Advertisement
ಇನ್ನೊಂದೆಡೆ ಎತ್ತಿನಹೊಳೆ ಯೋಜನೆಯಿಂದಾಗಿ ಪಶ್ಚಿಮ ಘಟ್ಟದಲ್ಲಿ ಎಷ್ಟೊಂದು ಅರಣ್ಯ ನಾಶವಾಗುತ್ತಿದೆ, ಅದು ಭವಿಷ್ಯದಲ್ಲಿ ಅಪಾಯವುಂಟು ಮಾಡುವುದೇ ಎಂಬ ಆತಂಕ ಇತ್ತ ಪಶ್ಚಿಮ ಘಟ್ಟದ ನದಿ ಮೂಲಗಳನ್ನು ಅವಲಂಬಿಸಿಕೊಂಡಿರುವ ಕರಾವಳಿ ಭಾಗದ ಜನರಲ್ಲಿದೆ. ಒಂದು ಕಡೆ ಕುಡಿಯುವ ನೀರು ದೊರೆಯುವ ಮೂಲಕ ಬರಡು ಭೂಮಿ ಹಸನಾಗುವ ಆಶಾವಾದ ಇದ್ದರೆ ಇನ್ನೊಂದು ಕಡೆ ಫಸಲು ಭರಿತ ಭೂಮಿ ನೀರಿಲ್ಲದೆ ಬರಡಾಗುವ ಭೀತಿ ಸೃಷ್ಟಿಯಾಗಿದೆ.
Related Articles
Advertisement
ಕಳಪೆ ಕಾಮಗಾರಿಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದಂತೆ ಬಹಳಷ್ಟು ಕಡೆಗಳಲ್ಲಿ ಕಳಪೆ ಮಟ್ಟದ ಕಾಮಗಾರಿ ನಡೆಯುತ್ತಿದೆ. ಅದರಲ್ಲಿಯೂ ಡ್ಯಾಂಗಳಿಂದ ಸಕಲೇಶಪುರದ ದೊಡ್ಡನಗರದವರೆಗೆ ಅಳವಡಿಕೆಯಾಗುತ್ತಿರುವ ಪೈಪ್‌ಲೈನ್ ನೋಡುವಾಗ ಕಾಟಾಚಾರಕ್ಕೆ ಈ ಕಾಮಗಾರಿ ನಡೆಯುತ್ತಿದೆ ಎಂಬುದು ಸ್ಪಷ್ಟವಾಗುತ್ತಿದೆ. ಇಲ್ಲಿ ಒಟ್ಟು ನಾಲ್ಕು ಲೈನ್‌ಗಳಲ್ಲಿ ಸುಮಾರು 13 ಇಂಚು ಸುತ್ತಳತೆ ಪೈಪ್‌ಗ್ಳನ್ನು ಹಾಕಲಾಗುತ್ತಿದೆ. ಕೇರಿಹೊಳೆ, ಹೊಂಗದಹಳ್ಳ ಹಾಗೂ ಎತ್ತಿನಹೊಳೆ ಡ್ಯಾಂ ವ್ಯಾಪ್ತಿಯಲ್ಲಿ ಪೈಪ್ ಅಳವಡಿಸುವ ಕಾರ್ಯ ಈಗ ಭರದಿಂದ ನಡೆಯುತ್ತಿದೆ. ಗಜ ಗಾತ್ರದ ಈ ಪೈಪ್‌ಗ್ಳನ್ನು ಒಂದಕ್ಕೊಂದು ವೆಲ್ಡಿಂಗ್ ಮಾಡಿ ಜೋಡಿಸುತ್ತಿರುವುದು ನೋಡಿದರೆ, ಅದರಲ್ಲಿ ನೀರು ಹರಿಯುವ ಬಗ್ಗೆಯೇ ಅನುಮಾನ ಮೂಡುತ್ತಿದೆ. ಏಕೆಂದರೆ ಪೈಪ್‌ಗ್ಳನ್ನು ಮಣ್ಣಿನಡಿ ಮುಚ್ಚುವ ಮುನ್ನ ನೀರಿನ ಸೋರಿಕೆ ಬಗ್ಗೆ ಯಾವುದೇ ತಪಾಸಣೆ ಮಾಡುತ್ತಿಲ್ಲ. ಅಷ್ಟೇ ಅಲ್ಲ, ಹಾಕಿರುವ ಪೈಪ್‌ಗ್ಳಿಗೆ ಗಟ್ಟಿ ಅಡಿಪಾಯವೇ ಇಲ್ಲ! ಮಳೆಗಾಲದಲ್ಲಿ ಪಶ್ಚಿಮ ಘಟ್ಟದಲ್ಲಿ ಬೀಳುವ ನೀರಿನ ರಭಸಕ್ಕೆ ಮಣ್ಣಿನ ಜತೆಗೆ ಇಡೀ ಪೈಪ್‌ಗ್ಳೇ ಕೊಚ್ಚಿಕೊಂಡು ಹೋಗುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ವಿಶ್ವೇಶ್ವರಯ್ಯ ನೀರಾವರಿ ನಿಗಮದವರು ಇದ್ಯಾವುದರ ಬಗ್ಗೆಯೂ ಗಮನಹರಿಸಿದಂತಿಲ್ಲ. ಬದಲಿಗೆ ಆದಷ್ಟು ಬೇಗ ಪೈಪ್‌ಗ್ಳ ಅಳವಡಿಕೆ ಹಾಗೂ ಎತ್ತಿನಹೊಳೆ ಕಾಮಗಾರಿ ಪೂರ್ಣಗೊಳಿಸುವ ತರಾತುರಿಯಲ್ಲಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆ ವೇಳೆಗೆ ಒಂದು ಹಂತದ ಕಾಮಗಾರಿ ಮುಗಿಸಿ ಬಯಲು ಸೀಮೆ ಜಿಲ್ಲೆಗಳ ಮತದಾರರನ್ನು ಓಲೈಸುವ ಬಹುದೊಡ್ಡ ತಂತ್ರ ಈ ಇದರ ಹಿಂದೆ ಅಡಗಿರುವುದು ಸ್ಪಷ್ಟವಾಗುತ್ತಿದೆ. ಕಾಡಿಗೆ ಕಾಡೇ ನಾಶ!
ಎತ್ತಿನಹೊಳೆಯಿಂದ ಬಯಲು ಸೀಮೆ ಜಿಲ್ಲೆಗಳಿಗೆ ನೀರು ಪೂರೈಕೆ ಮೊದಲ ಆದ್ಯತೆಯಾಗಿರಬೇಕಾದರೆ ಪಶ್ಚಿಮ ಘಟ್ಟದ ಜಲ ಮೂಲಗಳಿಗೆ ಹಾಗೂ ಅರಣ್ಯ ಸಂಪತ್ತಿಗೆ ಹಾನಿಯಾಗದಂತೆ ಎಚ್ಚರದಿಂದ ಕಾಮಗಾರಿ ಕೈಗೊಳ್ಳಬೇಕಾದ ಬಹುದೊಡ್ಡ ಹೊಣೆಗಾರಿಕೆಯೂ ನೀರಾವರಿ ನಿಗಮದ ಮೇಲಿತ್ತು. ಆದರೆ ಎತ್ತಿನಹೊಳೆ ವಿಚಾರದಲ್ಲಿ ಆ ರೀತಿಯ ಕಾಳಜಿ ಅಲ್ಲಿ ಕಾಣಿಸುತ್ತಿಲ್ಲ. ಹಲವು ಕಡೆ ಅನಗತ್ಯವಾಗಿ ಮರಗಳನ್ನು ಕಡಿದು ಹಾಕಲಾಗಿದೆ. ಸೇತುವೆಗಳ ನಿರ್ಮಾಣಕ್ಕಾಗಿ ನದಿಗಳ ನೈಸರ್ಗಿಕ ಹರಿಯುವಿಕೆಯನ್ನೇ ಬದಲಿಸಲಾಗಿದೆ. ಸೌಂದರ್ಯಭರಿತ ಕಾಡು ಬುಲ್ಡೋಜರ್ ದಾಳಿಗೆ ನಡುಗುತ್ತಿದೆ. ಹೇಗಿದ್ದ ಪಶ್ಚಿಮಘಟ್ಟ ಹೇಗಾಯಿತು ಎನ್ನುವ ಉದ್ಗಾರ ಇದನ್ನು ಕಂಡಾಗ ಧ್ವನಿಸಬಹುದು. ಅಷ್ಟರ ಮಟ್ಟಿಗೆ ಕಾಡು ನಾಶವಾಗಿದೆ. ಕಣಿವೆ ಮುಚ್ಚಲು ಬೆಟ್ಟ – ಗುಡ್ಡಗಳೇ ಬಲಿ !
ಎತ್ತಿನಹೊಳೆ ಡ್ಯಾಂ ಸಮೀಪ ಒಂದು ಕಡೆ ಪೈಪ್ ಅಳವಡಿಕೆಯನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ. ಈ ಬಗ್ಗೆ ಕಾರ್ಮಿಕರಲ್ಲಿ ವಿಚಾರಿಸಿದಾಗ, ‘ನೋಡಿ ಈ ಬೆಟ್ಟದ ತುದಿಯಿಂದ ಅಲ್ಲಿ ಕಾಣುವ ಬೆಟ್ಟಕ್ಕೆ ಪೈಪ್ ಹಾಕಬೇಕಿದೆ. ಆದರೆ ಮಧ್ಯದಲ್ಲಿ ಇಷ್ಟು ದೊಡ್ಡ ಪ್ರಪಾತವಿರುವ ಕಾರಣ ಏಕಾಏಕಿ ಪೈಪ್ ಹಾಕಲು ಸಾಧ್ಯವಿಲ್ಲ. ಆದ್ದರಿಂದ ಈ ಬೆಟ್ಟದಿಂದ ಆ ಬೆಟ್ಟದ ನಡುವಣ ಪ್ರದೇಶಕ್ಕೆ ಮಣ್ಣು ತಂದು ಹಾಕಿ ಸಮತಟ್ಟುಗೊಳಿಸಬೇಕಿದೆ’ ಎಂದರು. ಹಾಗಾದರೆ ಇಷ್ಟೊಂದು ಮಣ್ಣು ಎಲ್ಲಿಂದ ತರುತ್ತೀರಿ? ಎಂಬ ಪ್ರಶ್ನೆಗೆ ಪಕ್ಕದ ಮತ್ತೂಂದು ಬೆಟ್ಟದತ್ತ ಕೈತೋರಿಸಿದರು! – ದಿನೇಶ್ ಇರಾ
– ಚಿತ್ರ: ಸತೀಶ್ ಇರಾ
ಎತ್ತಿನ ಹೊಳೆ ನೈಜ ದರ್ಶನ – 3
ಇದನ್ನೂ ಓದಿ:
►Part 1►ವೋಟ್‌ಬ್ಯಾಂಕ್‌ಗೆ ಎತ್ತಿನಹೊಳೆ ಫಲಾನುಭವಿಗಳು-ಸಂತ್ರಸ್ತರು ಬಲಿಪಶು?: //bit.ly/2rV5cex
►Part 2►ಪಶ್ಚಿಮಘಟ್ಟದೊಳಗೊಂದು ಕಾಂಕ್ರೀಟ್ ರಸ್ತೆ ಇದು ಎತ್ತಿನಹೊಳೆ ಮಹಾತ್ಮೆ: //bit.ly/2qGLP49