ಪುದುಚೇರಿ: ತಮಿಳುನಾಡಿನ ಸಿಎಂ ಪಳನಿಸ್ವಾಮಿ ಸರಕಾರದ ಪರಿಸ್ಥಿತಿ ಇದೀಗ ಡೋಲಾಯಮಾನವಾಗಿದ್ದು, ಬಂಡಾಯ ಎದ್ದ ಎಐಎಡಿಎಂಕೆ ಉಪ ಪ್ರಧಾನ ಕಾರ್ಯದರ್ಶಿ ಟಿಟಿವಿ ದಿನಕರನ್ ಬಣ ಶಾಸಕರ ರೆಸಾರ್ಟ್ ವಾಸ ಮುಂದುವರಿದಿದೆ.
“ಪಳನಿಸ್ವಾಮಿ ಅವರು ಕೂಡಲೇ ಹುದ್ದೆಗೆ ರಾಜೀನಾಮೆ ನೀಡಬೇಕು. ನಮ್ಮ ಬಣದ ಕುರಿತ ಮುಂದಿನ ತೀರ್ಮಾನದ ರಿಮೋಟ್, ಜೈಲು ಸೇರಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ಮತ್ತು ದಿನಕರನ್ ಅವರ ಕೈಲಿದೆ’ ಎಂದು ಶಾಸಕರು ಬಹಿರಂಗವಾಗಿ ಹೇಳಿದ್ದಾರೆ.
ಪುದುಚೇರಿಯ ವಿಂಡ್‌ಪ್ಲೋರ್ ರೆಸಾರ್ಟ್ ಸ್ಪಾದಲ್ಲಿ ದಿನಕರನ್ ಬಣದ 19 ಶಾಸಕರು ಬೀಡುಬಿಟ್ಟಿದ್ದು, ನಂಬರ್ ಗೇಮ್ ಆರಂಭಗೊಂಡಿದೆ. ಬಹುಮತಕ್ಕೆ ಬೇಕಾಗಿರುವ 117 ಶಾಸಕರ ಬೆಂಬಲಕ್ಕಾಗಿ ಪಳನಿಸ್ವಾಮಿ ಅವರೂ ಶತಾಯಗತಾಯ ಯತ್ನ ನಡೆಸುತ್ತಿದ್ದಾರೆ.
ಪಳನಿಸ್ವಾಮಿ ಅವರು ಪಕ್ಷದವರೊಂದಿಗೆ ಸಹಕರಿಸುತ್ತಿಲ್ಲ. ಆದ್ದರಿಂದ ಅವರನ್ನು ಕೂಡಲೇ ಬದಲಾಯಿಸಬೇಕಾಗಿದೆ ಎಂದು ಎಐಎಡಿಎಂಕೆ ವಕ್ತಾರೆ ಸಿ.ಆರ್.ಸರಸ್ವತಿ ಹೇಳಿದ್ದಾರೆ. ದಿನಕರನ್ ಬೆಂಬಲಿತ ಶಾಸಕರು, ಪನ್ನೀರ್‌ಸೆಲ್ವಂ, ಪಳನಿಸ್ವಾಮಿ ಬಣ ವಿಲೀನ ಅಕ್ರಮ ಎಂದಿದ್ದು, ಶಶಿಕಲಾ ಉಚ್ಛಾಟನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಪಕ್ಷದ ಹುದ್ದೆಯಿಂದ 4 ಸಚಿವರಿಗೆ ಕೊಕ್
ಇದೇ ವೇಳೆ ದಿನಕರನ್ ಅವರು ಪಕ್ಷದ ಹುದ್ದೆಯಿಂದ ನಾಲ್ವರು ಸಚಿವರನ್ನು ವಜಾಗೊಳಿಸಿದ್ದಾರೆ. ಅವರ ಬದಲಿಗೆ ತಮ್ಮ ನಿಷ್ಠರಾದ ಶಾಸಕರನ್ನು ಹುದ್ದೆಗಳಿಗೆ ಮರುನೇಮಕ ಮಾಡಿದ್ದಾರೆ. ಈ ಬಗ್ಗೆ ಪ್ರತ್ಯೇಕ ಪ್ರಕಟಣೆ ಹೊರಡಿಸಲಾಗಿದ್ದು ಶಶಿಕಲಾ ಮತ್ತು ದಿನಕರನ್ ಒಪ್ಪಿಗೆ ಮೇರೆಗೆ ಮಾಡಲಾಗಿದೆ ಎನ್ನಲಾಗಿದೆ.