Advertisement

Yettinahole: ಯೋಜನೆ ತನ್ನದೆನ್ನುವ ಕಾಂಗ್ರೆಸ್‌ಗೆ ಬೌದ್ಧಿಕ ದಿವಾಳಿತನ: ಅಶೋಕ್‌

03:04 AM Sep 07, 2024 | Team Udayavani |

ಬೆಂಗಳೂರು: ಎತ್ತಿನಹೊಳೆ ಯೋಜನೆಯನ್ನು ಕಾಂಗ್ರೆಸ್‌ ಸರಕಾರ ತನ್ನದೇ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿರುವುದು ಕಾಂಗ್ರೆಸ್‌ ಪಕ್ಷದ ಬೌದ್ಧಿಕ ಹಾಗೂ ನೈತಿಕ ದಿವಾಳಿತನದ ಪ್ರತೀಕ ಎಂದು ವಿಧಾನಸಭೆಯ ವಿಪಕ್ಷ ನಾಯಕ ಆರ್‌. ಅಶೋಕ್‌ ಟೀಕಿಸಿದ್ದಾರೆ.

Advertisement

ಸಾಮಾಜಿಕ ಜಾಲತಾಣ ವೇದಿಕೆ “ಎಕ್ಸ್‌’ನಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಅವರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಸೇರಿ ಬಯಲು ಸೀಮೆ ಜಿಲ್ಲೆಗಳ ಜನರ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ 2010ರಲ್ಲಿ ಜಲ ಸಂಪನ್ಮೂಲ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಎತ್ತಿನಹೊಳೆ ಯೋಜನೆಯ ಪ್ರಸ್ತಾವನೆ ಮುಂದಿಟ್ಟಾಗ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಅದಕ್ಕೆ ತಾತ್ವಿಕ ಒಪ್ಪಿಗೆ ನೀಡಿತ್ತು.

2012ರಲ್ಲಿ ಡಿ.ವಿ. ಸದಾನಂದ ಗೌಡರು ಒಟ್ಟು 8,000 ಕೋ.ರೂ. ಮೊತ್ತದ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಿದರು. ಕೇಂದ್ರ ಸರಕಾರ ಹಾಗೂ ಇನ್ನಿತರ ಪ್ರಾಧಿಕಾರಗಳಿಂದ ಎಲ್ಲ ರೀತಿಯ ಅನುಮತಿ ಪಡೆಯಲು ಬೊಮ್ಮಾಯಿ ಕಾರಣಕರ್ತರಾಗಿದ್ದರು. ನಂತರ 2013ರಲ್ಲಿ ಅಧಿಕಾರಕ್ಕೆ ಬಂದ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ 2017ರ ವೇಳೆಗೆ ಯೋಜನೆ ಪೂರ್ಣಗೊಳಿಸುತ್ತೇವೆ ಎಂದು ಮಾತು ಕೊಟ್ಟು, ಬಯಲು ಸೀಮೆ ಜನರಿಗೆ ಮೋಸ ಮಾಡಿದರು. ಐದು ವರ್ಷ ಪೂರ್ಣಾವಧಿ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯನವರು ಈ ಯೋಜನೆ ಪೂರ್ಣಗೊಳಿಸುವ ಬದ್ಧತೆ ತೋರಲೇ ಇಲ್ಲ ಎಂದು ಟೀಕಿಸಿದರು.

ನಂತರ 2022 -23ರ ಬಜೆಟ್ ನಲ್ಲಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರ್ಕಾರ 3,000 ಕೋಟಿ ರೂಪಾಯಿ ಅನುದಾನ ನೀಡಿ ಎತ್ತಿನಹೊಳೆ ಯೋಜನೆಗೆ ವೇಗ ನೀಡಿತ್ತು. 2014ರಲ್ಲಿ 8,500 ಕೋಟಿ ರೂಪಾಯಿ ವೆಚ್ಚದಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಿದ್ದ ಯೋಜನೆಯ ವೆಚ್ಚ ಇದೀಗ 23,251 ಕೋಟಿ ರೂ.ಗೆ ಮುಟ್ಟಿದೆ. ಇದಕ್ಕೆ ಯಾರು ಕಾರಣ? 2013ರಿಂದ ಈಗ 2024ರವರೆಗೆ ಒಟ್ಟು ಸುಮಾರು 7 8 ವರ್ಷ ಕಾಂಗ್ರೆಸ್ ಪಕ್ಷವೇ ಅಧಿಕಾರದಲ್ಲಿತ್ತು, ಸುಮಾರು ಆರೂವರೆ ವರ್ಷ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಗಳಾಗಿದ್ದರು. ಈ ಯೋಜನೆ ಇಷ್ಟು ವಿಳಂಬವಾಗಲು ಯಾರು ಕಾರಣ? ಯೋಜನಾ ವೆಚ್ಚ ಆರಂಭಿಕ ಅಂದಾಜಿಗಿಂತ ಮೂರು ಪಟ್ಟು ಹೆಚ್ಚಾಗಲು ಕಾರಣ ಯಾರು? ಇಷ್ಟಾದರೂ ಕಟ್ಟ ಕಡೆಯ ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆ ಗಳಿಗೆ ಎತ್ತಿನಹೊಳೆ ನೀರು ತಲುಪುತ್ತದೆಯೋ ಇಲ್ಲವೋ ಎಂಬ ದಟ್ಟ ಅನುಮಾನ ಜನರನ್ನು ಕಾಡುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next