ಸಾಗರ: ಆರ್ಥಿಕವಾಗಿ ಹಿಂದುಳಿದಿರುವ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡದಿರುವ ರಾಜ್ಯ ಸರ್ಕಾರದ ಧೋರಣೆ ಖಂಡಿಸಿ ಆ.27ರ ಶುಕ್ರವಾರ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಎಬಿವಿಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಅಭಿಷೇಕ್ ಎಂ. ಶೆಟ್ಟಿ, ರಾಜ್ಯ ಸರ್ಕಾರಕ್ಕೆ ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಬಿಡುಗಡೆ ಮಾಡಬೇಕು ಎನ್ನುವ ಕನಿಷ್ಠ ಜ್ಞಾನ ಇಲ್ಲದಂತೆ ಆಗಿದೆ. ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿರುವ ಸರ್ಕಾರ ಅದಕ್ಕೆ ಹಣ ಹೊಂದಿಸುವುದು, ಸರ್ಕಾರ ಉಳಿಸಿಕೊಳ್ಳುವಲ್ಲಿಯೇ ಹೆಚ್ಚು ಆಸಕ್ತಿ ವಹಿಸುತ್ತಿರುವಂತೆ ಕಾಣುತ್ತಿದೆ. ಕಳೆದ ಒಂದು ವರ್ಷದಿಂದ ವಿದ್ಯಾರ್ಥಿ ವೇತನದಲ್ಲಿಯೆ ತಮ್ಮ ವಿದ್ಯಾಭ್ಯಾಸ ಮುಂದುವರೆಸುತ್ತಿರುವ ವಿದ್ಯಾರ್ಥಿಗಳ ಪಾಲಿಗೆ ಸರ್ಕಾರ ಶಾಪವಾಗಿ ಪರಿಣಮಿಸಿದೆ. 2022-23ನೇ ಸಾಲಿನ ವಿದ್ಯಾರ್ಥಿವೇತನ ದಿಢೀರ್ ನಿಲ್ಲಿಸಿರುವುದರಿಂದ ವಿದ್ಯಾರ್ಥಿಗಳು ಆರ್ಥಿಕ ಸಮಸ್ಯೆಯಿಂದ ವಿದ್ಯಾಭ್ಯಾಸ ಮುಂದುವರೆಸಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ ಎಂದು ದೂರಿದರು.
ಸರ್ಕಾರ ವಿದ್ಯಾರ್ಥಿವೇತನ ಕೊಡುತ್ತವೆಯೋ, ಇಲ್ಲವೋ ಎನ್ನುವುದನ್ನು ಸ್ಪಷ್ಟಪಡಿಸಬೇಕು. ವಿದ್ಯಾರ್ಥಿಗಳಿಗೆ ಮೂರು ವರ್ಷದಿಂದ ಲ್ಯಾಪ್‌ಟಾಪ್ ನೀಡಿಲ್ಲ. ಲ್ಯಾಪ್‌ಟಾಪ್ ಕೊಟ್ಟಿರುವುದು ಕಳಪೆಯಾಗಿದೆ. ಸರ್ಕಾರ ವಿದ್ಯಾರ್ಥಿಗಳ ಕಣ್ಣೊರೆಸುವ ತಂತ್ರ ಅನುಸರಿಸಬಾರದು. ನೀವು ಐದು ಗ್ಯಾರಂಟಿ ಜೊತೆ ವಿದ್ಯಾರ್ಥಿಗಳಿಗೊಂದು ಗ್ಯಾರಂಟಿ ಕೊಡಿ. ಒಂದೋ ವಿದ್ಯಾರ್ಥಿವೇತನ ತಕ್ಷಣ ಬಿಡುಗಡೆ ಮಾಡಿ, ಇಲ್ಲವೇ ಪದವಿ ಪೂರೈಸಿ ಹೊರಗೆ ಬರುವ ವಿದ್ಯಾರ್ಥಿಗಳಿಗೆ ಒಂದು ಉದ್ಯೋಗದ ಗ್ಯಾರಂಟಿ ಕೊಡಿ ಎಂದು ಒತ್ತಾಯಿಸಿದ ಅವರು, ಒಂದು ತಿಂಗಳಿನೊಳಗೆ ವಿದ್ಯಾರ್ಥಿವೇತನ ಹಾಗೂ ಲ್ಯಾಪ್‌ಟಾಪ್ ಕೊಡದೆ ಹೋದಲ್ಲಿ ಎಬಿವಿಪಿ ವತಿಯಿಂದ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಎಬಿವಿಪಿ ರಾಜ್ಯ ಸಮಿತಿ ಸದಸ್ಯ ಅಕ್ಷಯ್, ಸಾಗರ ನಗರ ಕಾರ್ಯದರ್ಶಿ ಧನ್ಯಶ್ರೀ, ಅನುಶ್ರೀ, ಅನುಷಾ, ಸಮರ್ಥ ಇನ್ನಿತರರು ಹಾಜರಿದ್ದರು.