Advertisement

ಚಿಕ್ಕಮಗಳೂರು: ಕಾಫಿನಾಡು ಭೂಲೋಕದ ಸ್ವರ್ಗದಂತಿದ್ದು, ಪ್ರಕೃತಿ ಸೌಂದರ್ಯವನ್ನು ಸವಿಯಲು ದೇಶ- ವಿದೇಶದಿಂದ ವರ್ಷದ ಎಲ್ಲಾ ಋತುವಿನಲ್ಲೂ ಪ್ರವಾಸಿಗರು ದಂಡು ಹರಿದು ಬರುತ್ತದೆ.

Advertisement

ದಕ್ಷಿಣ ಭಾರತದ ಅತ್ಯಂತ ಎತ್ತರದ ಗಿರಿಶ್ರೇಣಿಯಾದ ಮುಳ್ಳಯ್ಯನಗಿರಿ, ಶ್ರೀಗುರು ದತ್ತಾತ್ರೇಯ ಬಾಬಾಬುಡನ್‌ ದರ್ಗಾ, ಕೆಮ್ಮಣ್ಣುಗುಂಡಿ, ಕುದುರೆಮುಖ ಸೇರಿದಂತೆ ಪರ್ವತ ಶ್ರೇಣಿಗಳು, ಜಲಪಾತಗಳು ಎಂತವರನ್ನೂ ಮೂಕವಿಸ್ಮಿತರನ್ನಾಗಿಸುತ್ತವೆ. ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಬಹುತೇಕ ಪ್ರವಾಸಿಗರು ಟ್ರಕಿಂಗ್‌ ಮಾಡಲು ಆಸಕ್ತರಾಗಿದ್ದು, ಇಲ್ಲಿ ಟ್ರಕ್ಕಿಂಗ್‌ಗೆ ವಿಫುಲವಾದ ಅವಕಾಶಗಳಿವೆ. ಅಂತಹ ಟ್ರಕ್ಕಿಂಗ್‌ಗೆ ಹೇಳಿ ಮಾಡಿಸಿದ ಪ್ರಸಿದ್ಧ ಸ್ಥಳವೇ ಎತ್ತಿನಭುಜ.

ಇದೊಂದು ರೀತಿಯಲ್ಲಿ ಟ್ರಕಿಂಗ್‌ ಪ್ರಿಯರ ಸ್ವರ್ಗದಂತಿದೆ. ಎತ್ತಿನಭುಜ ಜಿಲ್ಲೆಯ ಮೂಡಿಗೆರೆ ತಾಲೂಕಿನಿಂದ ಸುಮಾರು 35 ಕಿ.ಮೀ.ದೂರದಲ್ಲಿದ್ದು, ನಿತ್ಯ ಇಲ್ಲಿಗೆ ನೂರಾರು ನಿಸರ್ಗ ಪ್ರಿಯರು ಭೇಟಿ ನೀಡಿ ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿಯುತ್ತಾರೆ. ಪ್ರಕೃತಿ ಸೌಂದರ್ಯದೊಂದಿಗೆ ಚಾರಣಿಗರಿಗೆ ಹೇಳಿ ಮಾಡಿಸಿದ ವಿಸ್ಮಯ ಮತ್ತು ಆಕರ್ಷಕ ಕೇಂದ್ರವಾಗಿದೆ.

ಎತ್ತಿನಭುಜಕ್ಕೆ ಮೂಡಿಗೆರೆ ಪಟ್ಟಣದಿಂದ ಬೇಲೂರು ರಸ್ತೆಯಲ್ಲಿ ಸ್ವಲ್ಪ ದೂರ ಸಾಗಿ ಅಲ್ಲಿಂದ ಭೈರಾಪುರಕ್ಕೆ ನಾಣ್ಯಭೈರವೇಶ್ವರ ದೇವಸ್ಥಾನ ತಲುಪಬೇಕು. ದೇವಸ್ಥಾನದ ಬುಡದಿಂದ ಸಾಗುವ ಕಾಡುದಾರಿಯಲ್ಲಿ ಸುಮಾರು ಎರಡೂವರೆಯಿಂದ ಮೂರು ಕಿ.ಮೀ. ಸಾಗಿದರೆ ಎತ್ತಿನಭುಜಕ್ಕೆ ತಲುಪಬಹುದಾಗಿದೆ. ನಾಣ್ಯಭೈರವೇಶ್ವರ ದೇವಸ್ಥಾನದಿಂದ ಸಾಗುವ ಕಾಡುದಾರಿ ನಿಮ್ಮನ್ನು ಇನ್ನೊಂದು ಲೋಕಕ್ಕೆ ಕರೆದೊಯ್ಯುತ್ತದೆ.

ಕಡಿದಾದ ಮಣ್ಣಿನ ದಾರಿಯಲ್ಲಿ ಸಾಗುತ್ತಿದ್ದರೆ ಸುತ್ತಲೂ ಹಚ್ಚಹಸಿರಿನ ಸೊಬಗು, ಕಾಡುಪ್ರಾಣಿಗಳ ಭಯ, ಹಕ್ಕಿಗಳ ಕಲರವ ಪ್ರಕೃತಿಯ ಸೊಬಗು, ಬೋರ್ಗರೆಯುವ ನೀರಿನ ಸದ್ದು ಕಣ್ಣಿಗೆ ಇಂಪು ನೀಡುತ್ತದೆ. ಕಲ್ಲುಗಳಿಂದ ಕೂಡಿದ ಕೊರಕಲು ದಾರಿ, ಮಳೆಗಾಲದಲ್ಲಿ ದಾರಿಯುದ್ದಕ್ಕೂ ಕಾಲುಗಳಿಗೆ ಮೆತ್ತಿಕೊಳ್ಳುವ ಜಿಗಣೆ, ಅಲ್ಲಲ್ಲಿ ದಾರಿ ತಪ್ಪಿಸುವ ಕವಲುದಾರಿ ಇವೆಲ್ಲವನ್ನು ಮೀರಿ ಮುಂದೆ ಸಾಗಿದರೆ ಕಣ್ಣಿಗೆ ಎತ್ತಿನಭುಜದ ದರ್ಶನವಾಗುತ್ತದೆ.

Advertisement

ಶಿಶಿರ ಭೈರಾಪುರ ಬೆಟ್ಟಸಾಲುಗಳಲ್ಲಿ ಬರುವ ಈ ಎತ್ತಿನಭುಜ, ನೋಡಲು ಎತ್ತಿನಭುಜದ ಆಕಾರದಲ್ಲಿರುವುದರಿಂದ ಇದನ್ನು ಎತ್ತಿನಭುಜ ಎಂದು ಕರೆಯಲಾಗುತ್ತದೆ. ಎತ್ತಿನಭುಜ ಸಮೀಪಿಸುತ್ತಿದ್ದಂತೆ ಎತ್ತಿನಭುಜ ಬೆಟ್ಟದಡಿಯಿಂದ ತಲೆಎತ್ತಿ ಮುಗಿಲು ನೋಡಿದರೆ ಈ ಬೆಟ್ಟ ಆಕಾಶಕ್ಕೆ ಮುತ್ತಿಡುತ್ತಿದೆಯೋ ಏನೋ ಎಂದು ಭಾಸವಾಗುತ್ತದೆ.

ಬೆಟ್ಟದಡಿಯಿಂದ ಅರ್ಧ ಕಿ.ಮೀ. ಬೆಟ್ಟ ಏರಬೇಕು. ಅರ್ಧದಾರಿಗೆ ಸಾಗುತ್ತಿದ್ದಂತೆ ಸುತ್ತಲ ಪರ್ವತ ಶ್ರೇಣಿಗಳು ಹಚ್ಚ ಹಸಿರಿನಿಂದ ಕಂಗೊಳಿಸುವುದನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಅರ್ಧದಷ್ಟು ಬೆಟ್ಟ ಏರಲು ಅಷ್ಟು ಅಯಾಸ ಎನಿಸದಿದ್ದರೂ ಬೆಟ್ಟದ ವ್ಯೂ ಪಾಯಿಂಟ್‌ ಏರಬೇಕಾದರೆ ತ್ರಾಸದಾಯಕ ಎನಿಸುತ್ತದೆ. ಅರ್ಧಬೆಟ್ಟದಿಂದ ಅತ್ಯಂತ ಕ್ಲಿಷ್ಟಕರವಾದ ಕಾಲುದಾರಿಯಲ್ಲಿ ಸಾಗಬೇಕು. ಬೆಟ್ಟದ ತುತ್ತ ತುದಿ ಏರಬೇಕಾದರೆ ಬಂಡೆಗಳ ನಡುವೆ ಅತ್ಯಂತ ಎಚ್ಚರದಿಂದ ಎರಬೇಕು. ಎಚ್ಚರ ತಪ್ಪಿದರೆ ಅಪಾಯ ತಪ್ಪಿದ್ದಲ್ಲ. ಹೇಗೋ ಕಷ್ಟಪಟ್ಟು ಬೆಟ್ಟದ ತುತ್ತತುದಿ ಏರಿ ವ್ಯೂ ಪಾಯಿಂಟ್‌ ತಲುಪುತ್ತಿದ್ದಂತೆ ಆಯಾಸ ಕಡಿಮೆಯಾಗಿ ಅಲ್ಲಿಯ ಪ್ರಕೃತಿಯ ವೈಭವ ಮತ್ತೂಂದು ಲೋಕಕ್ಕೆ ಕರೆದೊಯ್ಯುತ್ತದೆ.

ಬೆಟ್ಟದ ತುದಿ ಏರುತ್ತಿದ್ದಂತೆ ಕಣ್ಣು ಹಾಯಿಸಿದಷ್ಟೂ ಹಚ್ಚಹಸಿರಿನ ಪರ್ವತ ಶ್ರೇಣಿಗಳ ಸಾಲು, ಅಲ್ಲಲ್ಲಿ ಬೆಳ್ಳಿಗೆರೆಯಂತೆ ಕಾಣುವ ಸಣ್ಣ ತೊರೆಗಳು, ಬೆಟ್ಟಕ್ಕೆ ಮುತ್ತಿಕ್ಕುವ ಮೋಡಗಳು, ಸುತ್ತಲೂ ಮಂಜು ಮುಸುಕಿದ ವಾತಾವರಣ, ಬೆಟ್ಟದ ತಡಿಗಳಲ್ಲಿ ಏಳುವ ಮುಗಿಲೆತ್ತರದ ಮಂಜಿನ ಸೊಬಗು ಭೂಲೋಕದ ಸ್ವರ್ಗದಂತೆ ಭಾಸವಾಗುತ್ತದೆ.

ಕರಿಗಲ್ಲಿನ ಸುಂದರಿ:

ಬೆಟ್ಟದ ತುತ್ತತುದಿ ಕರಿಬಂಡೆಗಳಿಂದ ಕೂಡಿದ್ದು, ಬೆಟ್ಟಕ್ಕೆ ಕಳಸವಿಟ್ಟಂತಿದೆ. ದೂರದಿಂದ ನೋಡಿದರೆ ಕರಿಗಲ್ಲಿನ ಸುಂದರಿಯಂತೆ ಕಂಗೊಳಿಸುತ್ತದೆ. ಕರಿಬಂಡೆಗಳ ನಡುವಿನ ಕ್ಲಿಷ್ಟ ಕಾಲುದಾರಿಯಲ್ಲಿ ಸಾಗಿದರೆ ಪ್ರಕೃತಿಯ ಸೊಬಗು ಕೈಬೀಸಿ ಕರೆಯುತ್ತದೆ. ಕಣ್ಣು ಹಾಯಿಸಿದಷ್ಟೂ ಹಚ್ಚಹಸಿರಿನ ಸೊಬಗು ಕಣ್ತುಂಬಿಕೊಂಡು ಸುಂದರ ಫೋಟೋಗಳನ್ನು ಸೆರೆ ಹಿಡಿಯಬಹುದಾಗಿದೆ.

-ಸಂದೀಪ ಜಿ.ಎನ್‌. ಶೇಡ್ಗಾರ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next