Advertisement
ಪ್ರವಾಸಿಗರ ಕಣ್ಮನಗಳಿಗೆ ಆಹ್ಲಾದ ನೀಡುವ ಜಲಪಾತಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಹಳಷ್ಟಿವೆ. ಅಂಥವುಗಳ ಪೈಕಿ ಬೆಳ್ತಂಗಡಿ ತಾಲೂಕಿನ ದಿಡುಪೆಯ ಕಾಜೂರ ಬಳಿಯ, ಮಿತ್ತಬಾಗಿಲು ಗ್ರಾಮದ ಎರ್ಮಾಯಿ ಎಂಬಲ್ಲಿ ದಟ್ಟ ಕಾನನದ ನಡುವೆ ಪ್ರಶಾಂತವಾದ ಸ್ಥಳದಲ್ಲಿದೆ ಈ ಜಲಪಾತ.
Related Articles
Advertisement
ಈ ಹೆಸರು ಬಂದದ್ದು ಹೇಗೆ ?ಏಳೂವರೆ ಹಳ್ಳ ಎಂಬ ಸ್ಥಳ ಎರ್ಮಾಯಿ ಜಲಪಾತದ ಉಗಮ ಸ್ಥಾನವಂತೆ. ಹಿಂದಿನ ಕಾಲದಲ್ಲಿ ಏಳು ಮಂದಿ ಯುವಕರು ಗದ್ದೆಯ ಉಳುಮೆಯನ್ನು ಮಾಡಿ ಉಳುಮೆಯ ಎತ್ತುಗಳನ್ನು ಈಗ ಜಲಪಾತವಿರುವ ಸ್ಥಳದಲ್ಲಿ ನಿತ್ಯ ತೊಳೆಯುತ್ತಿದ್ದರಂತೆ. ಒಂದು ದಿನ ಇದ್ದಕ್ಕಿದ್ದಂತೆ ಈ ಎತ್ತುಗಳು ಇಲ್ಲಿಂದ ಮಾಯವಾದವೆಂದು ಇಲ್ಲಿನ ಹಿರಿಯರು ಕಥೆಯೊಂದನ್ನು ಹೇಳುತ್ತಾರೆ. ಇಲ್ಲಿನ ಪ್ರಾದೇಶಿಕ ಭಾಷೆ ತುಳುವಾಗಿದ್ದು, ಎತ್ತಿಗೆ ಎರು ಎಂದು ಕರೆಯಲಾಗುತ್ತದೆ. ಆದ್ದರಿಂದ ಈ ಸ್ಥಳದಲ್ಲಿ ಎತ್ತುಗಳು ಮಾಯವಾದ ಕಾರಣದಿಂದ ಎರು ಮಾಯ ಎಂದು ಜನರು ಕರೆಯುತ್ತಿದ್ದು, ಕ್ರಮೇಣ ಜನರ ಬಾಯಿ ಮಾತಿನಲ್ಲಿ ಎರು ಮಾಯ ಸ್ಥಳವು ಎರ್ಮಾಯಿ ಎಂದು ಬದಲಾಯಿತೆಂದು ಸ್ಥಳ ಪುರಾಣ ತಿಳಿಸುತ್ತದೆ. ಈ ಜಲಪಾತ ಹಾಗೂ ಸುತ್ತಮುತ್ತಲ ಪ್ರದೇಶವೇ ವಿಭಿನ್ನವಾಗಿವೆ. ಭೋರ್ಗರೆವ ಜಲಪಾತ ಒಂದೆಡೆಯಾದರೆ, ಹಚ್ಚ ಹಸುರಿನಿಂದ ಕಂಗೊಳಿಸುವ ಕಾಡು ಹಾಗೂ ಹಚ್ಚ ಹಸುರಿನ ತೋಟಗಳು ಇನ್ನೊಂದೆಡೆ. ಈ ಜಲಪಾತವು ಪಟ್ಟಣದಿಂದ ಬಲು ದೂರದಲ್ಲಿ ಇರುವುದರಿಂದ, ಜಲಪಾತಕ್ಕೆ ಸಮೀಪದಲ್ಲಿ ಯಾವುದೇ ಹೊಟೇಲ್‌ಗಳಿಲ್ಲ. ಆದ್ದರಿಂದ, ಇಲ್ಲಿಗೆ ಬರುವ ಪ್ರವಾಸಿಗರು ಉಜಿರೆ ಅಥವಾ ಸೋಮಂತಡ್ಕ ಪಟ್ಟಣದಿಂದಲೇ ಊಟ- ತಿಂಡಿ ಕಟ್ಟಿಕೊಂಡು ಬರಬೇಕು. ಬೆಟ್ಟದ ತಪ್ಪಲಲ್ಲಿ ಈ ಜಲಪಾತವಿರುವುದರಿಂದ ವರ್ಷವಿಡೀ ತುಂಬಿ ಧುಮುಕುತ್ತದೆ. ಇಲ್ಲಿಗೆ ಸಾಗುವ ದಾರಿಯಲ್ಲಿ ಜಿಗಣೆಗಳು ಶತ್ರುವಿನಂತೆ ಪ್ರವಾಸಿಗರನ್ನು ಕಾಡುವುದರಿಂದ ಇವುಗಳಿಂದ ತಪ್ಪಿಸಿಕೊಳ್ಳಲು ಪ್ರವಾಸಿಗರು ನಶ್ಯ ಅಥವಾ ಸುಣ್ಣವನ್ನು ಕಾಲುಗಳಿಗೆ ಸವರಿಕೊಂಡು ಹೋಗುವುದು ಒಳ್ಳೆಯದು. ಇಲ್ಲಿನ ಜಲಪಾತದ ಅಕ್ಕಪಕ್ಕದ ಬಂಡೆಗಳು ಅತ್ಯಂತ ಆಳವಾಗಿ ಹಾಗೂ ಕಡಿದಾಗಿದ್ದು ನೋಡಲು ನಯನ ಮನೋಹರವಾಗಿದ್ದರೂ ಸಾವನ್ನೇ ತಮ್ಮ ಮಡಿಲಲ್ಲಿ ಬಚ್ಚಿಟ್ಟುಕೊಂಡಿವೆ ಎನ್ನಬಹುದು. ಕೌಶಲವನ್ನು ಈ ಬಂಡೆಕಲ್ಲುಗಳ ಮೇಲೆ ತೋರಲು ಹೋಗಿ, ಈ ಬಂಡೆ ಕಲ್ಲುಗಳ ಮೇಲೆ ಏರಿ ಅದೆಷ್ಟೋ ಮಂದಿ ಅಲ್ಲಿಂದ ಜಾರಿ ಕೆಳಗೆ ಬಿದ್ದು ಪ್ರಾಣಕ್ಕೆ ಸಂಚಕಾರ ಮಾಡಿಕೊಂಡ ಘಟನೆಗಳು ನಡೆದಿವೆ. ಹಾಗಾಗಿ, ಎರ್ಮಾಯಿ ಜಲಪಾತ ನೋಡಲು ಬರುವವರು ಯಾವುದೇ ಕಾರಣಕ್ಕೂ ರಭಸವಾಗಿ ಓಡಾಡಲು ಹೋಗಬಾರದು. ಜಲಪಾತದ ದಾರಿಯಲ್ಲಿ ಹೋಗುವಾಗ ಸಾಹಸ ಪ್ರದರ್ಶನಕ್ಕೆ ಮುಂದಾಗಬಾರದು. ರೂಟ್ ಮ್ಯಾಪ್
·ಮಂಗಳೂರಿನಿಂದ 81 ಕಿ.ಮೀ. ದೂರದಲ್ಲಿದೆ.
· ಉಜಿರೆಯಿಂದ ಸಾಕಷ್ಟು ಬಸ್, ಖಾಸಗಿ ವಾಹನ ಸೌಲಭ್ಯವಿ ದೆ.
· ಜಲಪಾತಕ್ಕೆ ಹತ್ತಿರದಲ್ಲಿ ಹೊಟೇಲ್ ಗಳಿಲ್ಲ.
· ಜಲಪಾತ ಸಮೀಪ ಜಾರು ಬಂಡೆ, ದಾರಿಯಲ್ಲಿ ಜಿಗಣೆ ಕಾಟವಿದ್ದು ಎಚ್ಚರಿಕೆ ಅಗತ್ಯ. ಸಂತೋಷ್ ರಾವ್ ಪೆರ್ಮುಡ