ಉಳ್ಳಾಲ: ವೈದ್ಯಕೀಯ ಶಿಕ್ಷಣಕ್ಕೆ ಮತ್ತೂಂದು ಹೆಸರು ಎಂಬಂತೆ ಯೇನಪೊಯ ವಿಶ್ವವಿದ್ಯಾನಿಲಯ ಬೆಳೆದು ನಿಂತಿದೆ. 1992ರಲ್ಲಿ ಒಂದು ಖಾಸಗಿ ದಂತ ವೈದ್ಯಕೀಯ ಕಾಲೇಜು ಆಗಿ ಸ್ಥಾಪನೆಗೊಂಡ ಈ ಸಂಸ್ಥೆ ಇಂದು 9 ವಿಷಯಗಳಲ್ಲಿ 57 ಸ್ನಾತಕೋತ್ತರ ಪದವಿಗಳನ್ನು ನೀಡುವ ಬೃಹತ್ ವಿ.ವಿ.ಯಾಗಿ ಬೆಳೆಯುವ ಮೂಲಕ ಯೇನಪೊಯ ಸಂಸ್ಥೆಯ ಹುಟ್ಟಿಗೆ ಕಾರಣರಾದ ದಿ| ಯೇನಪೊಯ ಮೊದಿನ್ ಕುಂಞಿ ಅವರ ಕನಸು ಇಲ್ಲಿ ಸಾಕಾರಗೊಂಡಿದೆ ಎಂದು ಎಂಫಾರ್ ಗ್ರೂಪ್‌ನ ಅಧ್ಯಕ್ಷ ಡಾ| ಪಿ. ಮಹಮ್ಮದ್ ಅಲಿ ಅಭಿಪ್ರಾಯಪಟ್ಟರು. ಅವರು ದೇರಳಕಟ್ಟೆಯ ಯೇನಪೊಯ ವಿ.ವಿ. ಕ್ಯಾಂಪಸ್‌ನ ಯೆನ್‌ಡ್ಯೂರೆನ್ಸ್ ಸಭಾಂಗಣದಲ್ಲಿ ಸೋಮವಾರ ನಡೆದ ಯೇನಪೊಯ ದಂತ ವೈದ್ಯಕೀಯ ಕಾಲೇಜಿನ ಬೆಳ್ಳಿಹಬ್ಬ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಎಲ್ಲರಿಗೂ ವೈದ್ಯಕೀಯ ಶಿಕ್ಷಣವನ್ನು ಒದಗಿಸಬೇಕೆಂಬ ದಿ| ಯೇನಪೊಯ ಮೊದಿನ್ ಕುಂಞಿ ಅವರ ಚಿಂತನೆ ಮನಸ್ಸಲ್ಲಿ ಮೂಡಿದ ಸಮಯದಲ್ಲಿ ಹಿಂದುಳಿದ ವರ್ಗಗಳ ಹೆಣ್ಮಕ್ಕಳು ಮುಖ್ಯ ವಾಗಿ ಮುಸ್ಲಿಂ ಹೆಣ್ಮಕ್ಕಳು ಇಂತಹ ಉನ್ನತ ಶಿಕ್ಷಣದಿಂದ ವಂಚಿತ ರಾಗಿ ದ್ದರು. ಆದರೆ ತಂದೆಯ ಕನಸನ್ನುಸಾಕಾರ ಮಾಡುವ ನಿಟ್ಟಿನಲ್ಲಿ ಪ್ರಾರಂಭಗೊಂಡ ದಂತಶಿಕ್ಷಣ ಇಂದು 25 ವರ್ಷದ ಆಚರಣೆಯೊಂದಿಗೆ, ವೈದ್ಯಕೀಯ ಶಿಕ್ಷಣದ ಮೂಲಕ ಇಂದು ಯೇನಪೊಯ ವೈದ್ಯಕೀಯ ಕಾಲೇಜು ಸಾಕ್ಷಿಯಾಗಿದ್ದು, ಮುಸ್ಲಿಂ ಸಮುದಾಯವನ್ನು ವೈದ್ಯಕೀಯ ಶಿಕ್ಷಣ ಪಡೆಯುವಂತೆ ಪ್ರೇರೇಪಿಸಿದೆ ಎಂದರು.
ಮುಂಬಯಿಯ ಟಾಟಾ ಮೆಮೋರಿಯಲ್ ಆಸ್ಪತ್ರೆಯ ತಲೆ ಮತ್ತು ಕುತ್ತಿಗೆ ಶಸ್ತ್ರಚಿಕಿತ್ಸಾ ವಿಭಾಗ ಮುಖ್ಯಸ್ಥ ಡಾ| ಅನಿಲ್ ಡಿ. ಕ್ರೂಝ್ ಮಾತನಾಡಿ, 20-30 ವರ್ಷಗಳ ಹಿಂದೆ ಕ್ಯಾನ್ಸರ್ ರೋಗ ಸಮಾಜದಲ್ಲಿ ಕಡಿಮೆ ಪ್ರಮಾಣದಲ್ಲಿತ್ತು. ಆದರೆ ಇದೀಗ ಶೇ. 25 ರಷ್ಟು ಮಂದಿ ಬಾಯಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಇದನ್ನು ನಿಯಂತ್ರಿಸಲು ದಂತ ಚಿಕಿತ್ಸಾ ವಿಭಾಗದವರು ಕಾರ್ಯಾಚರಿಸಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಯೇನಪೊಯ ಅಬ್ದುಲ್ಲ ಕುಂಞಿ ಮಾತನಾಡಿ, ಯೇನಪೊಯ ದಂತ ವೈದ್ಯಕೀಯ ಕಾಲೇಜಿನಿಂದ ಯೇನಪೊಯ ವಿಶ್ವವಿದ್ಯಾನಿಲಯವರೆಗಿನ ವೈದ್ಯಕೀಯ ಶಿಕ್ಷಣ ಕ್ಷೇತ್ರದ ಪ್ರಯಾಣ ಸಾಂಘಿಕ ಪ್ರಯತ್ನದಿಂದಾಗಿ ಯಶಸ್ಸು ಸಾಧ್ಯವಾಗಿದೆ ಎಂದರು. ಯೇನಪೊಯ ವಿವಿ ಉಪ ಕುಲಪತಿ ಡಾ| ಎಂ. ವಿಜಯ ಕುಮಾರ್, ಯೇನಪೊಯ ಸಮೂಹ ಸಂಸ್ಥೆಗಳ ಅಧ್ಯಕ್ಷ ಯೇನಪೊಯ ಮಹಮ್ಮದ್ ಕುಂಞಿ, ಟ್ರಸ್ಟಿಗಳಾದ ಡಾ| ಸಿ.ಪಿ. ಹಬೀಬ್ ರೆಹಮಾನ್, ಕೆ. ಖಾಲಿದ್ ಬಾವಾ, ಯೇನಪೊಯ ವಿವಿ ಆಡಳಿತ ಮಂಡಳಿ ಸದಸ್ಯ ಡಾ| ವೇದಪ್ರಕಾಶ್ ಮಿಶ್ರಾ ಉಪಸ್ಥಿತರಿದ್ದರು.
ಸಮ್ಮಾನ: ಯೇನಪೊಯ ದಂತ ಕಾಲೇಜಿನ ಶೈಕ್ಷಣಿಕ ಮಂಡಳಿಯಲ್ಲಿ ಸೇವೆ ಸಲ್ಲಿಸಿದ್ದ ಸ್ಥಾಪಕ ಡೀನ್ ಡಾ| ಎನ್. ಶ್ರೀಧರ್ ಶೆಟ್ಟಿ, ದಂತ ವೈದ್ಯಕೀಯ ಕಾಲೇಜಿನ ಸ್ಥಾಪಕ ಡೀನ್ ಡಾ| ಥೋಮಸ್ ಚಾಕೋ ಟೆಲ್ಲಿ, ಡಾ| ಬಿ.ಎಚ್. ಶ್ರೀಪತಿ ರಾವ್, ಡಾ| ಅಖ್ತರ್ ಹುಸೈನ್, ಡಾ| ಬಿ.ಆರ್.ಆರ್. ವರ್ಮಾ ಅವರನ್ನು ಸಮ್ಮಾನಿಸಲಾಯಿತು. ಪ್ರಾಂಶುಪಾಲ ಪ್ರೊ| ಬಿ.ಎಚ್. ಶ್ರೀಪತಿ ರಾವ್ ಸ್ವಾಗತಿಸಿದರು. ಉಪಪ್ರಾಂಶುಪಾಲ ಡಾ| ಶ್ಯಾಮ್ ಭಟ್ ಮತ್ತು ಡಾ| ಗಣೇಶ್ ಶೆಣೈ ಪಂಚಮಾಲ್ ಅತಿಥಿ ಪರಿಚಯಿಸಿ ದರು. ಡಾ| ಹಸನ್ ಸರ್ಫಾರಾಜ್ ವಿವರ ನೀಡಿದರು. ಡಾ| ಅಖ್ತರ್ ಹುಸೈನ್ ದಂತ ಕಾಲೇಜಿನ ಅವಲೋಕನ ನಡೆಸಿದರು. ಡಾ| ಶ್ರೀಕುಮಾರ್ ಮೆನನ್ ವಂದಿಸಿದರು. ಫ್ರೇಝಿಯರ್ ಮಾರ್ಟಿನ್ ನಿರ್ವಹಿಸಿದರು.
25 ವರ್ಷಗಳ ಹಿಂದೆ ನಾವು ಈ ಪ್ರಯಾಣವನ್ನು ಆರಂಭಿಸಿದೆವು. ಅದೊಂದು ಪುಟ್ಟ ಹೆಜ್ಜೆ. ಆದರೆ ಅದರ ಪ್ರತಿಫಲ ಮಾತ್ರ ಎಲ್ಲರೂ ಅನುಭವಿಸುವಂಥದ್ದು. ನನಗೆ ಇದೆಲ್ಲಕ್ಕಿಂತಲೂ ಮಿಗಿಲಾಗಿ ನನ್ನ ತಂದೆ ಯೇನಪೊಯ ಮೊದಿನ್ ಕುಂಞಿ ಅವರ ಕನಸುಗಳು ನನಸಾದ ಪೂರ್ವ ಕ್ಷಣ ಮತ್ತು ಅವರ ಧ್ಯೇಯೋದ್ದೇಶಗಳನ್ನು ಪೂರ್ಣಗೊಳಿಸಲು ಸಿಕ್ಕಂಥ ಅವಕಾಶ. ಕರಾವಳಿ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ರೊಬೊಟಿಕ್ ಸರ್ಜಿಕಲ್ ಸೇವೆಯನ್ನು ನಾವು ಆರಂಭಿಸಿ ಆ ಮೂಲಕ ನೂರಕ್ಕೂ ಅಧಿಕ ಶಸ್ತ್ರಚಿಕಿತ್ಸೆಗಳನ್ನು ನಡೆಸಿದ್ದೇವೆ. ನಮ್ಮ ಮುಂದಿನ ಗುರಿ ಅತ್ಯಾಧುನಿಕ ವೈದ್ಯಕೀಯ ಸೇವೆಗಳನ್ನು ಕೈಗೆಟಕುವ ಬೆಲೆಯಲ್ಲಿ ಸಮಾಜದ ಪ್ರತಿಯೊಬ್ಬರಿಗೂ ದೊರಕುವಂತೆ ಮಾಡುವುದಾಗಿದೆ. ನಮ್ಮ ಯೋಜನೆಯ ಭಾಗವಾಗಿ ಕಿನ್ಯಾ ಪ್ರದೇಶದಲ್ಲಿ ಆಯುಷ್ ಸಂಕೀರ್ಣವನ್ನು ಸ್ಥಾಪಿಸಿ ಅಲ್ಲಿ ಎಲ್ಲ ರೀತಿಯ ಭಾರತೀಯ ವೈದ್ಯಕೀಯ ವ್ಯವಸ್ಥೆ ಒದಗಿಸುವಂತೆ ಮಾಡಲಾಗುವುದು.
– ಯೇನಪೊಯ ಅಬ್ದುಲ್ಲ ಕುಂಞಿ, ಕುಲಾಧಿಪತಿ ಯೇನಪೊಯ ವಿವಿ
ಭಾರತೀಯ ಶಸ್ತ್ರಚಿಕಿತ್ಸೆ ಪ್ರಕ್ರಿಯೆಯ ಪಿತಾಮಹ ಚರಕ ಮಹರ್ಷಿ ಅವರ ಪ್ರಕ್ರಿಯೆಗಳ ಸ್ಥಾನವನ್ನು ಇಂದು ಯಾಂತ್ರೀಕೃತ ಶಸ್ತ್ರಚಿಕಿತ್ಸೆಗಳು ತೆಗೆದುಕೊಂಡಿವೆ. ಇಂದು ಒಂದು ಕೋಣೆಯಲ್ಲಿ ಕುಳಿತು ಯಾವುದೋ ದೇಶದಲ್ಲಿ ಆಸ್ಪತ್ರೆಯಲ್ಲಿರುವ ರೋಗಿಯ ಮೇಲೆ ಆಧುನಿಕ ತಂತ್ರಜ್ಞಾನಗಳ ಮೂಲಕ ಶಸ್ತ್ರಚಿಕಿತ್ಸೆ ಮಾಡಿ ಮುಗಿಸಬಲ್ಲ. ಪುಸ್ತಕ ಕೇವಲ ತಂತ್ರಗಳನ್ನು ಕಲಿಸಿಕೊಡಬಲ್ಲುದು ಆದರೆ ನಿಖರತೆಯನ್ನು ಸಾಧಿಸಲು, ಮನೋಭೂಮಿಕೆ ಮತ್ತು ಆತ್ಮಸ್ಥೈರ್ಯವನ್ನು ಗಟ್ಟಿಗೊಳಿಸುವ ಮತ್ತು ಹೃದಯ ಮತ್ತು ಮನಸ್ಸನ್ನು ಸಿದ್ದತೆಯಲ್ಲಿಡುವ ಕಾರ್ಯವನ್ನು ವಿದ್ಯಾರ್ಥಿಗಳು ಮಾಡಬೇಕು.
– ಡಾ| ಪಿ. ಮಹಮ್ಮದ್ ಅಲಿ, ಎಂಫಾರ್ ಗ್ರೂಪ್‌ನ ಅಧ್ಯಕ್ಷ