳು ನಮ್ಮನ್ನು ಮಾನಸಿಕವಾಗಿ ಹಾಗೂ ಭಾವನಾತ್ಮಕವಾಗಿ ಕುಗ್ಗಿಸುತ್ತವೆ. ಇವೆಲ್ಲವನ್ನೂ ಸರಿದೂಗಿಸಿ, ಹಸನಾದ ಜೀವನ ನಡೆಸಲು ಯೋಗಾಭ್ಯಾಸ ನಮ್ಮ ನೆರವಿಗೆ ಬರುತ್ತದೆ. ನಿರಂತರವಾದ ಯೋಗಾಭ್ಯಾಸದಿಂದ ನಮ್ಮ ಮನಸ್ಸು, ದೇಹ ಹಾಗೂ ನಿರರ್ಥಕ ಯೋಚನೆಗಳಿಗೆ ಕಡಿವಾಣ ಹಾಕಬಹುದು. ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಮತ್ತು ಸಮಾಧಿ ಇವು ಅಷ್ಟಾಂಗ ಯೋಗದ ಎಂಟು ಸಾಧನಗಳು.  ಯೋಗಪಿತಾಮಹ ಮಹರ್ಷಿ ಪತಂಜಲಿ ತಮ್ಮ ಯೋಗಸೂತ್ರದಲ್ಲಿ ಇವುಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿದ್ದಾರೆ.

ಕೋವಿಡ್ ಮಹಾಮಾರಿಯ ಕ್ಲಿಷ್ಟಕರವಾದ ಸಮಯದಲ್ಲಿ ಬೃಂದಾವನ ಪ್ರಗತಿ ತಂಡವು ಎಲ್ಲರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು, ಮೊತ್ತಮೊದಲ ಕಾರ್ಯಕ್ರಮವನ್ನು ಆರೋಗ್ಯದ ಬಗ್ಗೆ ನಡೆಸಿಕೊಡಬೇಕೆಂಬ ಧ್ಯೇಯದಿಂದ ಎಂಟು ವಾರಗಳ ಅಷ್ಟಾಂಗ ಯೋಗ ಶಿಬಿರವನ್ನು ಜ. 16ರಿಂದ ಹಮ್ಮಿಕೊಂಡಿತು. ಬೃಂದಾವನ ಕನ್ನಡ ಕೂಟದ, ಪ್ರಗತಿ ತಂಡದ ಅಧ್ಯಕ್ಷರಾದ ಪದ್ಮಿನಿ ಹೇಮಂತ್‌ ಅವರು ಗಣೇಶ ಸ್ತುತಿಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸುತ್ತಾ ಎಲ್ಲರನ್ನೂ ಸ್ವಾಗತಿಸಿದರು. ಬಳಿಕ ವಿದ್ಯಾಮೂರ್ತಿ ಅವರು ಈ ಕಾರ್ಯಕ್ರಮದ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು.

ಯೋಗ ಮತ್ತು ಧ್ಯಾನದಲ್ಲಿ ಪರಿಣತರಾದ ಸತ್ಯಮೂರ್ತಿ ಹಾಗೂ ಜಗದೀಶ್‌ ಕಾಂತರಾಜ್‌ ಅವರು ಎಂಟು ವಾರಗಳ ಈ ಯೋಗ ಶಿಬಿರವನ್ನು ನಡೆಸಿಕೊಟ್ಟರು. ಅವರು ತಮ್ಮ ಕೌಶಲ ಮತ್ತು ಅನುಭವದಿಂದ ಯೋಗ ಹಾಗೂ ಧ್ಯಾನದ ಬಗ್ಗೆ ನಮ್ಮಲ್ಲಿ ಜಾಗೃತಿಯನ್ನು ಮೂಡಿಸಿಲು ಯಶಸ್ವಿಯಾದರು ಎಂದು ಹೇಳಿ ದರೆ ಅತಿಶಯೋಕ್ತಿಯಾಗದು.

Advertisement

ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ನಾವೆಲ್ಲರೂ ಅಷ್ಟಾಂಗ ಯೋಗದಿಂದ ಆಗುವ ಆರೋಗ್ಯ ಲಾಭಗಳು, ದಿನನಿತ್ಯ ಮನೆಯಲ್ಲೇ ಸಲಿಲವಾಗಿ ಮಾಡಬಹುದಾದ ಸುಲಭ ಆಸನಗಳು ಹಾಗೂ ಧ್ಯಾನದಿಂದ ಮನಸ್ಸಿನ ಮೇಲೆ ಆಗುವ ಪರಿಣಾಮಗಳನ್ನು ತಿಳಿದುಕೊಂಡೆವು. ಆಧುನಿಕ ತಂತ್ರಜ್ಞಾನದ ಸಹಾಯದಿಂದ ಯುಟ್ಯೂಬ್, ಫೇಸ್‌ ಬು ಕ್‌ ಜಾಣತಾಲಗಳಲ್ಲಿ ಯೋಗಶಿಬಿರದ ನೇರ ಪ್ರಸಾರವನ್ನು ಪ್ರತೀ ವಾರ, ಮನೆಯಲ್ಲಿಯೇ ಕುಳಿತು ಕುಟುಂಬದವರೊಂದಿಗೆ ಯೋಗವನ್ನು ತಿಳಿಯುವ, ಕಲಿಯುವ ಸದಾವಕಾಶವನ್ನು ಬೃಂದಾವನ ತಂಡದ ಪ್ರಶಾಂತ್‌ ಮುರುಗೇಂದ್ರಪ್ಪ ಅವರು ಕಲ್ಪಿಸಿದ್ದರು.

ಪ್ರತೀ ವಾರ, ಪ್ರಗತಿ ತಂಡದ ಇ-ಮೇಲ್‌, ವಾಟ್ಸ್‌ ಆ್ಯ ಪ್‌ ಸಂದೇಶಗಳಿಗೆ ಕಾಯುವಷ್ಟು ಚೆನ್ನಾಗಿತ್ತು ಎಂಟು ವಾರಗಳ ಈ ಯೋಗ ಶಿಬಿರ. ಮುಂದೇನು ಕಲಿಯಲು ಸಿಗಬಹುದು ಅನ್ನೋ ಕುತೂಹಲ ನಮ್ಮದಾಗಿತ್ತು. ಒಟ್ಟಾಗಿ ಹೇಳುವುದಾದರೆ ಒಬ್ಬ ಪಳಗಿದ ಯೋಗಿಗೆ ಅಥವಾ ಯೋಗ ಪ್ರಪಂಚಕ್ಕೆ ಅಂಬೆಗಾಲಿಡುತ್ತಿರುವ ಹೊಸ ಯೋಗಿಗಳಿಗೆ ಒಂದಲ್ಲ ಒಂದು ರೀತಿಯಲ್ಲಿ ಯೋಗಧಾರೆಯನ್ನು ಪಸರಿಸಿದ ಶಿಬಿರ ಇದಾಗಿತ್ತು.  ಮುಂದಿನ ವಾರಗಳಲ್ಲಿ ಇದೇ ರೀತಿ ಆರೋಗ್ಯಕ್ಕೆ ಸಂಬಂಧಿಸಿದ ಹಲವು ಕಾರ್ಯಕ್ರಮಗಳನ್ನು ನಮ್ಮೆಲ್ಲರ ಮುಂದೆ ತರುವ ಸಿದ್ಧತೆಗಳನ್ನು ಪ್ರಗತಿ ತಂಡವು ಮಾಡುತ್ತಿದೆ. ಜೀವನದಲ್ಲಿ ಧನಾತ್ಮಕ ಬದಲಾವಣೆ ತರುವ ಈ ರೀತಿಯ ಆರೋಗ್ಯ ಸಂಬಂಧಿ ಕಾರ್ಯಕ್ರಮಗಳಿಗೆ ಎಲ್ಲರೂ ಕಾತರದಿಂದ ಕಾಯುವಂತಾಗಿದೆ.

ಹೆಚ್ಚಿನ ಮಾಹಿತಿಗಾಗಿ aarogya.brindavanagmail.com ಅನ್ನು ಮೂಲಕ ಸಂಪರ್ಕಿಸಬಹುದು.

 

ಹೇಮಾ ಸುನಿಲ್‌

Advertisement

Udayavani is now on Telegram. Click here to join our channel and stay updated with the latest news.

Next