Advertisement

Yettinahole Plan: ರೈತರಿಗಿಲ್ಲ ಭೂ ಪರಿಹಾರ

03:21 PM Aug 29, 2024 | Team Udayavani |

ತುಮಕೂರು: ರೈತರನ್ನು ಸರ್ಕಾರಿ ಕಚೇರಿಗೆ ಅಲೆಸ ಬೇಡಿ, ಅವರ ಕೆಲಸವನ್ನು ತಕ್ಷಣ ಮಾಡಿ ಕೊಡಿ ಎಂದು ಉನ್ನತ ಅಧಿಕಾರಿಗಳು, ರಾಜಕಾರಣಿಗಳು ಸಭೆಗಳಲ್ಲಿ ಹೇಳಿದ್ದೇ, ಹೇಳಿದ್ದು. ಆದರೆ, ಭೂಸ್ವಾಧೀನವಾದ ಜಮೀನಿಗೆ ಪರಿಹಾರ ಹಣಕ್ಕಾಗಿ ರೈತರು ಕಚೇರಿಗೆ ಅಲೆಯುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ!

Advertisement

ತುಮಕೂರು ಜಿಲ್ಲೆಯಲ್ಲಿ ಹಲವು ಯೋಜನೆಗಳಿಗಾಗಿ ಕಾಮಗಾರಿಗಳು ಆರಂಭವಾಗಿವೆ. ತಾತ, ಮುತ್ತಾತನ ಕಾಲದಿಂದಲೂ ಉಳುಮೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಜಮೀನುಗಳನ್ನು ಸರ್ಕಾರಕ್ಕೆ ಬಿಟ್ಟು ಕೊಟ್ಟ ರೈತರು, ಇಂದಿಗೂ ಪರಿಹಾರ ಹಣಕ್ಕಾಗಿ ಪರಿತಪಿಸುತ್ತಿರುವುದು ಸುಳ್ಳಲ್ಲ. ರಾಜ್ಯ ಸರ್ಕಾರ ನೀರಾವರಿ ಹಾಗೂ ಜನಸಾಮಾನ್ಯರಿಗೆ ಸಮರ್ಪಕ ಕುಡಿಯುವ ನೀರು ಒದಗಿಸಲು ಎತ್ತಿನ ಹೊಳೆ ನೀರಾವರಿ ಯೋಜನೆಯನ್ನು ರೂಪಿಸಿದೆ.

ಈ ಮೂಲಕ ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ನೀರು ಹರಿಸುವ ಮಹತ್ವಾಕಾಂಕ್ಷೆ ಹೊಂದಿದ್ದು ಕಾಮಗಾರಿ ಪ್ರಗತಿಯಲ್ಲಿದೆ. ಈ ಯೋಜನೆಗೆ ರೈತರು ತಮ್ಮ ಹೊಲ, ತೋಟ, ಗದ್ದೆಗಳನ್ನು ಬಿಟ್ಟು ಕೊಟ್ಟಿದ್ದಾರೆ. ಹೀಗೆ ಭೂಮಿ ಕಳೆದುಕೊಂಡಿರುವ ಜಿಲ್ಲೆಯ ತಿಪಟೂರು ತಾಲೂಕಿನ ಕೆಲ ಗ್ರಾಮಗಳ ರೈತರಿಗೆ ಎತ್ತಿನಹೊಳೆ ಬಿಸಿತುಪ್ಪವಾಗಿದೆ. 2019ಕ್ಕೇ ಸದರಿ ಯೋಜನೆ ಕಾಮಗಾರಿ ಮುಗಿದು ಯೋಜನೆಯ ಸಂಪೂರ್ಣ ವ್ಯಾಪ್ತಿಗೆ ನೀರು ಹರಿಯಬೇಕಿತ್ತಾದರೂ, ಸರ್ಕಾರಗಳ ಬದಲಾವಣೆ, ನಿರಾಸಕ್ತಿ, ತಾಂತ್ರಿಕ ಕಾರಣಗಳಿಂದ ಕಾಮಗಾರಿ ಸರಿಯಾಗಿ ನಡೆಯುತ್ತಿಲ್ಲ ಎನ್ನುವ ಆರೋಪ ಕೇಳಿ ಬರುತ್ತಿದೆ.

ಭೂಸಂತ್ರಸ್ತರ ಗೋಳು: ಎತ್ತಿನಹೊಳೆ ಯೋಜನೆಗೆ ತಿಪಟೂರು ತಾಲೂಕಿನಲ್ಲಿ ನೂರಾರು ಎಕರೆ ಉತ್ತಮ ಗುಣಮಟ್ಟದ ರೈತರ ಕೃಷಿ ಜಮೀನು ಬಳಕೆಯಾಗು ತ್ತಿವೆ. ಆದರೆ ಕಳೆದ 3-4ವರ್ಷಗಳ ಹಿಂದೆ ಕಾಮಗಾರಿಗೆ ಅವಶ್ಯವಿರುವ ಜಮೀನುಗಳನ್ನು ಸರ್ಕಾರದ ಪರವಾಗಿ ಖಾಸಗಿ ಕಂಪನಿಯೊಂದು ಗುರ್ತಿಸಿತ್ತು. ನಂತರ ಸರ್ವೇ ಇಲಾಖೆ ಭೂಸ್ವಾಧೀನವಾಗುವಷ್ಟು ಜಮೀನುಗಳ ವಿಸ್ತೀರ್ಣ ಗುರ್ತಿಸಿ ಗುರುತು ಮಾಡ ಲಾಗಿತ್ತು. ಇದಾದ ಬಳಿಕ ರೈತರಿಗೆ ನೋಟಿಸ್‌ ನೀಡಿ ಯಾವುದೇ ಕಾರಣಕ್ಕೂ ಜಮೀನು ಮಾರಾಟ ಅಥವಾ ಅವುಗಳ ಹಕ್ಕುಗಳನ್ನು ಬದಲಾಯಿಸಬಾರದು ಎಂದು ತಿಳಿಸಿತ್ತು. ಆದರೆ, ಇದಾಗಿ 3ವರ್ಷಗಳೇ ಕಳೆದರೂ ಭೂಸ್ವಾಧೀನಾಧಿಕಾರಿಗಳು ಕ್ರಮ ಜರುಗಿಸದ ಕಾರಣ ಭೂಸಂತ್ರಸ್ತರು ಕಂಗಾಲಾಗಿದ್ದಾರೆ.

ಅತಂತ್ರ ಸ್ಥಿತಿ: ಸ್ವಾಧೀನವಾಗಲಿರುವ ಜಮೀನುಗಳನ್ನು ರೈತರು ಒಂದು ಕಡೆ ಮಾರಾಟ ಮಾಡಂಗಿಲ್ಲ. ಅತ್ತ ಶಾಶ್ವತ ಅಭಿವೃದ್ಧಿಗೆ ಬಂಡವಾಳವನ್ನೂ ಹಾಕುವಂತಿಲ್ಲ. ಬಹುವಾರ್ಷಿಕ ಬೆಳೆಗಳನ್ನಂತೂ ಬೆಳೆಯುವಂತಿಲ್ಲ. ಇರುವ ಬೆಳೆಗಳನ್ನು ಉಳಿಸಿಕೊಳ್ಳೋಣ ಅಂದರೆ ಇಂದೋ, ನಾಳೆಯೋ ಬೆಳೆಗಳೆಲ್ಲಾ ಯೋಜನೆ ಪಾಲಾಗುತ್ತವೆ, ಏನು ಮಾಡುವುದು ಎಂಬ ಯೋಚನೆ, ಚಿಂತೆಯಲ್ಲೇ ತಾಲೂಕಿನ ಭೂ ಸಂತ್ರಸ್ತರು ಅತಂತ್ರ ಸ್ಥಿತಿಯಲ್ಲಿದ್ದಾರೆ.

Advertisement

ಮಾರುಗೊಂಡನಹಳ್ಳಿ ರೈತರಿಗೆ ಪರಿಹಾರ ನೀಡಿಲ್ಲ : ತಿಪಟೂರು ತಾಲೂಕಿನ ಕಸಬಾ ಹೋಬಳಿ ಮಾರುಗೊಂಡನಹಳ್ಳಿ ಗ್ರಾಮದ ನಾವು ಯೋಜನೆ ಬೇಗ ಮುಗಿದು ಜನರಿಗೆ ನೀರು ಸಿಗಲೆಂಬ ಆಶಯದಿಂದ ಕೇವಲ ಬೆಳೆ ಪರಿಹಾರ ಮಾತ್ರ ಪಡೆದು ಭೂಮಿ ಬಿಟ್ಟುಕೊಟ್ಟಿದ್ದೇವೆ. ಚಾಲನ್‌ ತೆಗೆದು ಕೆಲಸ ಮುಗಿಸಲಾ ಗಿದ್ದರೂ, ಸರ್ಕಾರ ಭೂ ಪರಿಹಾರಕ್ಕೆ ನೀಡಿರುವ ಹಣದಲ್ಲಿ ಈವರೆಗೂ ನಯಾಪೈಸೆ ನೀಡಿಲ್ಲ. ಕೂಡಲೆ ಜಿಲ್ಲಾಧಿಕಾರಿಗಳು ಪರಿಹಾರ ಹಣ ಕೊಡಿಸುವ ಕೆಲಸ ಮಾಡಬೇಕೆಂದು ಈ ಮೂಲಕ ಮನವಿ ಮಾಡಿಕೊಳ್ಳುತ್ತೇನೆಂದು ಮಾರುಗೊಂಡನಹಳ್ಳಿ ಭೂ ಸಂತ್ರಸ್ತರಾದ ರಮೇಶ್‌ ಮತ್ತು ಸುರೇಶ್‌ ತಿಳಿಸಿದ್ದಾರೆ.

ಸ್ವಾಧೀನವಾದರೂ ಬೆಲೆ ನಿಗದಿ ಮಾಡಿಲ್ಲ : ಯೋಜನೆಗೆ ಒಳಪಡುವ ಭೂ ಸಂತ್ರಸ್ತ ರೈತರ ಜಮೀನುಗಳಿಗೆ ಯಾವ ಆಧಾರದಲ್ಲಿ, ಯಾವ ಲೆಕ್ಕಾಚಾರದಲ್ಲಿ ಬೆಲೆ ಕಟ್ಟಿ ಹಣ ನೀಡುವರು ಎಂಬ ಬಹುದೊಡ್ಡ ಗೊಂದಲವಿದೆ. ಜಿಲ್ಲಾಧಿಕಾರಿಗಳಾಗಲಿ, ಭೂಸ್ವಾಧೀನಾಧಿಕಾರಿಗಳಾಗಲಿ ಈವರೆಗೂ ಭೂಸಂತ್ರಸ್ತರ ಸಭೆಗಳನ್ನು ಗ್ರಾಮ ಮಟ್ಟದಲ್ಲಿ ಕರೆದು ಉತ್ತರ ನೀಡಿಲ್ಲ.

ಒಟ್ಟಾರೆ ಅಂತೆಕಂತೆಗಳ ಮಾತು ಕೇಳಿ ಜೋಪಾನ ಮಾಡಿದ್ದ ಜಮೀನುಗಳು ಎತ್ತಿನಹೊಳೆ ಯೋಜನೆಗೆ ಬಲಿಯಾಗುತ್ತಿವೆ. ಕೆಲ ರೈತರು ಗುತ್ತಿಗೆದಾರರಿಂದ ಬೆಳೆ ಪರಿಹಾರ ಮಾತ್ರ ಪಡೆದು ಯೋಜನೆ ತ್ವರಿತ ಗತಿಯಲ್ಲಿ ನಡೆಯಲಿ ಎಂದು ಭೂಮಿ ಬಿಟ್ಟುಕೊಟ್ಟಿದ್ದರೂ ಸರ್ಕಾರ ಭೂಸ್ವಾಧೀನ ಇಲಾಖೆಗೆ ನೀಡಿರುವ ಪರಿಹಾರದ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಸರ್ವೆ ಮಾಡಿದ ಭೂಮಿಯಲ್ಲಿ ಬೆಳೆ ಬೆಳೆದರೆ ಯಾವಾಗ ಬಂದು ಕೆಲಸ ಪ್ರಾರಂಭಿಸುತ್ತಾರೋ ಎಂಬ ಭಯದಲ್ಲಿ ತಿಪಟೂರು ತಾಲೂಕಿನ ರೈತರಿದ್ದಾರೆ.

ಈ ಸಂಬಂಧ ಜನಪ್ರತಿನಿಧಿಗಳ ಬಳಿ ಕೇಳಿದರೆ ಅದಕ್ಕೂ ನಮಗೂ ಸಂಬಂಧವಿಲ್ಲವೆಂಬಂತೆ ಮಾತನಾಡುತ್ತಾರೆ ಎಂಬುದು ರೈತರ ಆಕ್ರೋಶವಾಗಿದೆ.

ವಿವಿಧ ಕಾರಣಗಳಿಂದ ಎತ್ತಿನಹೊಳೆ ಯೋಜನೆಗೆ ಬೇಕಾಗಿರುವ ಜಮೀನುಗಳನ್ನು ವಿಶೇಷ ಭೂಸ್ವಾಧೀನಾಧಿಕಾರಿಗಳು, ಭೂ ಸಂತ್ರಸ್ತರಿಗೆ ಸೂಕ್ತಪರಿಹಾರ ನೀಡಿ ಬಿಡಿಸಿಕೊಂಡು ನಮ್ಮ ಇಲಾಖೆಗೆ ಹಸ್ತಾಂತರಿಸಲಾಗಿಲ್ಲ. ಅವರು ಭೂಮಿಯನ್ನು ನಮ್ಮ ಇಲಾಖೆಗೆ ಬಿಡಿಸಿಕೊಟ್ಟ ತಕ್ಷಣವೇ ಕಾಮಗಾರಿ ಆರಂಭಕ್ಕೆ ಕಾಯಲಾಗುತ್ತಿದೆ. –ಶಶಾಂಕ್‌, ಎಇಇ, ಎತ್ತಿನಹೊಳೆ ಯೋಜನೆ ಎಂಜಿನಿಯರ್‌

-ವಿಶೇಷ ವರದಿ

 

Advertisement

Udayavani is now on Telegram. Click here to join our channel and stay updated with the latest news.

Next