ಮಂಗಳೂರು: ಯೇನ ಪೊಯ ವಿಶ್ವವಿದ್ಯಾನಿಲಯ ಮತ್ತು ಘಾನಾ ಗಣರಾಜ್ಯವು ಶಿಕ್ಷಣ ಮತ್ತು ಕೌಶಲ ಅಭಿವೃದ್ಧಿ, ಶೈಕ್ಷಣಿಕ ಸಹಕಾರ, ಆರೋಗ್ಯ ಸೇವೆಗಳ ವಿಸ್ತರಣೆ ಹಾಗೂ ಆರೋಗ್ಯದ ವಿಷಯದಲ್ಲಿ ಎರಡು ಕೌಂಟಿಗಳ ನಡುವಿನ ಸಂಬಂಧವನ್ನು ಬಲಪಡಿಸುವ ನಿಟ್ಟಿನಲ್ಲಿ ಒಪ್ಪಂದ ಮಾಡಿಕೊಂಡಿವೆ.
ಹೊಸದಿಲ್ಲಿಯ ಘಾನಾ ಗಣರಾಜ್ಯದ ಹೈ ಕಮಿಷನ್ ಕಚೇರಿಯಲ್ಲಿ ನಡೆದ 14ನೇ ಸಿಐಐ ಎಕ್ಸಿಮ್ ಬ್ಯಾಂಕಿನ ಭಾರತ ಮತ್ತು ಆಫ್ರಿಕಾ ನಡುವಿನ ಪಾಲುದಾರಿಕೆ ಯೋಜನಾ ಸಮಾವೇಶದಲ್ಲಿ ಘಾನಾ ಆರೋಗ್ಯ ಸೇವೆಯ ಪ್ರಧಾನ ನಿರ್ದೇಶಕ ಡಾ| ಆಂಟೋನಿ ನಿಸಿಯಾ ಅಸಾರೆ ಹಾಗೂ ಯೇನಪೊಯ ಕುಲಪತಿ ಡಾ| ಎಂ. ವಿಜಯ್ ಕುಮಾರ್ ಅವರು ತಿಳುವಳಿಕೆ ಪತ್ರಕ್ಕೆ ಸಹಿ ಹಾಕಿದರು.
ಘಾನಾ ಗಣರಾಜ್ಯದ ಉಪಾಧ್ಯಕ್ಷ ಮಹಾಮುಡು ಬಾವುಮಿಯಾರ ಹಾಗೂ ಸಮೀರಾ ಬಾವುಮಿಯಾ, ಘಾನಾ ಗಣರಾಜ್ಯದ ಭಾರತೀಯ ಹೈಕಮಿಷನರ್ ಮಿಚಲ್ ನಿಯಿ ನಾರ್ಟಿ ಒಕ್ವಾಯೆ, ಎಡಿಸನ್ ಮೆನ್ಸಾ ಅಗ್ಬೆನೆಗ್ಗಾ ಮತ್ತು ಯೇನಪೋಯದ ಡಾ| ಅರುಣ್ ಭಾಗವತ್ ಮೊದ ಲಾದವರು ಉಪಸ್ಥಿತರಿದ್ದರು.
ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆ, ಆರೋಗ್ಯ ಸೇವೆ ಮತ್ತು ಕೌಶಲ ಅಭಿವೃದ್ಧಿಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ಹೆಚ್ಚಿಸುವುದು ಈ ಒಪ್ಪಂದದ ಉದ್ದೇಶ. ಆರೋಗ್ಯ ಮತ್ತು ತಾಂತ್ರಿಕ ಕ್ಷೇತ್ರಗಳ ಮೂಲಕ ವೈದ್ಯಕೀಯ ಸಾಮರ್ಥ್ಯ, ವೈದ್ಯಕೀಯ ಪ್ರವಾಸೋದ್ಯಮ, ಉಚಿತ ಶಿಶು ವೈದ್ಯಕೀಯ ಆರೈಕೆ, ಅಧ್ಯಾಪಕ ಹಾಗೂ
ವಿದ್ಯಾರ್ಥಿಗಳ ವಿನಿಮಯ ಮತ್ತು ಉತ್ಕೃಷ್ಟತೆಗಾಗಿ ಜಂಟಿ ಕೇಂದ್ರಗಳ ಸ್ಥಾಪನೆ, ಘಾನಾದಲ್ಲಿ ಸಂಶೋಧನೆ ಮತ್ತು ತರಬೇತಿ ಕೇಂದ್ರ ಸ್ಥಾಪನೆ, ವೈದ್ಯಕೀಯ ತಂತ್ರಜ್ಞಾನ ಮತ್ತು ಉದ್ಯಮಶೀಲತೆ ಅಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿಸುವುದು ಇದರಲ್ಲಿ ಒಳಗೊಂಡಿದೆ.
ಯೇನಪೊಯ ವಿ.ವಿ. ಸಹಾಯಕ ಕುಲಪತಿ ಫರ್ಹಾದ್ ಯೇನಪೊಯ ಅವರಿಗೆ ಆರೋಗ್ಯ ಕ್ಷೇತ್ರದಲ್ಲಿ ಸಾಧನೆ ಗೌರವಿಸಿ ಪ್ರಶಸ್ತಿ ನೀಡಲಾಯಿತು.