ಮಂಗಳೂರು: ಎತ್ತಿನ ಹೊಳೆ ಹಣ ಕೊಳ್ಳೆ ಹೊಡೆಯುವ ಯೋಜನೆಯಾಗಿದ್ದು ಜೆಡಿಎಸ್ ಅಧಿಕಾರಕ್ಕೆ ಬಂದರೆ ಅಕ್ರಮಗಳ ವಿರುದ್ಧ ಸಂಪೂರ್ಣ ತನಿಖೆ ನಡೆಸಿ ಕಠಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ನಗರದ ಸಕೀìಟ್ ಹೌಸ್‌ನಲ್ಲಿ ರವಿವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಎತ್ತಿನಹೊಳೆಯಲ್ಲಿ ನಿರೀಕ್ಷೆ ಮಾಡಿದಷ್ಟು ನೀರು ಸಿಗುವುದಿಲ್ಲ ಎಂದು ಯೋಜನೆ ಅನುಷ್ಠಾನ ಮಾಡಲು ಹೊರಟ ಸಂದರ್ಭದಲ್ಲೇ ನಾನು ಹೇಳಿದ್ದೆ. ಆಗ ಕುಮಾರಸ್ವಾಮಿ ಯೋಜನೆಗೆ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ನನ್ನ ವಿರುದ್ಧ ಟೀಕೆ ಮಾಡಲಾಗಿತ್ತು ಎಂದರು.
ಎತ್ತಿನಹೊಳೆ ಯೋಜನೆ ಬಗ್ಗೆ ಈ ಭಾಗದಲ್ಲಿ ನಡೆಯುತ್ತಿರುವ ಹೋರಾಟದ ನೇತೃತ್ವವನ್ನು ವಹಿಸಲು ಬಿಜೆಪಿಯವರಿಗೆ ನೈತಿಕ ಹಕ್ಕಿಲ್ಲ. ಈ ಯೋಜನೆಯ ಸೂತ್ರಧಾರಿ ಡಿ.ವಿ. ಸದಾನಂದ ಗೌಡ ಅವರು. ಮುಖ್ಯಮಂತ್ರಿಯಾಗಿದ್ದಾಗ ಅವರೇ 8,864 ಕೋ.ರೂ. ಯೋಜನೆ ರೂಪಿಸಿ ಸಚಿವ ಸಂಪುಟದ ಒಪ್ಪಿಗೆ ಪಡೆದು 2012ರಲ್ಲಿ ಅನುಷ್ಠಾನಕ್ಕೆ ಚಾಲನೆ ನೀಡಿದರು. ಇಂದು ಜಿಲ್ಲೆಯಲ್ಲಿ ಹೋರಾಟ ಮಾಡುತ್ತಿರುವ ದ.ಕ. ಸಂಸದರು ಆವತ್ತು ಇದನ್ನು ಯಾಕೆ ನಿಲ್ಲಿಸಲಿಲ್ಲ ಎಂದವರು ಪ್ರಶ್ನಿಸಿದರು.
ಕೋಲಾರ, ಚಿಕ್ಕಬಳ್ಳಾಪುರದ ಭಾಗದ ಜನರಿಗೆ ಕುಡಿಯುವ ನೀರು ದೊರೆಯಬೇಕು. ಎತ್ತಿನಹೊಳೆಯಿಂದ ನಿರೀಕ್ಷಿತ ನೀರು ಸಿಗಲಾರದು ಎಂಬುದು ಕೋಲಾರ ಭಾಗದ ಜನರಿಗೂ ತಿಳಿದಿದೆ. ಎತ್ತಿನಹೊಳೆ ಸಮಸ್ಯೆಗೆ ಪರಿಹಾರ ಯೋಜನೆಗಳ ಬಗ್ಗೆ ನಾವು ಚಿಂತನೆ ನಡೆಸಿದ್ದು ಜೆಡಿಎಸ್ ಅಧಿಕಾರಕ್ಕೆ ಬಂದರೆ ಇದನ್ನು ಅನುಷ್ಠಾನಗೊಳಿಸಲಾಗುವುದು. ಕೋಲಾರ, ಚಿಕ್ಕಬಳ್ಳಾಪುರ ಭಾಗದ ಜನತೆಗೆ ಶಾಶ್ವತ ನೀರಾವರಿ ಯೋಜನೆಗಳನ್ನು ರೂಪಿಸಲಾಗುವುದು ಎಂದದರು.