ಅಡೆನ್: ಕೊಲ್ಲಿ ರಾಷ್ಟ್ರವಾಗಿರುವ ಯೆಮೆನ್‌ನಲ್ಲಿ ಇದೀಗ ಮೊದಲ ಕೋವಿಡ್ ಪೊಸಿಟಿವ್ ಪ್ರಕರಣ ವರದಿಯಾಗಿದೆ. ನಿಜಕ್ಕಾದರೆ ಇದು ತುಸು ನೆಮ್ಮದಿ ನೀಡುವ ವಿಷಯವಾಗಬೇಕಿತ್ತು. ಏಕೆಂದರೆ ಅಮೆರಿಕವೂ ಸೇರಿದಂತೆ ಜಗತ್ತಿನ ಘಟಾನುಘಟಿ ದೇಶಗಳೇ ಕೋವಿಡ್ ವೈರಾಣುವಿನ ವಿರುದ್ಧ ಹೋರಾಡಲಾಗದೆ ಪರಿತಪಿಸುತ್ತಿವೆ. ಸುಮಾರು 200 ದೇಶಗಳಲ್ಲಿ ಕೋವಿಡ್ ತಾಂಡವವಾಡುತ್ತಿದೆ. ಹೀಗಿರುವಾಗ ಯೆಮೆನ್‌ನಂಥ ದೇಶ ಕೋವಿಡ್ ಅನ್ನು ಇಷ್ಟು ಸಮಯ ತಡೆ ಹಿಡಿದದ್ದೇ ಒಂದು ಸಾಧನೆಯಾಗಬೇಕಿತ್ತು. ಆದರೆ ಅಲ್ಲಿನ ಪರಿಸ್ಥಿತಿ ಹಾಗಿಲ್ಲ. ಹೀಗಾಗಿ ಒಂದು ಪೊಸಿಟಿವ್ ಪ್ರಕರಣ ವರದಿಯಾಗುತ್ತಿರುವಂತೆ ಆ ದೇಶ ಕಂಗಾಲಾಗಿದೆ.
ಯೆಮೆನ್‌ನಲ್ಲಿ ಇಲ್ಲಗಳ ಸರಮಾಲೆಯೇ ಇದೆ. ಎಲ್ಲ ಬಿಟ್ಟು ಇಂಥ ಬಿಕ್ಕಟ್ಟನ್ನು ಎದುರಿಸಲು ಸಶಕ್ತವಾಗಿರುವ ಒಂದು ಸರಕಾರವೂ ಅಲ್ಲಿಲ್ಲ. ಈಗ ಆಡಳಿತ ನಡೆಸುತ್ತಿರುವುದು ಅಂತಾರಾಷ್ಟ್ರೀಯವಾಗಿ ಮಾನ್ಯತೆ ಪಡೆದಿರುವ ಒಂದು ತಾತ್ಕಾಲಿಕ ಸರಕಾರ.
ಯೆಮೆನ್‌ನ ಈ ಸ್ಥಿತಿಗೆ ಕಾರಣ ವರ್ಷಾನುಗಟ್ಟಲೆ ಅದು ಹೌತಿ ಬಂಡುಕೋರರ ನಡೆಸಿದ ಉಗ್ರ ಕಾಳಗ. ಈ ಕಾಳಗದಿಂದ ಯೆಮೆನ್‌ನ ಆರೋಗ್ಯ ವಲಯ ಸಂಪೂರ್ಣ ನೆಲಕಚ್ಚಿ ಹೋಗಿದೆ. ಕೋವಿಡ್ ಬಿಡಿ ಸರಿಯಾದ ಒಂದು ಜ್ವರಕ್ಕೆ ಚಿಕಿತ್ಸೆ ನೀಡುವಷ್ಟು ಒಳ್ಳೆಯ ಆಸ್ಪತ್ರೆಯೂ ಅಲ್ಲಿಲ್ಲ. ಹೀಗೆ ಯಾವ ವೈದ್ಯಕೀಯ ಸೌಲಭ್ಯವೂ ಇಲ್ಲದಿರುವುದರಿಂದ ಅಲ್ಲಿನ ಆರೋಗ್ಯ ಕಾರ್ಯಕರ್ತರು ಮತ್ತು ವೈದ್ಯರು ಕೋವಿಡ್ ಬಂತು ಎಂಬ ಸುದ್ದಿ ಕೇಳಿ ಭಯದಿಂದ ನಡುಗುತ್ತಿದ್ದಾರೆ. ಏಕೆಂದರೆ ಕೋವಿಡ್‌ಗೆ ಮೊದಲ ಮುಖಾಮುಖೀಯಾಗಬೇಕಾದದ್ದೇ ಅವರು. ತಮ್ಮನ್ನೇ ರಕ್ಷಿಸಿಕೊಳ್ಳಲು ಸಾಕಷ್ಟು ಸೌಲಭ್ಯ ಇಲ್ಲದ ದೇಶದ ವೈದ್ಯರು ರೋಗಿಗಳನ್ನು ಹೇಗೆ ರಕ್ಷಿಸಿಯಾರು?
ಯೆಮೆನ್‌ನ ಹೆಚ್ಚಿನ ಆಸ್ಪತ್ರೆಗಳು ಹೌತಿ ಬಂಡುಕೋರರ ಜತೆಗಿನ ಹೋರಾಟದ ಪರಿಣಾಮವಾಗಿ ನಾಶವಾಗಿವೆ ಇಲ್ಲವೆ ಮುಚ್ಚಿವೆ. ಈ ದೇಶದ ಜನರಿಗೆ ಈಗ ಏನಿದ್ದರೂ ವಿಶ್ವಸಂಸ್ಥೆಯೊಂದೇ ಅಭಯದಾತ. ಅಲ್ಲಿಂದ ಏನಾದರೂ ಬಂದರೆ ಜನರು ಉಳಿದಾರು. ಇಲ್ಲದಿದ್ದರೆ ದೇವರೇ ಗತಿ ಎಂಬ ಸ್ಥಿತಿ.
ಕಡು ಬಡತನ, ಕುಡಿಯುವ ನೀರಿನ ಭಾರೀ ಕೊರತೆ, ನೈರ್ಮಲ್ಯದ ಕೊರತೆ, ಔಷಧಿಗಳ ಕೊರತೆ ಹೀಗೆ ಹತ್ತಾರು ಸಮಸ್ಯೆಗಳ ಮಡುವಾಗಿರುವ ಯೆಮೆನ್ ಈಗಾಗಲೇ ರೋಗರುಜಿನಗಳ ಹುಲುಸು ಬೆಳೆಗೆ ಪೂರಕ ವಾತಾವರಣವನ್ನು ಹೊಂದಿದೆ. ಕೆಲವು ವರ್ಷಗಳ ಹಿಂದೆ ಕಾಲರಾ ರೋಗ ಕಾಡಿದಾಗ ಯೆಮೆನ್ ಅಕ್ಷರಶಃ ತತ್ತರಿಸಿ ಹೋಗಿತ್ತು.